ಕಾಶಿಯ ಅನುಭವ-4
ಎರಡನೇ ದಿನದಿಂದಲೇ ನಾನು ನೀರಿನಲ್ಲಿ ಬಿದ್ದರೂ ಒದ್ದೆಯಾಗದಂತೆ ಒಂದಿಷ್ಟು ಹಣವನ್ನು ಪ್ಲಾಸ್ಟಿಕ್ ಕವರ್’ನಲ್ಲಿ ಹಾಕಿಕೊಂಡು ಸೊಂಟದಲ್ಲಿ ಸಿಕ್ಕಿಸಿಕೊಳ್ಳುವುದಕ್ಕೆ ಶುರು ಮಾಡಿದ್ದೆ. ಸ್ನಾನಘಟ್ಟಗಳಲ್ಲಿ ದಾನ ಕೊಡಲಿಕ್ಕೆ, ಹೂವು ಹಣ್ಣು ಕೊಳ್ಳಲಿಕ್ಕೆ, ರಿಕ್ಷಾಗಳಲ್ಲಿ ಓಡಾಡಲಿಕ್ಕೆ ಸಾಕಾಗುವಷ್ಟು ಇಟ್ಟುಕೊಂಡಿರುತ್ತಿದ್ದೆ. ಸಂಜೆಗೆ ಹಣ ಉಳಿದರೆ ಯಾರಿಗಾದರೂ ಕೊಟ್ಟು ಪ್ರತೀ ದಿನ ಖಾಲೀ ಕೈಯಲ್ಲಿ ಕೋಣೆಗೆ ಹೋಗುತ್ತಿದ್ದೆ. ಮಧ್ಯಾಹ್ನದ ಬಿಡುವಿನಲ್ಲಿ ರಿಕ್ಷಾ ಹತ್ತಿ ಹೋಗಬೇಕೆನಿಸಿದಾಗಲ್ಲೆಲ್ಲ ಹೋಗುತ್ತಿದ್ದೆ. ಎಲ್ಲಿಗೆ ಹೋದರೂ ಕೈಯಲ್ಲಿ ಜಪಮಾಲೆ ಮತ್ತು ಬಾಯಲ್ಲಿ ತಾರಕನಾಮ ಮಾತ್ರ ನಿರಂತರ ಓಡುತ್ತಿತ್ತು. ಕೆಲವೊಮ್ಮೆ ಕಾಲ್ನಡಿಗೆಯಲ್ಲೇ ಓಡಾಡುತ್ತಿದ್ದೆ. ಚಪ್ಪಲಿ ಇಲ್ಲದೇ , ಮೈಮೇಲೆ ಅಂಗಿ ಹಾಕಿಕೊಳ್ಳದೇ ಬಿಸಿಲ ಬೀದಿಗಳಲ್ಲಿ ಸುತ್ತಿ ದಣಿವಾಗುತ್ತಿದ್ದರಿಂದ ರಾತ್ರಿ ನಿದ್ರೆ ಅದ್ಭುತವಾಗಿ ಬರುತ್ತಿತ್ತು. ಕಾಲಭೈರವನ ಗುಡಿಯ ಮುಂದೆ ಹೂವು ಮಾರುವ ಹುಡುಗ ನಿಮ್ಮ ಚಪ್ಪಲಿ ಬ್ಯಾಗು ಎಲ್ಲಾ ಅಂಗಡಿಯಲ್ಲೇ ಇಟ್ಟು ಹೋಗಿ. ಸುರಕ್ಷಿತವಾಗಿ ವಾಪಸ್ ಹೋಗುವಾಗ ಒಯ್ಯಬಹುದು ಅಂತ ಫ್ರೀ ಸರ್ವಿಸಿನ ಆಸೆ ತೋರಿಸಿ ತನ್ನ ವ್ಯಾಪಾರ ಕುದುರಿಸಲು ನೋಡಿದ. ನನ್ನ ಖಾಲಿ ಕೈಯ್ಯಿ ಮತ್ತು ಚಪ್ಪಲಿಯಿಲ್ಲದ ಬರಿಗಾಲು ತೋರಿಸಿದ ಕೂಡಲೇ ಅವನು ಪೆಚ್ಚಾದ. ಅವನೇ ಮುಂದುವರಿದು ಒಂದಷ್ಟು ಕಪ್ಪು ದಾರದ ಉಂಡೆ, ಹೂವುಗಳು, ಬತ್ತಾಸು ಒಂದು ದೀಪದ ಎಣ್ಣೆಯ ಬಾಟಲಿ ನೀಡಿದ. ಈ ಎಣ್ಣೆ ಯಾಕೆ ಅಂತ ನಾನು ಸಂಶಯಿಸುತ್ತಿರುವುದನ್ನು ನೋಡಿ ”ಬಾಬಾಜಿ ಕೊ ಚಢಾವಾ ಹೋತಾ ಹೈ” ಅಂದ. ಅದೆಲ್ಲವನ್ನೂ ಒಯ್ದು ಕಾಲಭೈರವನ ಬಳಿ ಬಾಯಲ್ಲಿ ತಂಬಾಕು ತುಂಬಿಕೊಂಡು ಕುಳಿತಿದ್ದ ಪಂಡಾನ ಕೈಯಲ್ಲಿ ಕೊಟ್ಟೆ. ಅವನು ನನ್ನ ಕೈಯಲ್ಲಿ ಎರಡು ಹೂವು ಕೊಟ್ಟು ಒಂದು ಶ್ಲೋಕ ಹೇಳಿಸಿ ಕಾಲ ಭೈರವನ ಪಾದಕ್ಕೆ ಆ ಹೂವು ಹಾಕಿಸಿದ. ನೂರರ ಒಂದು ನೋಟು ಆ ಪಂಡಾನ ಕೈಯಲ್ಲಿ ಕೊಟ್ಟು ಕಾಲಿಗೆ ಬಿದ್ದೆ. ಇದು ಸಾಕಾಗೋದಿಲ್ಲ. ”ನಿಮಗೆ ಮಂತ್ರಪೂರ್ವಕ ಪೂಜೆ ಮಾಡಿಸಿದ್ದೇನೆ. ಕನಿಷ್ಠ ಒಂದು ಸಾವಿರ ಸೇವೆ ಮಾಡು” ಅಂತ ಪಂಡಾ ರೊಳ್ಳೆ ತೆಗೆದ. ನಿಮ್ಮ ಇಡೀ ಕಾಶಿಯಲ್ಲಿ ಇರೋ ಎಲ್ಲರಿಗಿಂತ ಹೆಚ್ಚು ಮಂತ್ರಗಳು ನಂಗೆ ಬರ್ತವೆ. ಪೂರ್ತಿ ಎರಡು ವೇದಗಳನ್ನ ಅಂದ್ರೆ ಹದಿನೈದು ಸಾವಿರ ಮಂತ್ರಗಳನ್ನ ಪುಸ್ತಕ ನೋಡದೇ ಒಂದೂ ಸ್ವರ- ಉಚ್ಛಾರ ತಪ್ಪಿಲ್ದೇ ಹೇಳ್ತೀನಿ, ಕೇಳ್ತೀಯಾ? ನೀನು ಹೇಳಿಕೊಟ್ಟ ಆ ಕಾಲಭೈರವನ ಧ್ಯಾನ ಶ್ಲೋಕದಲ್ಲಿ ಎಷ್ಟು ಕಡೆ ತಪ್ಪಿದೆ ಅಂತ ಗೊತ್ತಾ ? ನೀನು ಹೇಳಿಸಿದ್ದು ಶ್ಲೋಕ. ”ಮಂತ್ರ” ಅಲ್ಲ. ಮಂತ್ರಕ್ಕೂ ಶ್ಲೋಕಕ್ಕೂ ವ್ಯತ್ಯಾಸವೇ ಗೊತ್ತಿಲ್ಲ ನಿನಗೆ.” ಅಂತ ಅವನನ್ನು ಬೈಯುವ ಆಲೋಚನೆ ಒತ್ತಿಬಂತು. ತಕ್ಷಣ ವಿವೇಕ ಜಾಗೃತವಾಗಿ ನನ್ನ ಆಲೋಚನೆಗೆ ನನ್ನನ್ನೇ ನಾನು ಬೈದುಕೊಂಡೆ. ಮೂರ್ಖತೆ ಮನಸ್ಸಿನ ಸಹಜ ಸ್ವಭಾವ. ವಿವೇಕವೇ ಕಷ್ಟಪಟ್ಟು ಗಳಿಸಿ ಆಗಾಗ ಹರಿತ ಮಾಡಿ ಇಟ್ಟುಕೊಳ್ಳಬೇಕಾದದ್ದು. ಸೊಂಟದ ಬಳಿ ಪಂಚೆಯ ಬಿಗುವಿನಲ್ಲಿ ಸಿಕ್ಕಿಸಿಕೊಂಡಿದ್ದ ದುಡ್ಡು ಹೊರತೆಗೆದು ನೋಡಿದರೆ ನೂರರ ನಾಲ್ಕೈದು ನೋಟುಗಳು ಉಳಿದಿದ್ವು. ಎಲ್ಲವನ್ನೂ ಅವನ ಕೈಗೆ ಕೊಟ್ಟು ”ವಾಪಸ್ ಹೋಗುವಾಗ ರಿಕ್ಷಾಕ್ಕೆ ಕೂಡ ಹಣ ಇಟ್ಟುಕೊಂಡಿಲ್ಲ. ಇದ್ದಿದ್ದೆಲ್ಲವನ್ನೂ ಕೊಟ್ಟೀದೀನಿ. ಈಗ ನನ್ನ ಶಕ್ತಿ ಇಷ್ಟೇ. ಆಶೀರ್ವಾದ ಮಾಡಿ” ಅಂತ ಹೇಳಿ ಕಾಲಿಗೆ ಭಕ್ತಿಯಿಂದ ನಮಸ್ಕಾರ ಮಾಡಿದೆ. ಅವನು ”ಕಲ್ಯಾಣ್ ಹೊ” ಅಂತ ಹಾರೈಸಿ ಹಣೆಗೆ ಭಂಡಾರ ಹಚ್ಚಿ ಕೈಗೆ ಕಪ್ಪು ಬಣ್ಣದ ರಕ್ಷೆಯ ದಾರ ಕಟ್ಟಿದ. ಈ ”ಕಲ್ಯಾಣ” ಅನ್ನೋ ಶಬ್ದದ ಅರ್ಥ ನೆನಪಾಗಿ ತುಟಿಯಲ್ಲಿ ನಗು ಮೂಡಿತು. ಇಷ್ಟು ಸುಲಭವಾಗಿ ಇನ್ನೊಬ್ಬರ ಹಾರೈಕೆ ಮಾತ್ರದಿಂದ ಕಲ್ಯಾಣ ಆಗುವಂತಿದ್ದರೆ ಮನುಕುಲದ ಕಲ್ಯಾಣ ಎಂದೋ ಆಗಿಹೊಗಿರುತ್ತಿತ್ತು. ನನಗೆ ಈ ತಪಸ್ಸಿನ ಅಗತ್ಯವೇ ಇರುತ್ತಿರಲಿಲ್ಲ. ಬೇರೆಯವರು ನಮಗಾಗಿ ಚಿತ್ತಶುದ್ಧಿಯಿಂದ ಮಾಡುವ ಆಶೀರ್ವಾದ ಮತ್ತು ಪ್ರಾರ್ಥನೆ ಈ ಎರಡೂ ಫಲಿಸುವುದು ನಿಜವಾದರೂ ” ಖುದ್ ಮರನೆ ತಕ್ ಖುದಾ ನಹೀ ಮಿಲತಾ” ಅನ್ನುವ ಉರ್ದೂ ಗಾದೆ ಸುಳ್ಳಲ್ಲ.
ಕಾಲ ಭೈರವನ ಗುಡಿ ಜನಜಂಗುಳಿಯಿಂದ ತುಂಬಿರಬಹುದು ಅಂತ ಊಹಿಸಿದ್ದೆ. ಆದರೆ ಒಂದಿಬ್ಬರ ಹೊರತು ಖಾಲಿ ಖಾಲಿಯಿತ್ತು. ಭೈರವನ ವಿಗ್ರಹಕ್ಕೆ ಇದ್ದಿಲಿನ ಪುಡಿಯನ್ನು ಮೈಯೆಲ್ಲಾ ಮೆತ್ತಿ ಕಣ್ಣುಗಳ ಹೊರತಾಗಿ ಮತ್ತೆಲ್ಲಾ ಕಪ್ಪಾಗಿರುವಂತೆ ಅಲಂಕಾರ ಮಾಡಿದ್ದರು. ಎದುರಿಗೆ ಒಂದು ನಂದಾ ದೀಪ ಉರಿಯುತ್ತಿತ್ತು. ಭೈರವನ ಮುಂದೆ ಕುಳಿತು ಗುರಿಯಿಲ್ಲದೇ ದಿಟ್ಟಿಸತೊಡಗಿದೆ. ಕಾಲದ ಭಯವನ್ನು ಜಯಿಸಿದವನು ಮತ್ತು ಕಾಲದ ಭಯ ನೀಗಿಸುವವನು ಕಾಲ ಭೈರವ. ಕಾಲ ಕಾಣಿಸುವುದಿಲ್ಲ. ಆದ್ದರಿಂದಲೇ ಭಯ. ಕತ್ತಲೆಯೂ ಅಷ್ಟೇ. ಎಲ್ಲಿ ಸ್ಪಷ್ಟತೆಯಿಲ್ಲವೋ ಅಲ್ಲೇ ”ಭಯ” ನಿರ್ಮಾಣ ಆಗೋದು. ಮುಂದಿನ ಕ್ಷಣ ಏನು ನಡೆಯಲಿದೆ ಅನ್ನುವ ಸ್ಪಷ್ಟತೆ ನಮಗಿಲ್ಲ. ಮುಂದಿನ ಪ್ರತೀ ಕ್ಷಣವೂ ಕತ್ತಲೆಯೇ. ಅಲ್ಲಿ ಯಾವುದೂ ನಿರ್ಧಾರಿತವಲ್ಲ. ಹಾಗಾಗಿಯೇ ಮುಂದಿನ ಕ್ಷಣದ ಸುರಕ್ಷತೆಯ ಪ್ಲಾನಿಂಗ್’ನಲ್ಲಿ ನಮ್ಮ ಜೀವನ ಸವೆಯುತ್ತಿದೆ. ಪ್ರೆಸೆಂಟ್’ನ ಅನುಭವ ಅತೀ ವಿರಳ. ದೇಹದೊಂದಿಗೆ.. ಮನಸ್ಸಿನೊಂದಿಗೆ.. ಬುದ್ಧಿಯೊಂದಿಗೆ Identify ಮಾಡಿಕೊಂಡಿರುವುದರಿಂದ ನಮಗೆ ಕಾಲದ ಭಯ. ಏಕೆಂದರೆ ಆ ಮೂರಕ್ಕೂ ಕಾಲದ limitation ಇದೆ. ಕಾಲಭೈರವನಿಗೆ ಭೂತ, ಭವಿಷ್ಯತ್ತು ವರ್ತಮಾನ ಎಂಬ ಕಾಲದ ಮೂರು ಭಾಗಗಳು ಇಲ್ಲ. ಹಾಗಾಗಿ ಭಯವೇ ಇಲ್ಲ. ಏಕೆಂದರೆ ಆ ಮೂರೂ ಕಾಲಗಳನ್ನು ಏಕಗೊಳಿಸಿ ಸ್ಥಿರಗೊಳಿಸಿ ಸಮಗ್ರವಾಗಿ ಗ್ರಹಿಸಬಲ್ಲ ಸಾಮರ್ಥ್ಯ ಗಳಿಸಿಕೊಂಡಿದ್ದಾನೆ. ಆ ಸಾಮರ್ಥ್ಯವನ್ನು ವರ್ಣಿಸಲು ಈ ಮೂರನೇ ಕಣ್ಣು ಅವನ ಹಣೆಯ ಮೇಲೆ. ಭೂತ ಭವಿಷ್ಯತ್ತು ವರ್ತಮಾನಗಳನ್ನು ಏಕವಾಗಿ ನೋಡುವ ಮೂರನೆ ಕಣ್ಣು. ಕಾಲರಹಿತ ಸ್ಥಿತಿಯ ಸೂಚಕ ಕಣ್ಣು, ಕಾಲ ಭೈರವನ ಕಣ್ಣು.
“ದ್ವಿತೀಯಾದ್ ವೈ ಭಯಂ ಭವತಿ”. ಎರಡನೇ ವ್ಯಕ್ತಿ ಅಥವಾ ಎರಡನೇ ವಸ್ತುವಿನಿಂದಲೇ ಭಯ. ತಾನಲ್ಲದ ಮತ್ತೊಂದು ಅಸ್ತಿತ್ವ ಅನುಭವಕ್ಕೆ ಬಂದಾಗಲೇ ಭಯ. ತಾನೇ ಎಲ್ಲೆಡೆ ತುಂಬಿರುವುದನ್ನು ಕಂಡವನಿಗೆ ಭಯವೇ ಇಲ್ಲ.
ಮತ್ತೊಂದು ದಿನ ಸಾಕ್ಷಿ ಗಣಪತಿ ಚೌಕ್’ನ ಬಳಿ ಬನಾರಸೀ ಶಿಲ್ಪಗಳನ್ನ, ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ದೊಡ್ಡ ಅಂಗಡಿಯಲ್ಲಿ ಕುಳಿತು ಅದರ ಮಾಲೀಕನ ಜೊತೆ ಹರಟುತ್ತಿದ್ದೆ. ”ಕರ್ನಾಟಕದ ಎಂಥೆಂಥಾ ದೊಡ್ಡ ಮನುಷ್ಯರೆಲ್ಲಾ ನಮ್ಮ ಅಂಗಡಿಯ ಗ್ರಾಹಕರು, ಇಡೀ ಭಾರತದಲ್ಲಿ ತಂಜಾವೂರು ಹೊರತುಪಡಿಸಿದರೆ ತನ್ನ ಬಳಿ ಸಿಗುವಷ್ಟು ಚೆನ್ನಾದ ಶಿಲ್ಪಗಳು ಎಲ್ಲೂ ಸಿಗುವುದಿಲ್ಲ, ನಮ್ಮಲ್ಲಿ ಅಷ್ಟು ಒಳ್ಳೆಯ ಶಿಲ್ಪಿಗಳು ಇದ್ದಾರೆ” ಅಂತ ಆತ ಹೇಳಿಕೊಳ್ಳುತ್ತಿದ್ದ. ಆತನ ಅಂಗಡಿಯಲ್ಲಿದ್ದ ಬುದ್ಧನ ಮುಖದ ಉಬ್ಬುಶಿಲ್ಪ ನಿಜಕ್ಕೂ ಅದ್ಭುತವಾಗಿತ್ತು. ತೊಗೊಂಡ್ಹೋಗಿ ಅಂತ ಅದನ್ನು ನನಗೆ ದಾಟಿಸಲಿಕ್ಕೆ ಸೇಠ್’ಜೀ ಪ್ರಯತ್ನ ಪಡುತ್ತಿದ್ದ. ಅದಕ್ಕೆ 12 ಸಾವಿರ ರೂಪಾಯಿ ಬೆಲೆ ಹೆಚ್ಚಾಯ್ತು ಅಂದಿದ್ದಕ್ಕೆ ಆತ “ಇದನ್ನು ಮಾಡಲಿಕ್ಕೆ ಎರಡೂವರೆ ತಿಂಗಳು ಸಮಯ ಹಿಡೀತದೆ. one and only piece. ಮತ್ತೆಲ್ಲೂ ಸಿಗೂದಿಲ್ಲ. ಇದನ್ನೇ ತೊಗೊಂಡ್ಹೋಗಿ ಏಸಿ ಶೋ ರೂಮ್ ನಲ್ಲಿಟ್ಟು ಮಾರಿದ್ರೆ ಒಂದು ಲಕ್ಷ ಬೆಲೆ ಆರಾಮಾಗಿ ಸಿಗುತ್ತೆ.” ಅಂತ ಜೋರು ಮಾಡಿದ. ಮಾರ್ಕೆಟಿಂಗ್ ಇಂಡಸ್ಟ್ರಿಯಲ್ಲಿ ಐದಾರು ವರ್ಷಗಳ ಅನುಭವ ಇರೋದ್ರಿಂದ ನನಗೆ ಆತನ ಮಾತು ಉತ್ಪ್ರೇಕ್ಷೆ ಅಂತೇನೂ ತೋರಲಿಲ್ಲ. ನಿಜವಾಗಿಯೂ ಅದನ್ನು ಸರಿಯಾಗಿ ಮಾರ್ಕೆಟ್ ಮಾಡಿದರೆ ಒಂದು ಲಕ್ಷ ರೂಪಾಯಿಗೆ ಮಾರಾಟವಾಗುವ ಸಾಮರ್ಥ್ಯ ಆ ಶಿಲ್ಪಕ್ಕಿದೆ. ಹಾಗಂದ ಮಾತ್ರಕ್ಕೆ ಅದನ್ನು ಖರೀದಿಸಿ ನಾನೇನು ಮಾಡ್ಲಿ. ನಾನು ಅದನ್ನು ಮಾರ್ಕೆಟ್ ಮಾಡ್ತಾ ಕೂರಲೂ ಆಗುವುದಿಲ್ಲ. ನನಗೆ ಬುದ್ಧನ ವಿಗ್ರಹ ತಂದಿಟ್ಟುಕೊಳ್ಳುವಷ್ಟು ಬೌದ್ಧಮತದಲ್ಲಿ ಆಸಕ್ತಿಯೂ ಇಲ್ಲ. “ಸೇಠ್’ಜೀ ಕುಛ್ ಔರ್ ದಿಖಾವೋ” ಅಂತ ಮಾತು ಬದಲಿಸಿ ಬೇರೆ ಒಂದಿಷ್ಟು ವ್ಯಾಪಾರ ಮಾಡಿದೆ.
ಅಷ್ಟರಲ್ಲೇ ಅರವತ್ತರ ಮೇಲ್ಪಟ್ಟ ವಯಸ್ಸಿನ ಧಡೂತಿ ಹೆಂಗಸೊಬ್ಬಳು ಪ್ರಯಾಸಪಟ್ಟು ಮೆಟ್ಟಿಲು ಹತ್ತಿಕೊಂಡು ಒಳಬಂದು ಏನೋ ಕೇಳುತ್ತಿದ್ದಳು. ಅವಳ ಭಾಷೆ ಅಂಗಡಿಯ ಯಾವ ಹುಡುಗರಿಗೂ ಅರ್ಥವಾಗದೇ ಆಕೆಯನ್ನು ಮಾಲೀಕನ ಬಳಿ ಕರೆತಂದು ಬಿಟ್ಟು ಹೋದರು. ಆತ ನನ್ನ ಕಡೆಗೆ ನೋಡಿ, “ಪಂಡಿತ್’ಜೀ.. ಈಯಮ್ಮನಿಗೆ ಏನು ಬೇಕು ಅಂತ ಕೇಳೀ, ಮದ್ರಾಸಿ ನಮಗೆ ಬರೋದಿಲ್ಲ” ಅಂದ. ಆಕೆ ಏದುಸಿರು ಬಿಡುತ್ತಾ ಇಡೀ ಅಂಗಡಿಯನ್ನು ತನ್ನ ಕಣ್ಣುಗಳಿಂದಲೇ ತಡಕಾಡಿ ತನಗೆ ಬೇಕಾದದ್ದು ಸಿಗಬಹುದಾ ಅಂತ ಆತುರಪಡ್ತಾ ಇದ್ಳು. ಆಕೆ ಉಟ್ಟಿದ್ದ ಕಾಟನ್ ಸೀರೆ, ಕೈಕಾಲಿಗೆಲ್ಲ ಮೆತ್ತಿಕೊಂಡ ಅರಿಶಿಣ, ಎಡಗಾಲಿನಲ್ಲಿದ್ದ ಬೆಳ್ಳಿಯ ಕಡಗದಿಂದಲೇ ಆಕೆ ಗುಂಟೂರು, ವಿಜಯವಾಡ ಪ್ರಾಂತ್ಯದವಳು ಅನ್ನುವುದರಲ್ಲಿ ಯಾವುದೇ ಸಂಶಯ ಉಳೀಲಿಲ್ಲ. “ಅಮ್ಮಗಾರೂ, ಏಂ ಕಾವಾಲಂಡೀ ..?” ಅಂತ ಕೇಳಿದ ಕೂಡಲೇ ಆಕೆಯ ಮುಖ ಸೂರ್ಯಕಾಂತಿ ಹೂವಿನ ಹಾಗೆ ಅರಳಿತು. “ಪೆನಂ, ಪೆನಂ, ದೋಸ ಪೆನಂ” ಅಂತ ಆಕೆ ಬಡಬಡಿಸುವ ರೀತಿಯಲ್ಲಿ ಹೇಳಿದರು. ಆಕೆಗೆ ದೋಸೆ ಮಾಡುವ ಕಾವಲಿ ಅಥವಾ ಹೆಂಚು ಬೇಕಾಗಿತ್ತು. ”ಅಲ್ಲಿಂದ ಈ ಊರಿಗೆ ಬಂದು ಈ ವಯಸ್ಸಿನಲ್ಲಿ ಆ ಕಬ್ಬಿಣದ ದೋಸೆ ಹೆಂಚು ಹೊತ್ಕೊಂಡು ಹೋಗಿ ಏನ್ಮಾಡ್ತೀಯಮ್ಮಾ ತಾಯಿ. ನಿನ್ನ ದೇಹವನ್ನೇ ಸರಿಯಾಗಿ ಹೊತ್ಕೊಂಡು ಓಡಾಡ್ಲಿಕ್ಕೆ ಆಗ್ತಾ ಇಲ್ಲ. ಏದುಸಿರು ಬಿಡ್ತಾ ಇದ್ದೀಯಾ..” ಅಂತ ಆಕೆಗೆ ಹೇಳಬೇಕೆನಿಸಿದರೂ ಅಧಿಕಪ್ರಸಂಗವಾದೀತು ಅನ್ನಿಸಿ ಸುಮ್ಮನಾದೆ. ಅಷ್ಟರಲ್ಲೇ ಆಕೆಯ ಗಂಡ ಹಿಂದಿನಿಂದ ಓಡೋಡಿ ಬಂದರು. ಅವರ ಕಣ್ಣು ತಪ್ಪಿಸಿ ಈಕೆ ಒಬ್ಬಳೇ ಶಾಪಿಂಗ್’ಗೆ ಹೊರಟು ಬಂದುಬಿಟ್ಟಿದ್ದಾರೆ. ”ನಿನ್ನನ್ನು ಎಷ್ಟೆಲ್ಲ ಹುಡುಕಿದ್ವಿ. ಯಾಕೆ ಹೀಗೆ ಮಾಡ್ತೀಯಾ…? ದೋಸೆ ಹೆಂಚು ಇಲ್ಲಿಂದ ಹೊತ್ಕೊಂಡು ಹೋಗೋದು ಹೇಗೆ..? ಮೊದಲೇ ಲಗೇಜ್ ಜಾಸ್ತಿ ಇದೆ. ಇದೆಲ್ಲಾ ಅಲ್ಲೇ ಹೈದರಾಬಾದಲ್ಲಿ ಸಿಗೋದಿಲ್ವಾ.? ” ಅಂತ ಆಕೆಯ ಗಂಡ ಕೋಪಿಸಿಕೊಳ್ಳುತ್ತಿದ್ದ. ”ಹೆಂಗಸರು ಯಾವತ್ತಿಗೂ ಹೆಂಗಸರೇ” ಅಂದುಕೊಂಡು ಅಲ್ಲಿಂದ ಹೊರಟೆ. ವಿಶ್ವನಾಥನ ಗುಡಿಯ ಕಡೆಗೆ ಹೋಗುವ ಎಲ್ಲಾ ರಸ್ತೆಗಳಲ್ಲೂ ಕಾಸ್ಮೆಟಿಕ್ ಅಂಗಡಿಗಳಿಂದ ಹಿಡಿದು ಎಲ್ಲಾ ಪ್ರಕಾರದ ಸಾವಿರಾರು ಅಂಗಡಿಗಳು ಸಾಲುಗಟ್ಟಿದ್ದವು. ಅವೆಲ್ಲವೂ ದೇವರ ದರ್ಶನಕ್ಕೆ ಬರುವ ಭಕ್ತರನ್ನು ಸೆಳೆಯಲಿಕ್ಕಾಗಿಯೇ ನಿರ್ಮಾಣ ಆಗಿರುವಂಥವೇ.. ಅವುಗಳಿಗೆ ಲೋಕಲ್ ಜನರಿಂದ ಯಾವುದೇ ವ್ಯಾಪಾರದ ಅಪೇಕ್ಷೆ ಇಲ್ಲವೇ ಇಲ್ಲ. ಯಾತ್ರಾ ಸ್ಥಳಗಳಲ್ಲಿ ಜನರು ಶಾಪಿಂಗ್ ಮಾಡುವುದು ತಪ್ಪಲ್ಲ. ಆದರೆ ”ಇಲ್ಲಿಗೆ ನಾವು ಯಾಕೆ ಬಂದಿದ್ದೇವೆ, ಕಾಶಿಯಂಥಾ ಸ್ಥಳದಲ್ಲಿ ನಾವು ಏನು ಮಾಡಬೇಕು” ಅನ್ನೋದನ್ನೇ ಮರೆತುಹೋಗುವಷ್ಟು ಭ್ರಾಮಕ ಸ್ಥಿತಿಯನ್ನು ಉಂಟುಮಾಡುವಂಥಾ ಮಾರುಕಟ್ಟೆ ದೇವಸ್ಥಾನದ ಬಾಗಿಲಿನಲ್ಲೇ ತೆರೆದುಕೊಂಡಿತ್ತು. ಜನರಿಗೂ ಬಹುಶಃ ಅದೇ ಬೇಕಾಗಿರ್ತದೆ. ”ಕೋಳಿ ಮೊದಲಾ, ಮೊಟ್ಟೆ ಮೊದಲಾ” ಅನ್ನೋ ಪ್ರಶ್ನೆಯ ಹಾಗೆ ”ಜನರು ಕೊಳ್ತಾರೆ ಅಂತ ಇಂಥಾ ಸ್ಥಳಗಳಲ್ಲಿ ಇಂಥಾ ಅಂಗಡಿಗಳು ಹುಟ್ಟಿಕೊಳ್ತವೋ, ಅಂಗಡಿಗಳು ಕಣ್ಣಿಗೆ ಬೀಳ್ತವೆ ಅನ್ನುವ ಕಾರಣಕ್ಕೆ ಜನರಿಗೆ ಕೊಳ್ಳುವ ಆಸೆ ಹುಟ್ಟಿಕೊಳ್ತದೋ” ಅಂತ ಆಲೋಚಿಸಿದರೆ ಮನುಷ್ಯನ ಮನಸ್ಸು ಎಷ್ಟು ವಿಚಿತ್ರ, ಹಾಗೂ ”ಗಾಳಿ ಬಂದಕಡೆ ತೂರಿಕೊಂಡು ಹೋಗುವ ಕಸ”ದ ಹಾಗೆ ಎಷ್ಟು ದುರ್ಬಲ ಅನ್ನೋದು ಅರ್ಥವಾಗತೊಡಗಿತ್ತು. ಕಾಶೀ ಎನ್ನುವುದು ಯಾವ ಉದ್ದೇಶಕ್ಕಾಗಿ ಕಟ್ಟಿದ ಊರು ಮತ್ತು ಈಗ ಅದು ಏನಾಗಿ ಹೋಗಿದೆ ಅನ್ನೋದು ನೋಡಿ ನಿರಾಶೆಯಿಂದ ಮಂಕಾಗಿ ನನ್ನ ಸಾಯಂಕಾಲದ ಸ್ನಾನಕ್ಕಾಗಿ ಘಾಟಿನ ಕಡೆಗೆ ಹೊರಟೆ.
#ಮುಂದುವರಿಯುವುದು