ಕಾಶಿ ಯಾತ್ರೆಯ ಅನುಭವ – 3
ಇವತ್ತು ರಾತ್ರಿ ಇಲ್ಲೇ ಘಾಟಿನ ಬಳಿ ಮಲಗಿದರಾಯ್ತು. ಮುಂಜಾನೆ ನನ್ನ ಕೆಲಸಗಳೆಲ್ಲ ಮುಗಿದ ಮೇಲೆ ಮಧ್ಯಾಹ್ನದ ಹೊತ್ತಿಗೆ ರೂಮ್ ನೋಡಿಕೊಂಡರಾಯ್ತು ಅನ್ನೋ ನಿರ್ಧಾರ ಮಾಡಿ ಬ್ಯಾಗನ್ನೇ ತಲೆದಿಂಬು ಮಾಡಿಕೊಂಡು ಹಾಗೆಯೇ ಕಲ್ಲುಗಳಿಂದ ಕಟ್ಟಿದ ಮೆಟ್ಟಿಲ ಮೇಲೆ ಒರಗಿಕೊಂಡೆ. ಹತ್ತಿರದಲ್ಲೇ ಇದ್ದ ಹರಿಶ್ಚಂದ್ರ ಘಾಟಿನಲ್ಲಿ ಚಿತೆಗಳು ಉರಿಯುತ್ತಿದ್ದವು. ಗಂಗೆಯ ಮೇಲೆ ಹಾಯ್ದು ಬರುತ್ತಿದ್ದ ಗಾಳಿ ಹಾಯಾಗಿತ್ತು. ಮನಸ್ಸಿನಲ್ಲಿ ಏಳುತ್ತಿದ್ದ ಆಲೋಚನೆಗಳ ಚಂಡಮಾರುತದಿಂದಾಗಿ ನಿದ್ದಬಾರದೇ ಹೊರಳಾಡಿ ಕೊನೆಗೆ ಎದ್ದುಕುಳಿತು ಗಂಗೆಯನ್ನು ದಿಟ್ಟಿಸುತ್ತಿದ್ದೆ.
ಹಾಗೆಯೇ ಮೆಟ್ಟಿಲಿಳಿದು ಗಂಗೆಯಲ್ಲಿ ಕಾಲು ಇಟ್ಟುಕೊಂಡು ಕುಳಿತರೆ ಅಲೌಕಿಕವಾದ ಸಮಾಧಾನವಾಗತೊಡಗಿತ್ತು. ಹಿಂದಿನಿಂದ ಯಾರೋ ಕೂಗಿದಂತಾಗಿ ತಿರುಗಿ ನೋಡಿದರೆ ಬಿಳಿ ಬಟ್ಟೆ ತೊಟ್ಟ ವೃದ್ಧರೊಬ್ಬರು ಎತ್ತರದ ಕಟ್ಟೆಯೊಂದರ ಮೇಲೆ ನಿಂತಿರುವುದು ಕಾಣಿಸಿತು. ಅಲ್ಲೇನು ಮಾಡ್ತಿದ್ದೀಯಾ ಇಷ್ಟ್ಹೊತ್ತಲ್ಲಿ ಅಂತ ಬೈದರು. ಅವರ ಎಡಗೈಯಲ್ಲಿ ಪುಸ್ತಕ, ಬಲಗೈಯಯಲ್ಲಿ ಟಾರ್ಚ್ ಇತ್ತು. ಮೆಟ್ಟಿಲಿಳಿದು ಹತ್ತಿರಕ್ಕೆ ಬಂದು ನನ್ನನ್ನು ಪರೀಕ್ಷಿಸುವಂತೆ ಮೇಲಿಂದ ಕೆಳಗೆ ನೋಡಿದರು. ಅಂಗಿ ಹಾಕದೇ ಬರೀ ಪಂಚೆಯುಟ್ಟಿದ್ದ ನನ್ನನ್ನ ನೋಡಿ “ಮದ್ರಾಸಿ ಹೋ ಕ್ಯಾ? ” ಅಂತ ಕೇಳಿದರು. ನಾನು ಅವರಿಗೆ ಉತ್ತರಿಸದೇ ಅವರ ಕೈಯಲ್ಲಿದ್ದ ಪುಸ್ತಕದ ಹೇಸರನ್ನು ಇಣುಕಿ ನೋಡಿದೆ. “ಲಘುವಾಕ್ಯವೃತ್ತಿ” ಅನ್ನೋ ಶಂಕರಾಚಾರ್ಯರ ಚಿಕ್ಕ ಪ್ರಕರಣ ಗ್ರಂಥ ಅದು. ”ಇದು ಹಿಂದೀ ಟೀಕಾ-ವಿವರಣೆ ಸಮೇತ ಇರೋದಾ..? ಇಷ್ಟೊಂದು ದಪ್ಪ ಇದೆಯಲ್ಲ..? ಚೌಖಾಂಬಾ ದವರು ಪಬ್ಲಿಷ್ ಮಾಡಿರೋದಾ..?” ಅಂತ ಕೇಳಿದೆ. ಅವರು ಆಶ್ಚರ್ಯದಿಂದ ಮತ್ತೊಮ್ಮೆ ನನ್ನನ್ನು ಮೇಲಿಂದ ಕೆಳಗೆ ನೋಡಿ ಈ ಬಾರಿ ಬಹುವಚನದಲ್ಲಿ ”ಎಲ್ಲಿಂದ ಬಂದಿದೀರಿ..? ಅಂತ ವಿಚಾರಿಸಿದರು. ಅವರು ಅಲ್ಲೇ ಘಾಟ್ ನ ಬಳಿಯಲ್ಲಿರುವ ಕರಪಾತ್ರೀ ಧಾಮದ ಸ್ವಾಮಿಗಳು. ನನ್ನನ್ನು ಬಲವಂತವಾಗಿ ಕರಪಾತ್ರೀ ಧಾಮಕ್ಕೆ ಕರೆತಂದರು. ಕೈಯಲ್ಲಿ ಒಂದು ಪಾತ್ರೆ ಹಿಡಿದುಕೊಂಡು ಭಿಕ್ಷೆ ಎತ್ತಿ ದೊಡ್ಡ ಸಂಸ್ಥೆ ಕಟ್ಟಿದ, ಬಲಹೀನ ವರ್ಗವನ್ನು ಮೇಲೆತ್ತುವ ಕೆಲಸ ಮಾಡಿದ “ಕರಪಾತ್ರೀ ಮಹಾರಾಜ್” ಅವರ ಆಶ್ರಮ ಅದು. ಅವರ ಬಗ್ಗೆ ನನಗೆ ಒಂದಷ್ಟು ಮಾಹಿತಿ ಇತ್ತು. ಆದರೆ ಅವರು ಒಂದು ರಾಜಕೀಯ ಪಕ್ಷ ಕೂಡ ಕಟ್ಟಿದ್ದರು ಅನ್ನೋದು ಗೊತ್ತಿರಲಿಲ್ಲ. ಅವರ ಸಮಾಧಿ ಸ್ಥಳದ ಬಳಿ ದಿವ್ಯವಾದ ಶಾಂತಿಯಿತ್ತು. ನನ್ನನ್ನು ಅಲ್ಲಿಗೆ ಕರ್ಕೊಂಡು ಹೋದ ಆ ಸಾಧು ”ಇಲ್ಲೇ ಆಶ್ರಮದಲ್ಲೇ ಇದ್ದುಕೊಂಡು ನಿನ್ನ ಅನುಷ್ಠಾನ ಮಾಡ್ಕೋಬಹುದು. ನಿನ್ನಂಥವನು ಬಂದಿದ್ದು ನನಗೂ ಸಂತೋಷ ” ಅಂತ ನಾನು ಕೇಳದೆಯೇ ಆತಿಥ್ಯ ನೀಡಿದರು. ಅವರ ಹೆಸರು ಅಭೇದಾನಂದ.
”ನಾನು ಸಂಚಯ ಮಾಡುವ ಗೃಹಸ್ಥ. ವಿದ್ಯಾರ್ಥಿಯೂ ಅಲ್ಲ, ಸನ್ಯಾಸಿಯೂ ಅಲ್ಲ. ಹಾಗಾಗಿ ನನಗೆ ಯಾರಿಂದಲೂ ಏನನ್ನೂ ಉಚಿತವಾಗಿ ಪಡೆಯುವ ಅಧಿಕಾರ ಇಲ್ಲ. ಪ್ರತಿಗ್ರಹ ಮಾಡುವ ಹಾಗಿಲ್ಲ. ಅನ್ನವನ್ನೂ ಕೂಡ. ಹಾಗಾಗಿ ನಾನು ನಿಮ್ಮಲ್ಲಿ ಉಳಿದುಕೊಳ್ಳೋದು ನನಗೆ ಒಪ್ಪಿಗೆಯಾದರೂ ಅದಕ್ಕೆ ಪ್ರತಿಯಾಗಿ ನೀವು ತಕ್ಕಷ್ಟು ದ್ರವ್ಯ ತೊಗೋಬೇಕು, ಇಲ್ಲಾ ಅಂದ್ರೆ ನಾನು ಹತ್ತಿರದಲ್ಲೇ ಯಾವುದಾದರೂ ಲಾಡ್ಜ್ ನೋಡ್ಕೋಳ್ತೀನಿ” ಅಂತ ಕಂಡೀಷನ್ ಹಾಕಿದೆ. “ನಮ್ಮಲ್ಲಿ ಕೋಣೆಗೆ ಹಣ ಪಡೀತೀವಿ. ನೂರಾರು ಜನರಿಗೆ ನಿತ್ಯ ಅನ್ನದಾನ ನಡೆಯುತ್ತೆ. ಹಾಗಾಗಿ ಊಟಕ್ಕೆ ಹಣ ಪಡೀಲಿಕ್ಕಾಗೋದಿಲ್ಲ. ನಿಮಗೆ ತೋಚಿದಷ್ಟು ಡೊನೇಷನ್ ಕೊಡಬಹುದು. ಜೊತೆಗೆ ನಮ್ಮಲ್ಲಿ ಊಟ ಬಡಿಸಲಿಕ್ಕೆ ಜನ ಕಡಿಮೆ ಇರ್ತಾರೆ. ನೀವು ಊಟ ಬಡಿಸೋ ಕೆಲಸ ಬೇಕಾದರೂ ಮಾಡಬಹುದು” ಅಂದರು. ನನಗೂ ಅಂಥದ್ದೇನಾದರೂ activity ಬೇಕಾಗಿತ್ತು. ಖುಷಿಯಿಂದ ಒಪ್ಪಿಕೊಂಡೆ.
ಐದನೇಯ ಮಹಡಿಯಲ್ಲಿ ನೀರಿನ ಟ್ಯಾಂಕ್ ನ ಬುಡಲ್ಲಿರುವ ಒಂಟಿಕೋಣೆಯನ್ನು ತೋರಿಸಿದರು. ”ಇಲ್ಲಿ ಬೇಕಾದಷ್ಟು ಏಕಾಂತ ಇರುತ್ತೆ. ಯಾರೂ ಬರೋದಿಲ್ಲ. ಈಗ ಮಲ್ಕೊ, ಬಹಳ ಹೊತ್ತಾಯ್ತು” ಅಂತ ಹೇಳಿ ಅವರು ಹೋದಕೂಡಲೇ ನಾನು ಆ ನೀರಿನ ಟ್ಯಾಂಕ್ ಹತ್ತಿನಿಂತು ಸುತ್ತಲೂ ನೋಡಿದೆ. ಮಧ್ಯರಾತ್ರಿಯಲ್ಲಿ ದೀಪಗಳ ಬೆಳಕಿನಲ್ಲಿ ಬಿದಿಗೆಯ ಚಂದ್ರನ ಹಾಗೆ ಡೊಂಕಾದ ಆಕಾರದಲ್ಲಿ ಸಾಲು ಸಾಲು ಘಾಟ್ ಗಳು. ಅವೆಲ್ಲವನ್ನು ಹಾವಿನಹಾಗೆ ಬಳಸಿಕೊಂಡು ನಿಃಶಬ್ದವಾಗಿ ಹರಿಯುತ್ತಿರುವ ಗಂಗೆ. ಮರದ ಟೊಂಗೆಗೆ ಜೇನು ಹುಳುಗಳು ಮೆತ್ತಿದ ಹಾಗೆ ದಂಡೆಗೆ ಒತ್ತಿಕೊಂಡಿರುವ ನೂರಾರು ದೋಣಿಗಳು. ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಎರಡೂ ಘಾಟ್ ಗಳಲ್ಲಿ ಉರಿಯುತ್ತಿರುವ ಚಿತೆಗಳು ಎಲ್ಲಾ ಸೇರಿ ಅದ್ಭುತವಾದ ದೃಶ್ಯವನ್ನು ಕಟ್ಟಿಕೊಡ್ತಾ ಇದ್ದವು. ಇನ್ನು ಹನ್ನೊಂದು ದಿನಗಳ ಕಾಲ ಫೋನ್ ನ ಕೆಲಸ ಇಲ್ಲವಾದ್ದರಿಂದ ಒಳಬರುವ ಕರೆಗಳನ್ನೆಲ್ಲ ಆಫೀಸಿನ ನಂಬರಿಗೆ Divert ಮಾಡಿ ಮೊಬೈಲಿನ ಕುತ್ತಿಗೆ ಹಿಚುಕಿ off ಮಾಡಿ ಬ್ಯಾಗಿನ ಬುಡಕ್ಕೆ ಹಾಕಿಟ್ಟೆ.
ಮುಂಜಾನೆ ನಾಲ್ಕು ಘಂಟೆಗೆ ನಿದ್ದೆಯಿಂದ ಎದ್ದು ಘಾಟ್ ಗೆ ಹೋದರೆ ಆಗಲೇ ಸಾಕಷ್ಟು ಜನ ಸ್ನಾನದಲ್ಲಿ ತೊಡಗಿದ್ದರು. ಸ್ನಾನ-ಸಂಧ್ಯಾದಿಗಳನ್ನ ಮುಗಿಸಿ ವಿಷ್ಣು ಸಹಸ್ರನಾಮ ಹೇಳಿಕೊಳ್ತಾ ವಿಶ್ವನಾಥನ ಬಳಿಗೆ ಬಂದರೆ ಬೆಳಗಿನ ಕಾಕಡಾರತಿ ನಡೆಯುತ್ತಿತ್ತು. ಅಲ್ಲೇ ಕುಳಿತು ಹತ್ತು ಬಾರಿ ವಿಷ್ಣು ಸಹಸ್ರನಾಮ ಮುಗಿಸಿ, ಹನ್ನೊಂದು ಬಾರಿ ರುದ್ರಾಧ್ಯಾಯ ಹೇಳಿ ಮುಗಿಸುವಷ್ಟರಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಸಮಯ ಒಂಭತ್ತೂವರೆಯಷ್ಟಾಗಿತ್ತು. ಒಂದು ದಿನಕ್ಕೆ ಹತ್ತು ಬಾರಿ ವಿಷ್ಣುಸಹಸ್ರನಾಮ, ಹತ್ತುಸಾವಿರ ತಾರಕ ನಾಮ, ದಿನಕ್ಕೊಂದು ಬಾರಿ ಏಕಾದಶವಾರ ರುದ್ರಪಾಠ ಹೀಗೆ ದಿನಚರಿ ಹಾಕಿಕೊಂಡಿದ್ದೆ. ಇದರ ಪ್ರಕಾರ ಹನ್ನೊಂದು ದಿನದಲ್ಲಿ 121 ರುದ್ರ ಮುಗಿದು ಒಂದು ”ಲಘುರುದ್ರ”ದ ಸಂಖ್ಯೆ ಪೂರ್ತಿಯಾಗ್ತದೆ. ಒಂದು ಲಕ್ಷ ತಾರಕ ನಾಮ, ಒಂದು ಲಕ್ಷ ವಿಷ್ಣುನಾಮ ಸ್ಮರಣೆ ಆಗ್ತದೆ. ಇದಿಷ್ಟು ಆಗಲೇಬೇಕು. ಸಮಯ ಉಳಿದರೆ ಇನ್ನೇನಾದ್ರೂ ನೋಡೋಣ ಅನ್ನೋ ಯೋಜನೆ ನನ್ನದಾಗಿತ್ತು. ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳಗಿನ ಜಪಗಳು ಮುಗಿದದ್ದರಿಂದ ತಾರಕನಾಮದ ಸಂಖ್ಯೆಯನ್ನು ದಿನಕ್ಕೆ 20 ಸಾವಿರದಂತೆ ಹತ್ತು ದಿನಗಳಲ್ಲಿ ಎರಡು ಲಕ್ಷಕ್ಕೆ ಏರಿಸಿಕೊಂಡೆ.
ಸಂಜೆ ಪೂರ್ತಿ ಅದೇ ಕೆಲಸ ಅಂತ ನಿರ್ಧಾರ ಮಾಡಿಕೊಂಡು ನನ್ನ ರೂಮಿಗೆ ಹೋಗಿ ಯೋಗಸಾಧನೆಗೆ ಕುಳಿತುಕೊಂಡೆ. ಹಿಂದಿನ ದಿನ ನಡೆದ ಅಪಘಾತದಿಂದಾಗಿ ಜಾಗ್ರತೆಯಾಗಿ ಸಮಾಧಾನದಿಂದ ಕ್ರಿಯೆ ಮಾಡಿ ಮುಗಿಸಿದೆ. ಇವತ್ತು ಯಾವುದೆ ಅಡೆ ತಡೆಯಿಲ್ಲದೇ ಸರಾಗವಾಗಿ ನಡೆಯಿತು. ಕೊನೆಯಲ್ಲಿ ಹುಬ್ಬುಗಳ ಮಧ್ಯದಲ್ಲಿ ದೃಷ್ಟಿ ನೆಟ್ಟು ಕುಳಿತಾಗ ಒಂದೂವರೆ ಘಂಟೆಗಳ ಕಾಲ ದೀರ್ಘ ಶಕ್ತಿಪ್ರವಾಹ ಹರಿಯಿತು. ಕೋಣೆಯ ಬಾಗಿಲು ಹಾಕಿ ಕೆಳಗಿಳಿದು ಬಂದರೆ ಮಧ್ಯಾನ್ಹದ ಊಟದ ಸಮಯವಾಗಿತ್ತು. ಆದರೆ ನಾನು ಹನ್ನೊಂದು ದಿನಗಳ ಕಾಲ ಸೂರ್ಯಾಸ್ತ ಆಗುವವರೆಗೂ ಆಹಾರ ಸೇವಿಸದೇ ಇರಲು ನಿರ್ಧರಿಸಿದ್ದೆ. ಅದನ್ನ ”ಏಕಭುಕ್ತವ್ರತ” ಅಂತಾರೆ. ದಿನಕ್ಕೆ ಒಂದೇ ಊಟ. ಅದೂ ಕೂಡ ಸೂರ್ಯಾಸ್ತ ಆದ ಮೇಲೆ. ಹಾಗೆ ಮಾಡೋದರಿಂದ ಶರೀರದಲ್ಲಿನ 72 ಸಾವಿರ ನಾಡಿಗಳೂ ಚುರುಕುಗೊಳ್ತವೆ. ಬುದ್ಧಿ ಸ್ಥಿರ ಮತ್ತು ತೀಕ್ಷ್ಣವಾಗ್ತದೆ. detoxification ನ ಅನೇಕ ವಿಧಗಳಲ್ಲಿ ಇದೂ ಒಂದು. ಯಜುರ್ವೇದದ ಅರುಣಕೇತುಕ ಚಯನದಲ್ಲಿ ”ಚತುರ್ಥ ಕಾಲ ಪಾನ-ಭುಕ್ತಃ ಸ್ಯಾತ್” ಅಂತ ಹೇಳಿದ್ದು ಇದನ್ನೇ. ಊಟ ಬಡಿಸಲಿಕ್ಕೆ ನಿಂತಿದ್ದ ಸ್ವಯಂ ಸೇವಕರ ಜೊತೆ ಸೇರಿ ದೊಡ್ಡ ದೊಡ್ಡ ಪಾತ್ರೆಗಳನ್ನು ಹಿಡಿದು ನಾಲ್ಕು ಪಂಕ್ತಿಗೆ ಊಟ ಬಡಿಸುವಷ್ಟರಲ್ಲಿ ನನ್ನ ಬೆನ್ನು ಮೂಳೆ ರಾಗ ಹಾಡತೊಗಿತ್ತು. ನಾನು ಸುಸ್ತು ಹೊಡೆದು ಅಲ್ಲೇ ಕುಳಿತು ಸುಧಾರಿಸಿಕೊಳ್ಳುತ್ತಿದ್ದೆ. ದೇಹ ದಣಿದು ಬೆನ್ನು ಮೂಳೆ ನೋಯುತ್ತಿದ್ದರೂ ಮನಸ್ಸು ಮಾತ್ರ ಶಾಂತವಾಗಿ ಸ್ಥಿರವಾಗಿತ್ತು.
ಅಪರಿಚಿತ ಜನರ ಜೊತೆ ಸೇರಿ ಮತ್ತಷ್ಟು ಅಪರಿಚಿತರಿಗಾಗಿ ಕೆಲಸ ಮಾಡುವ ಆನಂದ ಅನುಭವಿಸಿದವನಿಗೆ ಮಾತ್ರ ಗೊತ್ತು. ಮೇಲ್ವಿಚಾರಣೆಗೆ ನಿಂತಿದ್ದ ಅಭೇದಾನಂದರು ನನ್ನನ್ನು ನೋಡಿ “ಕ್ಯಾ ದತ್ತಾ ಮಹಾರಾಜ್, ಥಕ್ ಗಯೆ..?” ಅಂತ ಕಾಲೆಳೆತದ ಶೈಲಿಯಲ್ಲಿ ನಕ್ಕರು. ನಾನು ರಾತ್ರಿ ಅವರನ್ನು ಸರಿಯಾಗಿ ಗಮನಿಸಿರಲಿಲ್ಲ. ಅವರ ವಯಸ್ಸು ಅರವತ್ತರ ಮೇಲಾಗಿದೆ. ಆದರೆ ಶರೀರ ಯುವಕನಂತೆಯೇ ಇದೆ. ಕಣ್ಣುಗಳಲ್ಲಿ ಎಲ್ಲವನ್ನೂ ಗಮನಿಸಿಬಲ್ಲ. ನಿಭಾಯಿಸಬಲ್ಲ ಚುರುಕುತನ. ಲೋಕವನ್ನು ಸಲೀಸಾಗಿ ನಿಭಾಯಿಸಬಲ್ಲ ಸಾಮರ್ಥ್ಯ ಮತ್ತು ಜ್ಞಾನ ಎರಡರ ಪಕ್ವತೆ ಮುಖದಲ್ಲಿ ಎದ್ದುಕಾಣುತ್ತಿತ್ತು. ಮಧ್ಯಾಹ್ನ ಕಾಶಿಯ ಬೀದಿಗಳಲ್ಲಿ ಸ್ವಲ್ಪ ಸುತ್ತಾಡಿ ಬಂದು ಸಂಜೆಯ ಸ್ನಾನ ಮುಗಿಸಿ ತಾರಕೇಶ್ವರನ ಬಳಿ ಹೋಗಿ ಕುಳಿತೆ. ಎಂಟು ಸಾವಿರ ತಾರಕ ನಾಮ ಆಗುವಷ್ಟರಲ್ಲೇ ಸಮಯ ಒಂಭತ್ತಾಗಿತ್ತು. ಊಟ ಮುಗಿಸಿ ರೂಮಿನಲ್ಲಿ ಕುಳಿತು ಉಳಿದ 12 ಸಾವಿರ ಜಪ ಮುಗಿಸುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು.
ಮುಂದುವರಿಯುವುದು