ಶಾಸ್ತ್ರ ಎಂದರೆ…
ಯಾವುದೇ ಒಂದು ವಿಷಯದ ಬಗ್ಗೆ ಬೀಜರೂಪದ ಮಾಹಿತಿಯನ್ನು ನೀಡಿ.. ಅದಕ್ಕೆ ವಿರೋಧಗಳು/ಪ್ರತಿವಾದಗಳು ಅಥವಾ ಸಂದೇಹಗಳು ಎದುರಾದಲ್ಲಿ ಆ ಎಲ್ಲ ರೀತಿಯ ವಿರೋಧಗಳಿಗೂ, ಸಂದೇಹಗಳಿಗೂ ತರ್ಕಬದ್ಧವಾದ ಆಧಾರ ಸಹಿತ ಸಮಾಧಾನವನ್ನು ನೀಡಿ ತಾನು ಮೊದಲು ಮಂಡಿಸಿದ ಬೀಜರೂಪ ವಿಷಯನ್ನು ಸಂಪೂರ್ಣವಾಗಿ ಸಾಬೀತು ಮಾಡಿ ಸಿದ್ಧಾಂತವನ್ನು ಮಂಡಿಸುವ (ವಾದ-ಪ್ರತಿವಾದಗಳನ್ನೊಳಗೊಂಡ) ಸಂಪೂರ್ಣ ಪ್ರಕ್ರಿಯೆಗೆ ”ಶಾಸ್ತ್ರ” ಎಂದು ಹೆಸರು. ಅದು ಹಾಗಿದ್ದಾಗ ಮಾತ್ರ ಅದಕ್ಕೆ ”ಶಾಸ್ತ್ರತ್ವ” ಬರುತ್ತದೆ. ಶಾಸ್ತ್ರವು ಪ್ರತ್ಯಕ್ಷ ಪ್ರಮಾಣ, ಅನುಮಾನ ಪ್ರಮಾಣ, ಉಪಮಾನ ಪ್ರಮಾಣ, ಅರ್ಥಾಪತ್ತಿ ಪ್ರಮಾಣ, ಅನುಪಲಬ್ಧಿ ಪ್ರಮಾಣ ಹಾಗೂ ಶಬ್ದ ಪ್ರಮಾಣ ಎಂಬ ಆರು ಪ್ರಮಾಣಗಳ ಆಧಾರದ ಮೇಲೆ ಶಾಸ್ತ್ರಪ್ರಕ್ರಿಯೆ ನಡೆಯುತ್ತದೆ. ಇಂತಹ ಒಟ್ಟು ಆರು ಶಾಸ್ತ್ರಗಳು ಇವೆ. ಸಾಂಖ್ಯ ಶಾಸ್ತ್ರ, ಯೋಗ ಶಾಸ್ತ್ರ, ನ್ಯಾಯ ಶಾಸ್ತ್ರ, ವೈಶೇಷಿಕ ಶಾಸ್ತ್ರ, ಮೀಮಾಂಸಾ ಶಾಸ್ತ್ರ ಹಾಗೂ ವೇದಾಂತ ಶಾಸ್ತ್ರ ಎಂಬುವವೇ ಆ ಆರು ಶಾಸ್ತ್ರಗಳು. ಈ ಆರು ಶಾಸ್ತ್ರಗಳಿಗೆ ”ದರ್ಶನಗಳು” ಎಂಬ ಹೆಸರು ಕೂಡ ಪ್ರಸಿದ್ಧ.
ವ್ಯಕ್ತಿಗೆ ತಾನು ಹೊಂದಬೇಕಾದ ಒಂದು ”ವಸ್ತು” ಅಥವಾ ”ಗುರಿ” ಎಂಬುದು ಒಂದು ಇದೆ ಎಂಬ ತಿಳುವಳಿಕೆ ಇರಬೇಕು. ಅಂತಹ ವಸ್ತುವಿನ “ನೈಜ ಅನುಭವದಲ್ಲಿ” ಪಾಲ್ಗೊಂಡಾಗ ಮಾತ್ರ “ಅಂತಹ ವಸ್ತು ಇದೆ” ಎಂದು ಅವನು ತಿಳಿಯಲು ಸಾಧ್ಯ. ಗುರಿಯ ತಿಳುವಳಿಕೆ ಇಲ್ಲದೇ ಪ್ರಯತ್ನ ಹೇಗೆ ಪ್ರಾರಂಭವಾಗುತ್ತದೆ..?
ಅಲ್ಲದೇ ನಿರ್ದಿಷ್ಟ ಸಾಧನವೊಂದು ಮುಕ್ತಿಗೆ ಒಯ್ಯಬಲ್ಲದೆಂದು ಒಬ್ಬನಿಗೆ ಖಚಿತವಾಗಿ ಮನವರಿಕೆಯಾಗಬೇಕಾದರೆ ಅವನು ಅದನ್ನು ಮೊದಲು ಅನುಸರಿಸಿರಬೇಕು. ಅಥವಾ ಅವನು ಸರ್ವಜ್ಞತ್ವದಿಂದ ”ಗುರಿ” ಹಾಗೂ ”ಸಾಧನೆಯ ಮಾರ್ಗ”ಗಳೆರಡನ್ನೂ ಏಕಕಾಲದಲ್ಲಿ ನೋಡುವ ಸಾಮರ್ಥ್ಯ ಹೊಂದಿದವನಾಗಿರಬೇಕು. ಅಥವಾ ಅವನು ಸಾಕ್ಷಾತ್ ಗುರಿಯೇ ಆಗಿದ್ದು ತನ್ನನ್ನು ಹೊಂದುವ ವಿಧಾನವನ್ನು ಜಗತ್ತಿಗೆ ಬೋಧಿಸಬೇಕು.
ಮೇಲೆ ಹೇಳಿದವುಗಳಲ್ಲಿ ಮೊದಲನೇಯ ಆಯ್ಕೆಯನ್ನು ಒಪ್ಪಿಕೊಂಡರೆ, ಒಬ್ಬ ವ್ಯಕ್ತಿಯು ತಾನು ಅನುಸರಿಸಿ ಯಶಸ್ವಿಯಾಗುವ ಮೊದಲೇ ಆ ಮಾರ್ಗವನ್ನು ಹೇಗೆ ತಿಳಿದ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಎರಡನೇಯದನ್ನು ಒಪ್ಪಿಕೊಂಡರೆ ಆತನು ತನ್ನಲ್ಲಿ ಈ ಮೊದಲು ಇರದ ಸರ್ವಜ್ಞತ್ವವನ್ನು ಎಲ್ಲಿಂದ ಪಡೆದ? ಮತ್ತು ಹೇಗೆ ಪಡೆದ? ಎಂಬ ಅಡ್ಡಿ ಉಂಟಾಗುತ್ತದೆ. ಆದ್ದರಿಂದ ಶೃತಿಯು ತನ್ನ ಮೂಲವನ್ನು ಭಗವಂತನಲ್ಲಿಯೇ ಹೊಂದಿದೆ ಎಂಬ ಮೂರನೇಯ ಆಯ್ಕೆಯನ್ನು ಮಾತ್ರ ನಾವು ತಾರ್ಕಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. (ಸಾಮಾನ್ಯ ಇಂದ್ರಿಯ ಮತ್ತು ಮನೋಬುದ್ಧಿಗಳ ಅನುಭವದ ಪರಿಧಿಯನ್ನು ಮೀರಿ ಬರುವ ಈ ಜ್ಞಾನವೇ ಶೃತಿ ಅಥವಾ ವೇದ ಎನಿಸಿಕೊಳ್ಳುವುದು.)
ಹಾಗೆ ಶೃತಿಯಲ್ಲಿ ಸಿಗುವ ಬೀಜ ರೂಪದ ಮಾಹಿತಿಯ ಆಧಾರದ ಮೇಲೆ ಅದನ್ನು ಪರಾಮರ್ಶಿಸಿ, ವಿಮರ್ಶಿಸಿ, ತರ್ಕಿಸಿ ನಿರ್ಧರಿಸುವುದು ಶಾಸ್ತ್ರದ ಲಕ್ಷಣವಾಗಿರುತ್ತದೆ. ಆದ್ದರಿಂದಲೇ ನಮ್ಮಲ್ಲಿ ಸೈನ್ಸ್ ಎಂಬ ಪದಕ್ಕೆ ಪರ್ಯಾಯವಾಗಿ “ಶಾಸ್ತ್ರ” ಎಂಬ ಪದ ಮೊದಲು ಬಳಕೆಯಲ್ಲಿತ್ತು. ಇತ್ತೀಚೆಗೆ “ವಿಜ್ಞಾನ” ಎಂಬ ಪದ ಬಳಕೆಗೆ ಬಂದಿದೆ. ಆದರೆ ಮಳಯಾಳ, ತೆಲುಗು ಮುಂತಾದ ಭಾಷೆಗಳಲ್ಲಿ ಇಂದಿಗೂ “ವಿಜ್ಞಾನಿ” ಸೈಂಟಿಸ್ಟ ಗಳನ್ನು “ಶಾಸ್ತ್ರ ಪಂಡಿತರು” ಎಂದೇ ಕರೆಯುವ ರೂಢಿ ಪ್ರಚಲಿತದಲ್ಲಿದೆ. ಏಕೆಂದರೆ ವಿಜ್ಞಾನವೇ ಶಾಸ್ತ್ರವಾಗಿದೆ.
ಮೀಮಾಂಸೆಯ ವಿಶೇಷತೆ
ಈ ಆರು ಶಾಸ್ತ್ರಗಳು ಮೊದಲು ಪ್ರತ್ಯೇಕವಾಗಿದ್ದರೂ ಕಾಲಕ್ರಮೇಣ ಅವುಗಳ ಬೆಳವಣಿಗೆ ಆದಂತೆ ಸಾಂಖ್ಯ ಮತ್ತು ಯೋಗಗಳು ಸಮಾನ ತಂತ್ರಗಳಾದವು. ಅದೇ ರೀತಿ ನ್ಯಾಯ ಮತ್ತು ವೇಶೇಷಿಕಗಳೆರಡೂ ಸೇರಿಹೋದವು. (ಅಂದರೆ ಒಂದರಂತೆ ಇನ್ನೊಂದು ಇವೆ, ಒಂದೇ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ.) ಆದರೆ ಮೀಮಾಂಸಾ ಮತ್ತು ವೇದಾಂತಗಳು ಈ ರೀತಿಯಾಗಿಲ್ಲ. ಮೀಮಾಂಸಾ ಶಾಸ್ತ್ರವು ಇತರ ಶಾಸ್ತ್ರಗಳಿಗಿಂತ ಮೂರು ವಿಚಾರಗಳಲ್ಲಿ ತೀರ ಭಿನ್ನವಾಗಿದೆ. ಇತರ ಶಾಸ್ತ್ರಗಳು ವೇದವು ಅಪೌರುಷೇಯ ಎಂದು ಒಪ್ಪಿದರೂ ವೇದವು ಈಶ್ವರಕೃತ. ಆದ್ದರಿಂದಲೇ ಅದು ಪ್ರಮಾಣ ಎನ್ನುತ್ತವೆ. ಆದರೆ ಪೂರ್ವಮೀಮಾಂಸಾ ಶಾಸ್ತ್ರವು ಭಗವಂತ ಇರಲಿ-ಇಲ್ಲದಿರಲಿ, ವೇದವು ಸ್ವತಃ ಪ್ರಮಾಣವು ಎನ್ನುತ್ತದೆ. ಈ ದೃಷ್ಟಿಯಲ್ಲಿ ಮೀಮಾಂಸೆಯು ಉಳಿದ ಶಾಸ್ತ್ರಗಳಿಗಿಂತ ವೈದಿಕತರವು ಎನ್ನಬಹುದು. ಅದೇ ರೀತಿ ಮಿಕ್ಕ ಶಾಸ್ತ್ರಗಳು ಜೀವ, ಮೋಕ್ಷ, ಪ್ರಪಂಚ ಇತ್ಯಾದಿಗಳನ್ನು ಹೆಚ್ಚಾಗಿ ವಿಮರ್ಶಿಸುತ್ತವೆ. ಆದರೆ ಮೀಮಾಂಸೆಯು ಈ ವಿಷಯಗಳಲ್ಲಿ ಹೆಚ್ಚು ಗಮನ ಕೊಡದೇ ”ಧರ್ಮ” ಎಂಬ ಒಂದೇ ವಿಷಯವನ್ನು ಪ್ರಧಾನವಾಗಿ ವಿಚಾರಿಸುತ್ತದೆ. ಮೂರನೇಯದಾಗಿ ನಿತ್ಯ ಜೀವನಕ್ಕೆ ಬೇಕಾದ ಎಷ್ಟೋ ವ್ಯವಹಾರಗಳನ್ನು ಮೀಮಾಂಸೆಯು ಚರ್ಚಿಸಿ ನಿರ್ಣಯಿಸುತ್ತದೆ.
ಮೀಮಾಂಸಾ ಶಬ್ದದ ಅರ್ಥ
“ಮೀಮಾಂಸಾ” ಎಂದರೆ ವಿಚಾರಿಸುವುದು, ಚಿಂತಿಸುವುದು, ಆಲೋಚಿಸುವುದು ಎಂದರ್ಥ. ಆದರೆ ಎಲ್ಲ ವಿಚಾರಗಳು-ಚರ್ಚೆಗಳೂ ಮೀಮಾಂಸೆಯಲ್ಲ. ಪೂಜನೀಯವಾದ (ಧರ್ಮಸಂಬಂಧವಾದ) ವಿಚಾರವನ್ನು ಅದರ ಗೌರವಕ್ಕೆ ತಕ್ಕಂತೆ ಮರ್ಯಾದೆಗಳಿಗೆ(ಚರ್ಚಾ ನಿಯಮಗಳಿಗೆ) ಒಳಪಟ್ಟು ವಿಚಾರಿಸುವುದು ಮಾತ್ರ ಮೀಮಾಂಸೆ. ಈ ಶಬ್ದವನ್ನು ‘ನ್ಯಾಯ’ ಎಂಬ ಅರ್ಥದಲ್ಲಿಯೂ ಉಪಯೋಗಿಸುವುದು ಉಂಟು.
ಮೀಮಾಂಸಾ ಎಂಬ ಶಬ್ದವು ಮೊದಲು ವೇದದ ಕರ್ಮಕಾಂಡಗಳಲ್ಲಿ “ಸಂದಿಗ್ಧವಾದ ಕರ್ಮವನ್ನು ಕುರಿತು ನಡೆದ ವಿಮರ್ಶೆ” ಎಂಬ ಅರ್ಥದಲ್ಲಿ ಬಂದಿದೆ. ಅಂತಹ ಧರ್ಮದ ಕುರಿತ ವಿಮರ್ಶೆಗಳೆಲ್ಲ ಒಟ್ಟು ಸೇರಿ ಒಂದು ನಿಯತ ರೂಪವನ್ನು ಪಡೆದು ಅದು ಮೀಮಾಂಸಾ ಶಾಸ್ತ್ರವಾಯಿತು. ಶಾಸ್ತ್ರದಲ್ಲಿಯೂ ಮೀಮಾಂಸಾ ಎಂಬ ಶಬ್ದಕ್ಕೆ ಅದೇ ಅರ್ಥವಿದೆ. ಆದರೆ ಕಾಲಕ್ರಮೇಣ ಈ ಶಬ್ದಕ್ಕೆ ಸಾಧಾರಣ, ವಿಶಿಷ್ಟ ಅರ್ಥಗಳೆರಡೂ ಅರೋಪಿಸಲ್ಪಟ್ಟು ಇಂದು “ಮೀಮಾಂಸಾ” ಎಂದರೆ ಮೀಮಾಂಸಾ ಶಾಸ್ತ್ರ ಎಂಬ ವಿಶಿಷ್ಟ ಅರ್ಥದಲ್ಲಿಯೂ ಚರ್ಚೆ ಎಂಬ ಸಾಧಾರಣ ಅರ್ಥದಲ್ಲಿಯೂ ಬಳಕೆಗೆ ಬಂದಿದೆ. ಕಾವ್ಯ ಮೀಮಾಂಸೆ, ಚಿತ್ರ ಮೀಮಾಂಸೆ ಇತ್ಯಾದಿ.
ಇದರ ಪ್ರಾಚೀನತೆ
ಈ ಶಾಸ್ತ್ರವು ಪುರಾತನವಾದದ್ದು. “ಈ ಶಾಸ್ತ್ರವನ್ನು ಮೊದಲು ಪ್ರಜಾಪತಿಯು ರಚಿಸಿದನು. ಆತನಿಂದ ಕ್ರಮವಾಗಿ ಇಂದ್ರ, ಆದಿತ್ಯ, ವಸಿಷ್ಠ, ಪರಾಶರ, ಕೃಷ್ಣದ್ವೈಪಾಯನ, ಜೈಮಿನಿಗಳು ಕಲಿತರು. ಜೈಮಿನಿಯು ಇದನ್ನು ಸೂತ್ರರೂಪದಲ್ಲಿ ಬರೆದಿಟ್ಟರು” ಎಂದು ಸಾಂಪ್ರದಾಯಿಕ ನಂಬಿಕೆಯಿದೆ. ನಮ್ಮ ಶಾಸ್ತ್ರಗಳೆಲ್ಲ ಬೀಜರೂಪವಾಗಿ ವೇದದಲ್ಲಿ ಇವೆ. ಅವುಗಳನ್ನು ಆಯಾ ಆಚಾರ್ಯರು ತಮ್ಮ ಶಿಷ್ಯರಿಗೆ ಬೋಧಿಸುವಾಗ ವಿಸ್ತರಿಸಿದರು. ಬರುಬರುತ್ತ ಜನರಲ್ಲಿ ಗ್ರಹಣಶಕ್ತಿಯು ಕಡಿಯಾಗುತ್ತ ಬಂದುದರಿಂದ ಗ್ರಂಥಗಳ ಅವಶ್ಯಕತೆಯು ಹೆಚ್ಚಾಗಿ ಆಯಾ ಶಾಸ್ತ್ರಗಳು ಗ್ರಂಥಸ್ಥವಾಗುತ್ತ ಬಂದವು.
ಮೊದಲು ಜಾತವೇದರ ಕಾಲದಲ್ಲಿ ಜನರು ಹುಟ್ಟುತ್ತಲೇ ಸತ್ಯ-ಧರ್ಮಗಳು ಅವರಿಗೆ ಸ್ವಯಂ ಗೋಚರವಾಗುತ್ತಿದ್ದವು. ಅವರಿಗೆ ಯಾರೂ ಹೇಳಿಕೊಡಬೇಕಾಗಿರಲಿಲ್ಲ. ಅವರ ನಂತರ ಜಾತವೇದರ ಉಪದೇಶಮಾತ್ರದಿಂದ ಸತ್ಯ-ಧರ್ಮಗಳ ದರ್ಶನವನ್ನು ಪಡೆಯುವ ಕಾಲವಾಯಿತು. ಆಗ ಗುರುಗಳ ಅವಶ್ಯಕತೆಯು ಹುಟ್ಟಿ ಆಚಾರ್ಯರು ಬರಬೇಕಾಯಿತು. ಆ ಯುಗವೂ ಕಳೆದು ಆಚಾರ್ಯರಿಂದ ಉಪದೇಶ ಪಡೆದು ಅದನ್ನು ಅನುಷ್ಠಾನ ಮಾಡಿ ಸತ್ಯ-ಧರ್ಮಗಳ ಸಾಕ್ಷಾತ್ಕಾರವನ್ನು ಪಡೆದವರ ಕಾಲ ಬಂದಿತು. ಆಗ ಸಂಪ್ರದಾಯಗಳು ಹುಟ್ಟಿದವು. ಆ ಕಾಲದ ನಂತರ ಉಪದೇಶವಾದರೂ ”ಬುದ್ಧಿಂ ವ್ಯಾಮೋಹಯಸೀವ ಮೇ ಏಕಂ ವದ ನಿಶ್ಚಿತ್ಯಂ” ಎನ್ನುವಂತಹ ಸಂದೇಹಗ್ರಸ್ಥರ ಕಾಲವಾಗಿ ಆಗ ಬಾಯಲ್ಲಿ ಹೇಳಿದ್ದನ್ನು ನಂಬಿಸಲಿಕ್ಕಾಗಿ ಅಲೌಕಿಕ ಪ್ರಭಾವವನ್ನು ತೋರಿಸಬೇಕಾದಂತಹ ಕಾಲವಾಯಿತು. ಅನಂತರ ಆ ಕಾಲವೂ ಕಳೆದು ಶ್ರದ್ಧಾಹೀನರ ಕಾಲವು ಬಂದಿತು” ಎಂದು ಸಂಪ್ರದಾಯಶರಣರು ಹೇಳುತ್ತಾರೆ.
ಮೀಮಾಂಸಾ ಶಾಸ್ತ್ರದ ಹುಟ್ಟು.
ಈ ಶಾಸ್ತ್ರವು ಈಗ ಜೈಮಿನಿ ಮಹರ್ಷಿ ಬರೆದಿರುವ ಸೂತ್ರಗಳ ರೂಪದಲ್ಲಿದೆ. ವ್ಯಾಸರಿಗಿಂತ ಮುಂಚೆ ಅನೇಕ ಜನ ಜೈಮಿನಿ ಎಂಬ ಹೆಸರಿನ ಋಷಿಗಳು ಇದ್ದಾಗಿಯೂ ಈ ಸೂತ್ರಗಳನ್ನು ಬರೆದು ಜೈಮಿನಿಯು ವ್ಯಾಸರ ಶಿಷ್ಯ ಎಂಬ ಸಾಂಪ್ರದಾಯಿಕ ಪರಿಗಣನೆಯ ಪ್ರಕಾರ ಮೀಮಾಂಸಾ ಸೂತ್ರಗಳು ಕ್ರಿ. ಪೂ. 3100 ರಲ್ಲಿ ರಚಿತವಾದವು ಎಂದು ಹೇಳಬಹುದು. ಜೈಮಿನಿಯು ಈ ಸೂತ್ರಗಳನ್ನು ಬರೆಯುವುದಕ್ಕಿಂತ ಮುಂಚೆಯೇ ಈ ಶಾಸ್ತ್ರ ಪ್ರಚಾರದಲ್ಲಿತ್ತು. ಬಾದರಿ, ಕಾರ್ಷ್ಣಾರ್ಜನಿ, ಆತ್ರೇಯ, ಬಾದರಾಯಣ, ಐತಿಶಾಯನ, ಕಾಮಕಾಯನ ಮೊದಲಾದ ಆಚಾರ್ಯರಿದ್ದರು. ಆದರೂ ಜೈಮಿನಿ ಬರೆದ ಸೂತ್ರಗಳೇ ಈಗ ಉಪಲಬ್ಧವಿದೆ.
ವೇದದ ಕರ್ಮಕಾಂಡ ವಿಭಾಗದಲ್ಲಿ ಋಷಿಗಳು ಕರ್ಮವನ್ನು ಕುರಿತು “ಹಾಗೆ ಮಾಡಬೇಕೇ? ಹೀಗೆ ಮಾಡಬೇಕೇ?” ಎಂದು ವಿಚಾರಿಸಿ ಸಿದ್ಧಾಂತ ನಿರ್ಣಯ ಮಾಡುತ್ತಿದ್ದುದು ಉಂಟು. ಆ ಚರ್ಚೆಗಳೇ ಮುಂದೆ ಶಾಸ್ತ್ರದ ಪೂರ್ವಪಕ್ಷ ಸಿದ್ಧಾಂತಗಳಾಗಿವೆ. ಅತೀ ಪ್ರಾಚೀನ ಕಾಲದಿಂದಲೂ ಅನೇಕ ಆಚಾರ್ಯರಿಂದ ಅನೇಕ ಮುಖವಾಗಿ ಶಾಸ್ತ್ರವು ಬೆಳೆದಿದೆ. ಹೀಗೆ ಅಪಾರವಾಗಿ ಬೆಳೆದ ಶಾಸ್ತ್ರವನ್ನೆಲ್ಲ ಅಧ್ಯಯನವನ್ನು ಮಾಡಲಾಗದ ಕಾಲದಲ್ಲಿ ಸೂತ್ರಗಳು ಹುಟ್ಟಿಕೊಂಡವು. ಕಾಲಕ್ರಮೇಣ ಸೂತ್ರಗಳು ತಪ್ಪಾಗಿ ಅರ್ಥೈಕೆಗೊಳಗಾಗಬಾರದು ಎಂಬ ಉದ್ದೇಶದಿಂದ ವೃತ್ತಿಗಳು ಹಾಗೂ ಭಾಷ್ಯಗಳೂ ವಿರಚಿತಗೊಂಡವು. ಭಾಷ್ಯವು ಎಷ್ಟೇ ಸುಲಭವಿದ್ದರೂ ಕಾಲನ ಹೊಡೆತದಿಂದ ಮಾನವಕುಲ ಅಲ್ಪಮತಿಯಾದಮೇಲೆ ಅವುಗಳಿಗೆ ವ್ಯಾಖ್ಯಾನಗಳನ್ನು ಹಾಗೂ ವಾರ್ತಿಕಗಳನ್ನು ಬರೆಯಬೇಕಾದ ಕಾಲ ಬಂದಿತು. ಶಾಸ್ತ್ರವ್ಯಾಸಂಗವು ವಿಸ್ತಾರವಾದಮೇಲೆ ಒಂದೇ ಶಾಸ್ತ್ರವನ್ನು ಬೇರೆ ಬೇರೆ ಪರಿಪಾಠಿಯಿಂದ ನೋಡುವ ಪ್ರಕರಣಗ್ರಂಥಗಳು, ಹಾಗೂ ಶಾಸ್ತ್ರದೊಳಗಿನ ನಿರ್ದಿಷ್ಟ ಒಂದೇ ವಿಷಯವನ್ನು ವಿಸ್ತರಿಸಿ ಬರೆದ ವಾದಗ್ರಂಥಗಳೂ, ಕ್ರೋಢ ಪತ್ರಗಳೂ ಬಂದವು. ಹಾಗೇಯೇ ಮೂಲ ಶಾಸ್ತ್ರಪ್ರಕ್ರಿಯೆಯು ಕೊಂಚ ಕೊಂಚ ಬದಲಾಗುತ್ತ ”ಪ್ರಾಚೀನ ಮತ” ಹಾಗೂ ”ನವ್ಯಮತ” ಎಂಬ ಪ್ರಭೇದಗಳು ಮೈದಳೆದವು. ಅವುಗಳಷ್ಟೇ ಅಲ್ಲದೇ ಪ್ರಾಭಾಕರ ಮತ ಮತ್ತು ಭಾಟ್ಟ ಮತ ಎಂಬ ಕವಲು ಉಂಟಾಯಿತು. ಪ್ರಾಭಾಕರ ಮತವು ಈಗ ಪ್ರಚಲಿತದಲ್ಲಿಲ್ಲ.
ಮೀಮಾಂಸೆಯ ಸ್ವರೂಪ
”ಅಥಾತೋ ಧರ್ಮಜಿಜ್ಞಾಸಾ” ಎಂಬ ಸೂತ್ರದೊಂದಿಗೆ ಈ ಇದು ಪ್ರಾರಂಭವಾಗುತ್ತದೆ. ಧರ್ಮ ಮತ್ತು ಅಧರ್ಮಗಳನ್ನು ಜಿಜ್ಞಾಸೆಗೊಳಪಡಿಸಿ ಚರ್ಚಿಸಿ ನಿರ್ಣಯಿಸುವುದಕ್ಕೆಂದೇ ಈ ಶಾಸ್ತ್ರ ಹೊರಟಿದೆ. ಇಂತಹ ಒಟ್ಟು 2644 ಸೂತ್ರಗಳು ಇದರಲ್ಲಿವೆ. ಸೂತ್ರಗಳು ”ಪೂರ್ವಪಕ್ಷ”, ”ಸಮಾಧಾನ” ಹಾಗೂ ”ಸಿದ್ಧಾಂತ” ಎಂಬ ಮೂರು ವಿಷಯ ಒಳಗೊಂಡಿವೆ. ”ಅಭ್ಯುಪೇತ್ಯವಾದ” ಮತ್ತು ”ಅನುಗ್ರಹವಾದ” ಎಂಬ ಎರಡು ವಾದ ಪ್ರಕಾರಗಳಿವೆ. ”ಆಭಾಷಾಂತ ಸೂತ್ರ”, ”ಪ್ರಯೋಜನ ಸೂತ್ರ”, ”ಪದೋತ್ತರ ಸೂತ್ರ” ಇತ್ಯಾದಿ ಸೂತ್ರಪ್ರಕಾರಗಳಿವೆ. ಇವುಗಳನ್ನು ಹನ್ನೆರಡು ಅಧ್ಯಾಯ ಹಾಗೂ ಅರವತ್ತು ಪಾದಗಳಲ್ಲಿ ವಿಷಯಗಳಿಗೆ ಅನುಸಾರವಾಗಿ ವಿಂಗಡಿಸಲಾಗಿದೆ. ಕುಮಾರಿಲ ಭಟ್ಟರು ಇದ್ದಕ್ಕೆ ವಾರ್ತಿಕವನ್ನು ಬರೆದಿದ್ದಾರೆ. ಅದೇ ಭಾಟ್ಟಮತವಾಗಿದೆ.
ಧರ್ಮಶಾಸ್ತ್ರ
“ಧರ್ಮಶಾಸ್ತ್ರ” ಎಂಬ ಮತ್ತೊಂದು ಶಾಸ್ತ್ರವು ಹುಟ್ಟಿದೆ. ಅದೂ ಕೂಡ ಧರ್ಮವನ್ನು ಬೋಧಿಸಲಿಕ್ಕೇ ಹೊರಟಿದ್ದು. ಆದರೆ ಅದು ಶಾಸ್ತ್ರಪ್ರಕ್ರಿಯೆಯ ಮೂಲಕ ಧರ್ಮದ ಜಿಜ್ಞಾಸೆಯನ್ನು ಮಾಡುವುದಿಲ್ಲ. ಧರ್ಮಶಾಸ್ತ್ರವು ಮೀಮಾಂಸೆಯು ನಿರ್ಣಯಿಸಿದ ಧರ್ಮವನ್ನು ಆಚರಿಸುವ ಸಮಯ, ಅಧಿಕಾರ, ನಿಯಮ, ವಿಧಿ-ನಿಷೇಧ ಮುಂತಾದವುಗಳನ್ನು ಹೇಳುತ್ತದೆ. ಆರು ದರ್ಶನಗಳು ಜಿಜ್ಞಾಸೆಯ ಮೂಲಕ ಸಿದ್ಧಾಂತಗಳನ್ನು ಮಂಡಿಸಿದರೆ ಧರ್ಮಶಾಸ್ತ್ರವು ಅವುಗಳಿಗೆ ಅನುಗುಣವಾಗಿ ಮಾಡಬೇಕಾದ ಅನುಷ್ಠಾನವನ್ನು ಹೇಳುತ್ತದೆ. ಈ ಧರ್ಮಶಾಸ್ತ್ರವು ಪೂರ್ಣವಾಗಿ ಪೌರುಷೇಯವಾಗಿದೆ. ದರ್ಶನಗಳಿಗಿಂತ ಅರ್ವಾಚೀನವಾಗಿದೆ. ಧರ್ಮಶಾಸ್ತ್ರದಲ್ಲಿ ”ಸೂತ್ರಗಳು” ಹಾಗೂ ”ಸ್ಮೃತಿಗಳು” ಎಂಬ ಎರಡು ರೀತಿಯ ಗ್ರಂಥಗಳಿವೆ. ”ಧರ್ಮಸೂತ್ರಗಳು”, ”ಗೃಹ್ಯಸೂತ್ರಗಳು”, ಹಾಗೂ ”ಕಲ್ಪಸೂತ್ರಗಳು” ಎಂಬ ಮೂರು ಪ್ರಕಾರದ ಸೂತ್ರಗಳಿವೆ. ಎಲ್ಲ ಸ್ಮೃತಿಗಳೂ ಈ ಸೂತ್ರಗಳನ್ನು ಆಧರಿಸಿಯೇ ಬರೆದದ್ದಾಗಿವೆ.
(ಗ್ರಂಥಋಣ – ದೇವುಡು ಅವರ ಮೀಮಾಂಸಾ ದರ್ಪಣ)