ಕಾಶಿ ಯಾತ್ರೆಯ ಅನುಭವ – 6

ಕಾಶಿ ಯಾತ್ರೆಯ ಅನುಭವ – 6
saang Veda vidyalay, 

ಸಾಂಗವೇದ ವಿದ್ಯಾಲಯದ ದುಸ್ಥಿತಿ ನೋಡಿದ ಮೇಲೆ ಮಾರನೇಯ ದಿನ ಮಧ್ಯಾಹ್ನ ಕಾಶಿಯಲ್ಲಿ ಎಷ್ಟು ಗುರುಕುಲ /ವೇದ ಪಾಠಶಾಲೆಗಳಿವೆ ಅನ್ನೋ ಮಾಹಿತಿ ತೆಗೆದೆ. ಒಟ್ಟು ಹತ್ತು ಹನ್ನೆರಡು ಕಡೆಗಳಲ್ಲಿ ಚಿಕ್ಕ ಚಿಕ್ಕ ಪಾಠಶಾಲೆಗಳಿವೆ. ಅವೆಲ್ಲವೂ ಕೂಡ ಯಾವುದೋ ಚಾರಿಟೇಬಲ್ ಟ್ರಸ್ಟ್’ಗಳು, ದೇವಸ್ಥಾನದ ಕಮಿಟಿಗಳು ನಡೆಸುವಂಥವೇ. ಅವುಗಳಲ್ಲಿ ಶ್ರೀಪೀಠ ಮಾತ್ರ HRD ಮಿನಿಸ್ಟ್ರಿಯಿಂದ ಬರೋ ಧನಸಹಾಯ ಪಡೀತಾ ಇರೋ full time ಪಾಠಶಾಲೆ. (ಶ್ರೀ ಪೀಠ ಸ್ವರೂಪಾನಂದರ ಮಠದ ಬ್ರಾಂಚ್. ಸ್ವರೂಪಾನಂದರು ಅಂದ್ರೆ ಇತ್ತೀಚೆಗೆ ಸಾಯಿ ಬಾಬಾ ಎಂಬಾತ ದೇವರಲ್ಲ. ಆತ ಒಬ್ಬ ಸಂತ ಮಾತ್ರ ಅಂತ ಹೇಳಿ ಬಿಸಿ ಬಿಸಿ ವಾತಾವರಣಕ್ಕೆ ಕಾರಣರಾಗಿದ್ದರಲ್ಲ, ಅವರೇ. ಶಂಕರಾಚಾರ್ಯ ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಜ್ಯೋತಿರ್ಮಠ ಮತ್ತು ದ್ವಾರಕಾ ಪೀಠಗಳಿಗೆ ಇವರೇ ಅಧಿಪತಿಗಳು. ಪೂರ್ವಾಶ್ರಮದಲ್ಲಿದ್ದಾಗ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಜೈಲಿಗೂ ಹೋಗಿ ಬಂದವರು.)

ಉಳಿದವೆಲ್ಲಾ ಬರೀ Part time ನಲ್ಲಿ ನಡೆಯುವಂಥ ಪಾಠಶಾಲೆಗಳು. ಆ ಎಲ್ಲದರಲ್ಲೂ ಬರೀ ಶುಕ್ಲ ಯಜುರ್ವೇದದ ಮಾಧ್ಯಂದಿನ ಶಾಖೆಯ ಪಾಠ ಮಾತ್ರ ನಡೆಯುತ್ತೆ. ಶ್ರೀಪೀಠದಲ್ಲಿ ಮಾತ್ರ ಋಗ್ವೇದ ಕೂಡ ಇದೆ ಅನ್ನೋದು ಗೊತ್ತಾಗಿ ಮಾರನೇ ದಿನ ಅಲ್ಲಿಗೆ ಹೋದೆ. ಅಧ್ಯಾಪಕರು ಎಲ್ಲೋ ಪೌರೋಹಿತ್ಯಕ್ಕೋ ಶ್ರಾದ್ಧದ್ದೂಟಕ್ಕೋ ಹೋಗಿದ್ರು. ವಿದ್ಯಾರ್ಥಿಗಳು ಗುಂಪುಗುಂಪಾಗಿ ಕುಳಿತು ಮೊಬೈಲ್ ನಲ್ಲಿ ಗೇಮ್ ಆಡ್ತಾ ಹರಟೆ ಹೊಡೀತಾ ಇದ್ರು. ಅಲ್ಲಿ ಸೀನಿಯರ್‘ಗಳಂತೆ ಕಾಣುವ ಇಬ್ಬರು ಹುಡುಗರನ್ನು ಮಾತಾಡಿಸಿದೆ. ಎಷ್ಟು ಪಾಠ ಆಗಿದೆ, ಏನು ಪಾಠ ಮಾಡ್ತಾರೆ ಅಂತ ನಾನು ಪ್ರಶ್ನೆ ಕೇಳಿದ ರೀತಿಯಿಂದಲೇ ಅವರು ನನ್ನೆಡೆಗೆ ನಿರ್ಲಕ್ಷ್ಯ ತೋರುವುದನ್ನು ನಿಲ್ಲಿಸಿ ಕೂರಲಿಕ್ಕೆ ಹೇಳಿದರು. ನನ್ನ ಪರಿಚಯ ಹೇಳಿ ನಾನು ಎಲ್ಲಾ ವಿದ್ಯಾರ್ಥಿಗಳ ಹತ್ತಿರ ಮಾತಾಡಬೇಕು ಅಂದಕೂಡಲೇ ಕರ್ಕೊಂಡು ಹೋಗಿ ತಮ್ಮ ಅಧ್ಯಾಪಕರು ಕೂರುವ ವ್ಯಾಸಪೀಠದ ಮೇಲೆ ಕೂರಿಸಿ ತಮ್ಮ ಗುರುಕುಲದ ಸ್ಥಿತಿಗತಿಗಳನ್ನೆಲ್ಲ ಹೇಳಿಕೊಂಡರು. ಹುಡುಗರೆಲ್ಲಾ ನನ್ನನ್ನ ಸುತ್ತುವರೆದಿದ್ರು. ಅಲ್ಲಿ ಅಧ್ಯಾಪಕರಾಗಿರುವವರು ಶಿವಮೊಗ್ಗದ ಕನ್ನಡಿಗರು. ಅವರು ಮೂಲ ಮಾತ್ರ ಪಾಠ ಮಾಡಲಿಕ್ಕೆ ಶಕ್ತರು, ಮುಂದಿನ ಪದ-ಕ್ರಮಾದಿಗಳಿಗೆ ಕಾಶಿಯಲ್ಲಿ ವ್ಯವಸ್ಥೆ ಇಲ್ಲ ಅನ್ನೋದು ದೊಡ್ಡ ಹುಡುಗರ ವಿಷಾದವಾಗಿತ್ತು.

ಬನಾರಸ್ ಹಿಂದೂ ಯುನಿವರ್ಸಿಟಿಯಲ್ಲಿ ಮುಂದುವರೆಸಬಹುದಲ್ಲ, ಅಲ್ಲಿ ಮದನ ಮೋಹನ ಮಾಲವೀಯರು ವೇದ ವಿಭಾಗವನ್ನೂ ಮಾಡಿದ್ದಾರಲ್ಲ ಅಂತ ಕೇಳಿದ್ದಕ್ಕೆ ಅವರೆಲ್ಲ ಮುಸಿ ಮುಸಿ ನಕ್ಕರು. BHU ನಲ್ಲಿ ವೇದ-ಶಾಸ್ತ್ರಗಳ ವಿಭಾಗವೂ ಹಾಳುಬಿದ್ದು ಹೋಗಿದೆ. ಅಲ್ಲಿ 1981ರಲ್ಲಿ ಋಗ್ವೇದದ ಪ್ರಾಧ್ಯಾಪಕರು ರಿಟೈರ್ ಆಗಿದ್ದಾರೆ. ಇವತ್ತಿನ ವರೆಗೂ ಆ ಜಾಗಕ್ಕೆ ಬೇರೆಯವರನ್ನ appoint ಮಾಡಿಕೊಂಡಿಲ್ಲ’’ ಅಂತ ಹುಡುಗರು ಹೇಳಿದರು. ಅಲ್ಲಿ ಇಲ್ಲದಿದ್ದರೆ ಬೇಡ. ಸಂಪೂರ್ಣಾನಂದ ಸಂಸ್ಕೃತ ಯೂನಿವರ್ಸಿಟಿ ಅಂತ ಹೊಸತಾಗಿ ಶುರುವಾಗಿದೆಯಲ್ಲ? ಅಲ್ಲಿನ ಪರಿಸ್ಥಿತಿ ಹೇಗಿದೆ ಅಂದದ್ದಕ್ಕೆ ಆಶುತೋಷ “ವಹಾಂ ತೊ ಸಿರ್ಫ್ ಲೆಕ್ಚರ್ ಬಾಜೀ ಚಲ್ತೀ ಹೈ, ವೇದ ವಗೈರಹ ಕುಛ್ ನಹೀಂ’’ ಅಂದ. ಅವನ articulation ಕೇಳಿ ನನಗೆ ನಗು ಬಂತು. ಅಂತಹ “ಲೆಕ್ಚರ್ ಬಾಜೀ” ಯ ಪರಿಚಯ ನನಗೂ ಚೆನ್ನಾಗಿಯೇ ಇದೆ. ದೇಶದ ಅನೇಕ ಯೂನಿವರ್ಸಿಟಿಗಳಲ್ಲಿ ವೇದಗಳ ಬಗ್ಗೆ ಶಾಸ್ತ್ರಗಳ ಬಗ್ಗೆ ರಿಸರ್ಚ್ ಮಾಡುವವರು ತುಂಬಿದ್ದಾರೆ. ಅವೆಲ್ಲವೂ ಕೂಡ ಅವರವರ ವೃತ್ತಿಗಳಲ್ಲಿ ಮುಂದುವರೆಯಲಿಕ್ಕೆ ಬಡ್ತಿ ಪಡೆಯಲಿಕ್ಕೆ ಮತ್ತು ನಮ್ಮ ವೇದಗಳಲ್ಲಿ ಇಂಥದ್ದೆಲ್ಲ ಇದೆ ಅಂತೆಲ್ಲ ಹೆಮ್ಮೆ ಪಟ್ಟುಕೊಳ್ಳುವ “ಡೇಟಾ” ದ ರಾಶಿಯನ್ನು ಬೆಳೆಸಲಿಕ್ಕೆ ಶ್ರಮ ಪಡ್ತಾ ಇದ್ದಾರೆ. ಆದರೆ ಹಾಗೆ ರಿಸರ್ಚ್ ಮಾಡುವವರು ವೈಯಕ್ತಿಕವಾಗಿ ಎಂದೂ ಯಾವುದೇ ಉಪಾಸನೆಗಳನ್ನು ಮಾಡುವವರಲ್ಲ. ಆಚರಣೆಗಳಿಲ್ಲದೇ ಕೇವಲ bookish ಆದ ಮಾಹಿತಿಯನ್ನು ಕಲೆಹಾಕಿ ಮಾಹಿತಿಯ ಗುಡ್ಡಗಳನ್ನ ಬೆಳೆಸ್ತಾ ಇದ್ದಾರೆ. ಆದರೆ ಜೀವಂತ ಸಂಪ್ರದಾಯಗಳ ಪ್ರತ್ಯಕ್ಷ ಅನುಭವ, ಮತ್ತು ವೈಯಕ್ತಿಕ ಅನುಭವವಿರುವುದಿಲ್ಲ. ಆಚರಣೆಯಂತೂ ಇಲ್ಲವೇ ಇಲ್ಲ. ಒಂದು ಋಕ್ಕನ್ನು ಸಸ್ವರವಾಗಿ ಹೇಳಲು ಬಾರದೇ ಇದ್ದರೂ ವೇದದ ಯಾವ ಯಾವ ಭಾಗದಲ್ಲಿ ಏನೇನಿದೆ ಅಂತ ಇಂಗ್ಲೀಷ್ ನಲ್ಲಿ ಲೆಕ್ಚರ್ ಬಾರಿಸುವವರ ಸಂಖ್ಯೆ ಹೆಚ್ಚಾಗಿದೆ. 2007 ರ world Vedic conference ನಲ್ಲಿ ಸೂಟು ಬೂಟು ಹಾಕಿಕೊಂಡು ಶುನಃಶೇಪನ ಬಗ್ಗೆ, ವೇದಗಳಲ್ಲಿನ ಅಪ್ ತತ್ವದ ಬಗ್ಗೆ ರಿಸರ್ಚ್ ಪೇಪರ್ ಓದಿ ಹೊರಗೆ ಬಂದು ಎರಡೆರಡು ಸಿಗರೇಟ್ ಸುಟ್ಟು ಮತ್ತೆ ಒಳಗೆ ಬಂದು ತಮ್ಮ TA-DA ಬಿಲ್ಲುಗಳನ್ನ, ಪೇಮೆಂಟನ್ನ ಖಾತರಿ ಮಾಡಿಕೊಂಡು ಸಂಜೆ ಬಾರಿಗೆ ಹೋಗಿ ಬರುತ್ತಿದ್ದವರನ್ನ ನೋಡಿ ದಂಗಾಗಿದ್ದೆ.

ಶ್ರೀಪೀಠದ ಹುಡುಗರು ಒಂದೆರಡು ಋಕ್ಕಿಗಾದರೂ ‘’ಘನ” ಹೇಳಿಕೊಡಿ, ನಾವು ರೆಕಾರ್ಡ್ ಮಾಡ್ಕೊಳ್ತೀವಿ ಅಂತ ದುಂಬಾಲು ಬಿದ್ದರು. ನಿಮ್ಮ ಅಧ್ಯಾಪಕರು ಕೂರುವ ಪೀಠದ ಮೇಲೆ ಕೂತು ಅವರ ಅನುಮತಿಯಿಲ್ಲದೇ ನಿಮಗೆಲ್ಲ ಪಾಠ ಮಾಡುವುದು ಸರಿಯಲ್ಲ. ಅವರು ಬರಲಿ. ನಾಳೆ ನೋಡೋಣ ಅಂದದ್ದಕ್ಕೆ ಹುಡುಗರು ಕೇಳಲಿಲ್ಲ. ಪ್ರಸಿದ್ಧವಾಗಿರುವ ನಾಲ್ಕಾರು ಋಕ್ಕುಗಳಿಗೆ ಪದಛ್ಚೇದ, ಅನುಲೋಮ-ವಿಲೋಮ, ಸಂಧಿ-ಸ್ವರನಿಯಮಗಳನ್ನ ಬರೆಸಿ ಘನ ಹೇಳಿಕೊಟ್ಟೆ. ಮೊಬೈಲ್ ನಲ್ಲೇ ರೆಕಾರ್ಡ್ ಮಾಡಿಕೊಂಡರು.
ಇಡೀ ಕಾಶಿಯಲ್ಲಿ ಒಬ್ಬರೂ ಋಗ್ವೇದ ಘನಪಾಠ್ಗಳಿಲ್ಲ. ಯಾವುದಾದರೂ ದೊಡ್ಡ ಯಜ್ಞ ಅಥವಾ ಪಾರಾಯಣ ಇದ್ದರೆ ಪುಣೆಯಿಂದ ಒಬ್ಬರು ಘನಪಾಠಿ ಬಂದು ಹೋಗ್ತಾರೆ. ಹಾಗಾಗಿ ನೀವು ಇಲ್ಲಿಗೇ ಬಂದು settle ಆಗಿಬಿಡಿ. “ಆಪ್ ಯಹಾಂ.. ಆಯೇಂಗೇ ತೋ, ಆಪ್ ಕಾ ಹೀ ದಬ್ ದಬಾ ಹೋ ಜಾಯೇಗಾ’’ ನಾವು ಸ್ವರೂಪಾನಂದರ ಬಳಿ ರಿಕ್ವೆಸ್ಟ್ ಮಾಡ್ತೀವಿ. ನೀವೇ ಇಲ್ಲಿಗೆ ಅಧ್ಯಾಪಕರಾಗಿ ಬಂದುಬಿಡಿ ಅಂತೆಲ್ಲ ಆಶುತೋ಼ಷ ಅತ್ಯುತ್ಸಾಹ ತೋರಿಸಿದ. “ದಬ್ ದಬಾ ಹೋ ಜಾಯೆಗಾ” ಅನ್ನೋ ಅವನ ಮಾತಿಗೆ ನನಗೆ ನಗು ಬಂತು. ಅವನ ಆ ಮಾತಿನ ಅರ್ಥ ಕಾಶಿಯಲ್ಲಿ ಫೇಮಸ್ ಆಗಬಹುದು, ಸಾಕಷ್ಟು ದುಡ್ಡು ಮಾಡಬಹುದು, ದೊಡ್ಡ ದೊಡ್ಡವರ ಜೊತೆಗೆ ಒಡನಾಡಬಹುದು ಇತ್ಯಾದಿ ಇತ್ಯಾದಿ. ಹತ್ತು ವರ್ಷದ ಹಿಂದೆ ನಾನು ಹೇಗೆ ಯೋಚಿಸುತ್ತಿದ್ದೆನೋ ಹಾಗೆಯೇ ಅವನು ಇವತ್ತು ಆಲೋಚಿಸ್ತಾ ಇದ್ದಾನೆ. ನಾನು ಮಾಡಬೇಕಾದಷ್ಟು “ದಬ್ ದಬಾ” ಮಾಡಿ ಅದರಿಂದ ಹೊರಬಂದು ಆಗಿದೆ.

ಮಾರನೇಯದ ದಿನ BHU ಮತ್ತು ಸಂಪೂರ್ಣಾನಂದ ಎರಡೂ ಯೂನಿವರ್ಸಿಟಿಗಳ ಕ್ಯಾಂಪಸ್ ನೋಡಿ, ಸಾಧ್ಯವಾದರೆ ಸಂಪೂರ್ಣಾನಂದ ಸಂಸ್ಕೃತ ಯೂನಿವರ್ಸಿಟಿಯ VC ಶ್ರೀ ಕುಟುಂಬ ಶಾಸ್ತ್ರಿಗಳನ್ನ ಬೇಟಿ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಅಲ್ಲಿಗೆ ಹೋಗಲಿಕ್ಕೆ ಕನಿಷ್ಠ ಅಂಗಿ ಹಾಕಿಕೊಂಡು ಚಪ್ಪಲಿ ಮೆಟ್ಟಿಕೊಂಡು ಹೋಗಬೇಕು. ಈಗಿರುವ ವೇಷದಲ್ಲೇ ಹೋದರೆ ವಾಚ್ ಮೆನ್ ಗಳು ಒಳಗೂ ಬಿಡಲಿಕ್ಕಿಲ್ಲ ಅನಿಸಿತು. ಆದರೆ ಹನ್ನೊಂದು ದಿನ ಇದೇ ರೀತಿ ಇರಲಿಕ್ಕೆ ನಿರ್ಧಾರ ಮಾಡಿದ್ದೆ. ಮುಂದಿನ ಬಾರಿ ಕಾಶಿಗೆ ಬಂದಾಗ ಅದೆಲ್ಲಾ ನೋಡಿದರಾಯ್ತು ಅಂದುಕೊಂಡು ಹೊರಟು ಪುಸ್ತಕದಂಗಡಿಯ ಶುಕ್ಲಾ ನ ಬಳಿಗೆ ಬಂದೆ. ಕಾಶೀ ಪಂಡಿತರು ಇಡೀ ದೇಶದಲ್ಲಿ ಫೇಮಸ್ಸು. ಆದರೆ ನಿಮ್ಮ ಈ ಕಾಶಿಯಲ್ಲಿ ಪಂಡಿತರೇ ಸಿಕ್ತಾ ಇಲ್ಲವಲ್ಲ..? ಅಂತ ತಮಾಷೆ ಮಾಡಿದೆ. ಅಂತಹ ಪಂಡಿತರ ಜನರೇಷನ್ ಹೊರಟುಹೋಗಿದೆ. ಮುಂದಿನ ತಲೆಮಾರು ತಯಾರಾಗಿಲ್ಲ. ಅದಕ್ಕೆ ತಕ್ಕ ವ್ಯವಸ್ಥೆಯೂ ಅಲ್ಲಿಲ್ಲ. ಆದರೆ ಕಾಶೀ ಪಂಡಿತರು ಅನ್ನೋ ಪ್ರಸಿದ್ಧಿ ಮಾತ್ರ ಉಳಿದಿದೆ ಅನ್ನೋದು ಸಹಜವಾಗಿ ನನಗೆ ಅರ್ಥವಾಗಿತ್ತು. ಶುಕ್ಲಾ ಕೂಡ ತಮಾಷೆ ಮೂಡಿನಲ್ಲಿ ‘’ನಿಮಗೆ, ವೇದ-ಶಾಸ್ತ್ರ ಪಂಡಿತರು ಸಿಗೋದಿಲ್ಲ, ಆದರೆ ಅಘೋರಿಗಳು, ತಾಂತ್ರಿಕರು, ನಾಗಾಗಳು, ಭಾಗವತ ಪ್ರವಚನ ಮಾಡೋರು ಬೇಕಾದಷ್ಟು ಜನ ಸಿಕ್ತಾರೆ. ಬೇಕಾದ್ರೆ ಭೇಟಿ ಮಾಡಿಸ್ತೀನಿ ಅಂದ್ರು. ಬೇಡಪ್ಪಾ ಬೇಡ. ಅಘೋರಿಗಳ ಸಹವಾಸ ಬೇಡ. ಶುದ್ಧ ಅದ್ವೈತಿಗಳು, ಮೀಮಾಂಸಕರು, ನೈಯಾಯಿಕರು ಯಾರಾದ್ರೂ ಇದ್ರೆ ಹೇಳಿ’’ ಅಂದೆ. ಅಕಾಡೆಮಿಕ್ ಪಂಡಿತರು ಒಂದಿಷ್ಟು ಜನ ಇದ್ದಾರೆ. ಅಂಥವರು ಬರೆಯೋ ಪುಸ್ತಕಗಳಿಂದಲೇ ನಮ್ಮ ಚೌಖಾಂಬಾ ಪುಸ್ತಕ ಪ್ರಕಾಶನ ನಡೀತಿರೋದು. ಆದರೆ ನೀವು ಹುಡುಕ್ತಾ ಇರೋ ಪಾರಂಪರಿಕ ವಿದ್ವಾಂಸರು ಇಲ್ಲಿಲ್ಲ. ಅಂಥವರು ಬೇಕಂದ್ರೆ ನೀವು ತಮಿಳುನಾಡು-ಆಧ್ರಗಳಿಗೇ ಹೋಗ್ಬೇಕು. ಅಂತ ಶುಕ್ಲಾ ವಸ್ತುಸ್ಥಿತಿಯನ್ನ ಒಂದೇ ಮಾತಿನಲ್ಲಿ ಹೇಳಿ ಮುಗಿಸಿದರು.

“ಆಚಾರಹೀನಂ ನ ಪುನಂತಿ ವೇದಾಃ”. “ಆಚರಣೆಯಿಲ್ಲದ ಪಂಡಿತರು ಟೇಪ್ ರೆಕಾರ್ಡರ್ ಗಳಿದ್ದ ಹಾಗೆ. ರೆಕಾರ್ಡ್ ಮಾಡಿದ್ದನ್ನ ಒದರೋದಷ್ಟೇ ಅದಕ್ಕೆ ಗೊತ್ತು. ಜೀವಂತ ಸಂಪ್ರದಾಯವಿಲ್ಲ. ಅನುಷ್ಠಾನವಿಲ್ಲ. ಅನುಭವವಿಲ್ಲ. ಸಾಧನೆಯಿಲ್ಲ. ಅಂಥವರೆಲ್ಲಾ ಕೂಲಿಗಳು ಇದ್ದಹಾಗೆ. ಇತರೆ ಲೌಕಿಕ ವಿದ್ಯೆಗಳ ಹಾಗೆ ಅದನ್ನೂ ಒಂದು ವೃತ್ತಿಯ ಆಧಾರ ಮಾಡ್ಕೊಂಡು ವೇದಗಳನ್ನ, ಶಾಸ್ತ್ರಗಳನ್ನ ಮಾರಿ ಬದುಕು ಕಟ್ಟಿಕೊಳ್ಳೋದು ಕೂಲಿ ಕೆಲಸವೇ. ಕೂಲಿ ಮಾಡೋದು ಶೂದ್ರನ ಧರ್ಮ. ಹಾಗಾಗಿ ಆಧುನಿಕ ಕಾಲದ ವೇದ-ಶಾಸ್ತ್ರ ಪಂಡಿತರೆಲ್ಲ ಶೂದ್ರರೇ ಹೊರತು ಅವರು ಬ್ರಾಹ್ಮಣರಲ್ಲ” ಅಂತ ಬಿಡಿ ಸನ್ಯಾಸಿಯೊಬ್ಬರು ನನಗೆ ಹೇಳಿದ್ದರು. ಅವರ ಮಾತನ್ನ ಶುಕ್ಲಾಗೆ ಹೇಳಿದೆ. ಅವರು ಜೋರಾಗಿ ನಕ್ಕು ಸರಿಯಾಗಿ ಹೇಳಿದ್ದಾರೆ ಬಿಡಿ, ಅದರಲ್ಲೇನು ಸಂಶಯವಿಲ್ಲ ಅಂತ ಗೋಣು ಹಾಕಿದರು. ಇನ್ನು ಈ ಕಾಶಿಯ ಪಂಡಿತರ ಬಗ್ಗೆ ತಲೆ ಕೆಡಿಸಿಕೊಂಡದ್ದು ಸಾಕು. ನನ್ನ ಕೆಲಸವನ್ನ ಸರಿಯಾಗಿ ಮುಗಿಸಿಕೊಳ್ಳಬೇಕು, ಯಾವುದರ ಬಗ್ಗೆಯೂ ಗಹನವಾಗಿ ಆಲೋಚನೆ ಮಾಡೋದು ಬೇಡ. ತೀವ್ರವಾದ ಆಲೋಚನೆ ಸಾಧನೆಗೆ ಬಾಧಕ. ಆಲೋಚನೆಗಳನ್ನ ಬದಿಗಿಟ್ಟು ಶರೀರವನ್ನು ಯೋಗ್ಯರೀತಿಯಲ್ಲಿ ಪಳಗಿಸಿದಾಗ ಮಾತ್ರ ಆಗಬೇಕಾದ ಬದಲಾವಣೆ ಆಗುತ್ತೆ ಅನ್ನೋದನ್ನ ನೆನಪು ಮಾಡ್ಕೊಂಡು ಶುಕ್ಲಾಗೆ ವಿದಾಯ ಹೇಳಿ ಸ್ನಾನಕ್ಕೆ ನದಿಯ ಕಡೆಗೆ ಹೊರಟಾಗ ಸಮಯ ಸಂಜೆ ಐದು ಗಂಟೆಯಾಗಿತ್ತು.

‎ಮುಂದುವರಿಯುವುದು