ಕಾಶಿಯ ಅನುಭವ- ಭಾಗ- 7

ಕಾಶಿಯ ಅನುಭವ- ಭಾಗ- 7

ಕಾಶಿಯ ಒಂದೊಂದು ಸ್ನಾನಘಟ್ಟದ ಹಿಂದೆಯೂ ಒಂದೊಂದು ಚರಿತ್ರೆಯಿದೆ. ವಿಶ್ವನಾಥನ ಗುಡಿಯ ಚರಿತ್ರೆಯಂತೂ ರೋಚಕ. ಈಗಿರುವ ಮೂರು ಗೋಪುರಗಳ ಈ ದೇವಸ್ಥಾನವನ್ನ ರಾಣಿಯೊಬ್ಬಳು ಕಟ್ಟಿಸಿದ್ದಂತೆ. ಅದೆಲ್ಲಾ ವಿವರಗಳು ವಿಕಿಪಿಡಿಯಾದಲ್ಲೇ ಸಿಗುತ್ತೆ. ನಾನು ಟೂರಿಸ್ಟ್ ಆಗಿಯೋ, ಕಾಶಿಯ ಇತಿಹಾಸ ತಿಳಿಯಲಿಕ್ಕಾಗಿಯೋ ಹೋದವನಲ್ಲ. ಹಾಗಾಗಿ ಯಾವುದರ ಇತಿಹಾಸವನ್ನೂ ಕೆದಕುವ ಕುತೂಹಲ ನನ್ನಲ್ಲಿರಲಿಲ್ಲ. ಆದರೂ ಎಲ್ಲಾ ದೇವಸ್ಥಾನಗಳನ್ನು ನೋಡಿದಾಗಲೂ ಇದು ಯಾವ ಆಗಮದ ಪ್ರಕಾರ ಕಟ್ಟಿದ್ದಾರೆ ಅಂತ ಗಮನಿಸ್ತಿದ್ದೆ. ಪ್ರಧಾನವಾಗಿ ಕಂಡುಬರುವ ಶೈವ, ಪಾಂಚರಾತ್ರ ಮತ್ತು ವೈಖಾನಸ ಈ ಮೂರೂ ಆಗಮಗಳಲ್ಲಿ ಯಾವ ತಂತ್ರಜ್ಞಾನದ ಸುಳಿವೂ ಕೂಡ ವಿಶ್ವನಾಥನ ಮಂದಿರದ ಕಟ್ಟಡದಲ್ಲಾಗಲಿ, ಲಿಂಗವನ್ನ ಪ್ರತಿಷ್ಠಾಪಿಸಿದ ರೀತಿಯಲ್ಲಾಗಲಿ ಕಂಡು ಬರಲಿಲ್ಲ. 21 ಆಗಮಪ್ರಕಾರಗಳಲ್ಲಿ ಬೇರೆ ಯಾವುದಾದರೂ ಇರಬಹುದಾ ಅಂದ್ರೆ ಆ ಎಲ್ಲಾ ಆಗಮಪ್ರಕಾರಗಳು ನಶಿಸಿ ಹೋಗಿವೆ. ಎಲ್ಲ ಮಂದಿರಗಳೂ ಬಹುತೇಕ ಭಕ್ತಿಪಂಥದ ಮಂದಿರಗಳಂತೆ ಭಾವಪ್ರಧಾನವಾಗಿ ಕಂಡು ಬರ್ತಾ ಇದ್ವು. ಮಂತ್ರಪ್ರತಿಷ್ಠೆಯೂ ಅಲ್ಲ, ಪ್ರಾಣಪ್ರತಿಷ್ಠೆಯೂ ಅಲ್ಲ. ಕೇವಲ ಭಾವನಾ ಸೌಕರ್ಯಕ್ಕೆ ಅನುಗುಣವಾಗಿ ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಪುನರ್ನಿರ್ಮಾಣವಾಗಿರೋ ಉಪಾಸನಾ ಕೇಂದ್ರಗಳೇ ಆಗಿವೆ. ಶಾಸ್ತ್ರೀಯ, ವೈಜ್ಞಾನಿಕ ಉಪಾಸನಾ ಪದ್ಧತಿಗಳೂ ನಶಿಸಿ ಹೋಗಿ ಕೇವಲ ಭಾವಾಭಿವ್ಯಕ್ತಿಯ ಉಪಾಸನೆ ಎಲ್ಲೆಡೆ ಕಂಡು ಬರ್ತಾ ಇತ್ತು. ದೈವವನ್ನು ಸೃಷ್ಟಿ ಮಾಡುವುದು ಮನುಷ್ಯನಿಗೆ ಸಾಧ್ಯವಿಲ್ಲ. ಹಾಗೆಯೇ ಒಂದು ಮರವನ್ನು ಸೃಷ್ಟಿ ಮಾಡುವುದೂ ಮನುಷ್ಯನಿಗೆ ಸಾಧ್ಯವಿಲ್ಲ. ಆದರೆ ಒಂದು ಬೀಜವನ್ನು ಮಣ್ಣಿನಲ್ಲಿಟ್ಟು, ಗೊಬ್ಬರ ನೀರು ಹಾಕಿ ಆ ಬೀಜ ಮೊಳಕೆಯೊಡೆಯಲು ಬೇಕಾಗುವ ವಾತಾವರಣವನ್ನ ನಿರ್ಮಾಣ ಮಾಡಿದರೆ ಸಾಕು. ಆ ಬೀಜದಲ್ಲಿರುವ ಸತ್ವ ತಾನೇ ತಾನಾಗಿ ಮರವಾಗಿ ಬೆಳೆದು ನಿಂತು ಫಲ-ಪುಷ್ಪಭರಿತವಾಗಿ ತಲೆಮಾರುಗಳಿಗೆ ಉಪಯೋಗಿಯಾಗುವಂಥದ್ದನ್ನ ಕೊಡುತ್ತೆ. ಜನರಿಗೆ ಉಪಯೋಗ ಉಂಟು ಮಾಡುವುದು ಮರದ ಉದ್ದೇಶವಲ್ಲ. ಅದು ತನ್ನ ಅಸ್ತಿತ್ವವನ್ನ ಉಳಿಸಿಕೊಂಡು ಬೆಳೆಸಿಕೊಂಡು ತನ್ನನ್ನು ತಾನು Enjoy ಮಾಡಿಕೊಂಡಿರುತ್ತೆ. ಆದರೆ ಅದರ ಉಪಯೋಗ ನಾವು ಪಡೀತೀವಿ ಅಷ್ಟೇ. ಮರವಾಗುವಂಥ ಬೀಜವನ್ನ ಮನುಷ್ಯ ನಿರ್ಮಾಣ ಮಾಡಲಿಕ್ಕಾಗದಿದ್ದರೂ ಬೀಜದಿಂದ ಮರ ಉಂಟಾಗುವಂತೆ ಮಾಡುವ ತಂತ್ರಜ್ಞಾನ ಅವನಿಗೆ ಗೊತ್ತಿದ್ದರೆ ಸಾಕು.

ದೈವೀ ಶಕ್ತಿಯೂ ಹಾಗೆಯೇ. ಇಡೀ ಸೃಷ್ಟಿಯನ್ನ ತನ್ನೊಳಗೆ ಧಾರಣೆ ಮಾಡಿರುವ ಶಕ್ತಿ ಕೆಲವೊಂದು ವಸ್ತುಗಳಲ್ಲಿ ವಿಶೇಷವಾಗಿ ಗೋಚರವಾಗುತ್ತೆ. ಅದು ಒಂದೆಡೆ ಸೇರಿ ಬೆಳೆದು ಮಹಾವೃಕ್ಷವಾಗಿ ವಿಜೃಂಭಿಸಲಿಕ್ಕೆ ಬೇಕಾದ ವ್ಯವಸ್ಥೆಯನ್ನು ಮನುಷ್ಯ ಮಾಡಿದರೆ ಸಾಕು. ಅದರ ಹತ್ತಿರ, ಅಥವಾ ಆ ವಾತಾವರಣದಲ್ಲಿ ಹೋದವರಿಗೆಲ್ಲ ಅದರ ಉಪಯೋಗವಾಗ್ತದೆ. ಜನರಿಗೆ ಉಪಯೋಗ ಉಂಟು ಮಾಡೋದು ದೈವೀ ಶಕ್ತಿಯ ಕೆಲಸವಲ್ಲ. ಅದರ ಉದ್ದೇಶವೂ ಅದಲ್ಲ. ಅದಕ್ಕೆ ಯಾವುದೇ ಉದ್ದೇಶಗಳೇ ಇಲ್ಲ. ಆದರೆ ಅದರ ಉಪಯೋಗ ಪಡಿಯೋ ವಿಧಾನಗಳನ್ನ ತಂತ್ರಜ್ಞಾನವನ್ನ ನಾವು ಕಲಿಯಬೇಕಷ್ಟೇ.

“ಅವರು ವಿಗ್ರಹಗಳೆಂಬ ಸೈತಾನನ್ನು ಆರಾಧಿಸುತ್ತಾರೆ. ಅಂಥವರನ್ನು ಸತ್ಯವಿಶ್ವಾಸಿಗಳನ್ನಾಗಿ ಪರಿವರ್ತಿಸಿ ಅಥವಾ ಅವರ ಸೈತಾನ ದೇವರ ವಿಗ್ರಹಳನ್ನ ನಾಶ ಮಾಡಿ ಅವರನ್ನು ಕೊಂದುಹಾಕಿರಿ. ನಿಮಗೆ ಶಾಶ್ವತವಾತ ಸ್ವರ್ಗ ಸಿಗುತ್ತದೆ’ ಅಂತ ತಲೆಕೆಟ್ಟ ಹುಚ್ಚನೊಬ್ಬ ಹೇಳಿದ ಮಾತುಗಳನ್ನ ಬರೆದಿಟ್ಟುಕೊಂಡು ಗ್ರಂಥ ಮಾಡಿ ಅದನ್ನು ಪಾಲಿಸಿದ, ಪಾಲಿಸುತ್ತಿರುವ ಜನ ಇನ್ನೂ ಏನೇನು ಅನಾಹುತಗಳನ್ನ ಮಾಡ್ತಾರೋ ಗೊತ್ತಿಲ್ಲ.

ನಾನು ವೈಯಕ್ತಿಕವಾಗಿ ಆಗಮದ ಮಾರ್ಗಗಳನ್ನೆಲ್ಲ ಬಿಟ್ಟು ನಿಗಮವನ್ನ ಹಿಡಿದುಕೊಂಡಾಗಿದೆ. ಆದರೂ ಆಗಮದ ನಾಶ ನೊಡಿದಾಗಲೆಲ್ಲ ಬೇಸರವಾಗುತ್ತೆ.

ಸ್ನಾನ ಘಟ್ಟದಲ್ಲಿ ದೊಡ್ಡ ದೊಡ್ಡ ಕೊಡೆಯ ಬುಡದಲ್ಲಿ ಸಾಲು ಸಾಲಾಗಿ ಪಂಡಾಗಳು ಕುಳಿತಿರ್ತಾರೆ. ಯಾತ್ರಿಗಳಿಗೆ ಸ್ನಾನದ ಸಂಕಲ್ಪ, ತರ್ಪಣಾದಿಗಳನ್ನ ಮಾಡಿಸ್ತಾರೆ. ತೀರ್ಥದಲ್ಲಿ ಸ್ನಾನ ಮಾಡುವಾಗ ಸಂಕಲ್ಪ ಮಾಡಿಯೇ ಸ್ನಾನ ಮಾಡಿದರೆ ಫಲ ಅನ್ನೋ ನಿಯಮ ಇದೆ. ಆದರೂ ನಾನು ಇಷ್ಟು ದಿನದಲ್ಲಿ ಸಂಕಲ್ಪ ಮಾಡಿಕೊಂಡು ಸ್ನಾನ ಮಾಡಿರಲಿಲ್ಲ. ಈಜುವ ಉತ್ಸಾಹದಲ್ಲಿ ಅದರ ನೆನಪು ಕೂಡ ಇರಲಿಲ್ಲ. ಗಿರಾಕಿಗಳಿಲ್ಲದೇ ಖಾಲೀ ಕುಳಿತದ್ದ ಒಬ್ಬ ಪಂಡಾನನ್ನ ಮಾತಿಗೆಳೆದೆ. ಅವರ ಹೆಸರು ರಾಮಪ್ರಕಾಶ್ ದುಬೇ. ಈ ‘’ದುಬೇ’ ಅನ್ನೋದು ‘ದ್ವಿವೇದಿ’ ಅನ್ನೋದರ ಅಪಭ್ರಂಶ. ದ್ವಿವೇದೀ, ತ್ರಿವೇದಿ, ಚತುರ್ವೇದಿ, ಅಗ್ನಿಹೋತ್ರಿ, ದೀಕ್ಷಿತ್, ಸೋಮಯಾಜಿ, ಶಾಸ್ತ್ರಿ ಇವೆಲ್ಲ ಸರ್’ನೇಮ್’ಗಳು ಆ ಕುಟುಂಬಗಳ ಹಿಂದಿನವರ ಯೋಗ್ಯತೆಯನ್ನ ತೋರಿಸ್ತವೆ. ಮಧ್ಯಪ್ರದೇಶ ಬಿಹಾರದ ಕಡೆಗಳಲ್ಲಿ ತಿವಾರಿ, ಮಿಶ್ರ, ಉಪಾಧ್ಯಾಯ, ಪಾಂಡೇಯ ಇಂಥವೆಲ್ಲ ಇವೆ. ಅವೆಲ್ಲವುಗಳನ್ನ ಅಧ್ಯಯನ ಮಾಡಿದರೆ ವೈದಿಕ ಇತಿಹಾಸ, ವೈದಿಕ ಪರಂಪರೆ ಒಂದು ಮಟ್ಟಿಗೆ ಪರಿಚಯ ಆಗ್ತದೆ. ಈ ಪಾಂಡೇಯರೇ ಇಲ್ಲಿ “ಪಂಡಾಗಳು” ಅಂತ ಪ್ರಸಿದ್ಧರಾಗಿರೋದು. ವಾಯಪೇಯ ಯಜ್ಞವನ್ನ ಮಾಡಿ “ವಾಜ”ವನ್ನು ಕುಡಿದವನು ವಾಯಪೇಯಿ. ಶ್ರೌತ ಪ್ರಕರಣದ ಅನುಷ್ಠಾನದಲ್ಲಿ ಋಕ್ಕನ್ನು ತ್ರಿವೃತ್ಕರಣ ಮಾಡಿ ಮೂರು ಬಾರಿ ಹೇಳುವವನು “ತಿವಾರಿ”. ನನಗೆ ಈ ಸರ್’ನೇಮ್’ಗಳ ಹಿಂದಿನ ಇತಿಹಾಸವನ್ನ ಕೆದಕೋ ಚಾಳಿ ಮೊದಲಿನಿಂದಲೂ ಇದೆ. ಹಾಗಾಗಿ ರಾಂಪ್ರಕಾಶನಿಗೆ ನಿಮ್ಮ ಮುತ್ತಾತನೋ ಮರಿಮುತ್ತಾತನೋ ಎರಡು ವೇದ ಓದಿದ್ರು ಅಂದೆ. “ಹೌದಾ ನಿಮಗೆ ಹೆಂಗೆ ಗೊತ್ತು” ಅಂತ ಆತ ಕಣ್ಣರಳಿಸಿದ. ನನಗೆ ಗೊತ್ತಿಲ್ಲದೇ ಇರುವಂಥಾ ಯಾವುದಾದರೂ ಹೊಸ ಸರ್ನೇಮ್ ಇದೆಯಾ ಅಂತ ಅವನ ಬಳಿ ಕಾಶಿಯ ಬ್ರಾಹ್ಮಣರ ಅಡ್ಡಹೆಸರುಗಳನ್ನ ಕೇಳಿದೆ. “ಇದನ್ನೆಲ್ಲಾ ಯಾಕೆ ಕೇಳ್ತಿದ್ದೀ? ಬಾ ಸಂಕಲ್ಪ ಮಾಡಿಸ್ತೀನಿ. ಗಂಗಾ ಮಾತೆ ನಿನ್ನ ಎಲ್ಲಾ ಪಾಪಗಳನ್ನೂ ತೊಳೆದುಹಾಕ್ತಾಳೆ” ಅಂತ ಆಚಮನ ಪಾತ್ರೆಯನ್ನ ನನ್ನ ಮುಂದೆ ಇಟ್ಟ. ನಾನು ಪಾಪ ತೊಳೆದುಕೊಳ್ಳಲಿಕ್ಕೆ ಬಂದವನಲ್ಲ. ಯಾರ ಪಾಪವನ್ನೂ ಯಾವ ನದಿಯೂ ತೊಳೆಯಲಿಕ್ಕೆ ಸಾಧ್ಯವಿಲ್ಲ. ತೀರ್ಥಸ್ನಾನದ ಉದ್ದೇಶ ಪಾಪ ತೊಳೆಯೋದಲ್ಲ. “ಗಂಗೆ ಪಾಪ ಪರಿಹಾರ ಮಾಡ್ತಾಳೆ” ಅನ್ನೋ ಮಾತಿನ ನಿಜವಾದ ಅರ್ಥ ಬೇರೆಯೇ ಇದೆ”ಅಂತ ಅವನಿಗೆ ಹೇಳಿದೆ. ಆತ ಫುಲ್ ಕನ್ಫ್ಯೂಷನ್’ನಲ್ಲಿ ನನ್ನನ್ನ ಮೇಲಿಂದ ಕೇಳಗೆ ನೋಡಿ “ಪುಣ್ಯ ಬೇಡ ಅಂತಾದ್ರೆ ಮತ್ತೆ ಕಾಶಿಗೆ ಯಾಕೆ ಬಂದಿದೀಯಾ..?” ಅಂತ ಕೇಳಿದ. ನಾವು ಪುಣ್ಯ ಬೇಕು ಅಂದಕೂಂಡು ಏನಾದ್ರೂ ಮಾಡಿದ್ರೆ ಅದು ಬರೋದಲ್ಲ. ಪಾಪ ಹೋಗಲಿ ಅಂತ ಯಾರ ಕಾಲಿಗೆ ಬಿದ್ದರೂ ಅದು ಹೋಗೋದಲ್ಲ. ಪಾಪ-ಪುಣ್ಯಗಳು ಅಷ್ಟು ಲೈಟಾಗಿರೋ ವಿಷಯ ಅಲ್ಲ. ಅಂತ ಆತನಿಗೆ ಸ್ವಲ್ಪ ತಿಳಿಯುವ ಹಾಗೆ ಹೇಳಲಿಕ್ಕೆ ಪ್ರಯತ್ನಿಸಿದೆ. ಆತ ಅದನ್ನೆಲ್ಲಾ ಕಿವಿಗೆ ಹಾಕಿಕೊಳ್ಳದೇ ಇಲ್ಲಿ ಕೋಟ್ಯಂತರ ಜನ ಬಂದು ಸ್ನಾನ ಮಾಡಿ ಹೋಗ್ತಾರೆ. ಹಂಗಾದ್ರೆ ಅವರೆಲ್ಲಾ ಹುಚ್ಚರಾ..? ಅಂತ ವಿತಂಡ ವಾದವನ್ನ ಶುರು ಮಾಡಿದ. The Majority has always been stupid and it will be. ಅವರವರ ಅಧಿಕಾರಕ್ಕೆ/ಪಾತ್ರತೆಗೆ ತಕ್ಕಂತೆ ಅದನ್ನು ಗ್ರಹಿಸ್ತಾರೆ. ಅವರ ಗ್ರಹಿಕೆಗೆ ತಕ್ಕಂತೆ ಶ್ರಧ್ಧೆಯ ಸ್ವರೂಪ ಇರುತ್ತೆ. ಶ್ರದ್ಧೆ ಎಷ್ಟು ಬಲಿಷ್ಠವಿದೆಯೋ ಅದಕ್ಕೆ ತಕ್ಕಂತೆ ಅವರಿಗೆ ಪ್ರಯೋಜನವಾಗ್ತದೆ. ಹಾಗಾಗಿಯೇ ಭಾರತದ ಋಷಿಗಳು ಎಲ್ಲರಿಗೂ ಏಕರೂಪವಾದ ಆಚರಣೆಗಳನ್ನ ವಿಧಿಸಲಿಲ್ಲ. Religion’ಗಳಲ್ಲಿ ಇರುವಂತೆ generalization ನಮ್ಮಲ್ಲಿಲ್ಲ. ಇದನ್ನೆಲ್ಲ ಹೇಳಿದರೆ ದುಬೇ ಇನ್ನೂ ಉರಿದು ಬೀಳ್ತಾನೆ ಅಂತನ್ನಿಸಿ ಅವನಿಗೊಂದಿಷ್ಟು ದುಡ್ಡು ಕೊಟ್ಟು ಎದ್ದು ಹೊರಟೆ. ದುಡ್ಡು ಕೊಟ್ಟಿದೀಯಾ.. ಸಂಕಲ್ಪ ಮಾಡಿಸ್ತೀನಿ ಬಾ ಅಂತ ಬಲವಂತ ಮಾಡತೊಡಗಿದ. ನನ್ನ ಬದಲಿಗೆ ಬೇರೆ ಯಾರಿಗಾದರೂ ಫ್ರೀಯಾಗಿ ಮಾಡಿಸು ಪರವಾಗಿಲ್ಲ ಅಂತ ಅವನಿಗೆ ಹೇಳಿ ಮೆಟ್ಟಿಲಿಳಿದು ನದಿಗೆ ಹಾರಿದೆ. ಸಂಜೆಯ ಸೂರ್ಯ ಇಳಿಯುವ ಹೊತ್ತಿನಲ್ಲಿ ಗಂಗೆ ಬಂಗಾರದ ಬಣ್ಣದಲ್ಲಿ ಬೆಚ್ಚಗೆ ಅನುಭವಕ್ಕೆ ಬರುತ್ತಿದ್ದಳು.

‪#‎ಮುಂದುವರಿಯುವುದು.