ಗುರುಕುಲದ ಸಂರಕ್ಷಕರಿಂದಲೇ ಗುರುಕುಲದ ನಾಶ

ಗುರುಕುಲದ ಸಂರಕ್ಷಕರಿಂದಲೇ ಗುರುಕುಲದ ನಾಶ

ಕೆಲವರು ಗುರುಕುಲಗಳನ್ನು ನಡೆಸುತ್ತಾರೆ, ಕೆಲವರು ಗುರುಕುಲಗಳನ್ನು ಸ್ವತಃ ಪ್ರಾರಂಭಿಸಿ ಸಂಚಾಲನೆ ಮಾಡದೇ ಇದ್ದರೂ ತಮ್ಮ ಸಂಘ-ಸಂಸ್ಥೆ ಇತ್ಯಾದಿಗಳ ಮೂಲಕ ಗುರುಕುಲಗಳನ್ನು ಪ್ರೋತ್ಸಾಹಿಸುತ್ತಾರೆ. ಇನ್ನು ಕೆಲವರು ಭಾರತದಲ್ಲಿ ಗುರುಕುಲಗಳ ಸಂಖ್ಯೆ ಯಾಕೆ ಹೆಚ್ಚಿಲ್ಲ? ಅದು ಹೆಚ್ಚಾಗಬೇಕು. ಅದಕ್ಕಾಗಿ ಸರ್ಕಾರವು ಯೋಜನೆಗಳನ್ನು ಮಾಡಿ ಬಜೆಟ್ಟಿನಲ್ಲಿ ಹಣವನ್ನು ನಿಗದಿಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಾರೆ.

ಮೇಲ್ಕಂಡ ಎಲ್ಲ ಪ್ರಕಾರದ ಜನರೂ ಕೂಡ, ಬಹಳ ಒಳ್ಳೆಯ ಉದ್ದೇಶ ಹೊಂದಿದವರಾಗಿದ್ದು ಗುರುಕುಲ ಶಿಕ್ಷಣದ ಅಥವಾ ಭಾರತೀಯ ಸನಾತನ ಸಂಸ್ಕೃತಿಯ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸತ್ಯ. ಆದರೆ ಅವರ ಅರಿವಿಗೇ ಬಾರದಂತೆ, ಅವರಲ್ಲಿ ಅನೇಕರು ಗುರುಕುಲ ವ್ಯವಸ್ಥೆಯ ನಾಶಕ್ಕಾಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ ನಾವು ಮಾಡುತ್ತಿರುವ ಕೆಲಸದಿಂದ ಹಾನಿ ಉಂಟಾಗುತ್ತಿದೆ ಎಂಬ ತಿಳುವಳಿಕೆ ಅವರಿಗೆ ಇರುವುದಿಲ್ಲವಾದ್ದರಿಂದ, ನೀವು ಹಾನಿ ಉಂಟು ಮಾಡುತ್ತಿದ್ದೀರಿ ಎಂದು ಹೇಳಿದರೆ ಅವರು ಒಪ್ಪಿಕೊಳ್ಳುವುದಿಲ್ಲ.

ಉದಾಹರಣೆಗೆ, ಕೆಲ ಗುರುಕುಲಗಳು ಅನೇಕ ವರ್ಷಗಳಿಂದ ಕೆಲಸ ಕಾರ್ಯ ನಿರ್ವಹಿಸುತ್ತಿದ್ದು,  ಬಹಳ ಪ್ರಖ್ಯಾತಿಯನ್ನು ಹೊಂದಿರುತ್ತವೆ. ಅವುಗಳಲ್ಲಿ ಅಧ್ಯಯನ ಮಾಡಿ ಸ್ನಾತಕರಾಗಿ ಹೊರಗೆ ಬಂದ ವಿದ್ಯಾರ್ಥಿಗಳು, ಎಲ್ಲಿಯೂ ಕೂಡ ನನ್ನ ಗುರುಗಳು ಯಾರು ಎಂದು ಹೇಳುವುದಿಲ್ಲ. ಬದಲಿಗೆ ತಮ್ಮ ಗುರುಕುಲವು ಯಾವುದು ಎಂದು ಹೇಳುತ್ತಾರೆ. ಗುರುಕುಲವು ಕೂಡ, ಈ ವಿದ್ಯಾರ್ಥಿ ಯಾರ ಶಿಷ್ಯ ಎಂಬುದುರ ಬಗ್ಗೆ ಒತ್ತು ಕೊಡುವುದರ ಬದಲಿಗೆ ನಮ್ಮ ಗುರುಕುಲದ ವಿದ್ಯಾರ್ಥಿ ಎಂದೇ ಆತನನ್ನು ನೋಡುತ್ತಾರೆ.

ಇದರಲ್ಲಿ ಏನು ಸಮಸ್ಯೆ ಅಂತ ನೀವು ಕೇಳಬಹುದು.

ಪಾರಂಪರಿಕ ಗುರುಕುಲ ಪದ್ಧತಿಯ ಮುಖ್ಯ ಲಕ್ಷಣವು ಏನೆಂದರೆ, ವಿದ್ಯಾರ್ಥಿಯು ತನ್ನ ಪರಿಚಯವನ್ನು ತನ್ನ ಗುರುವಿನ ಹೆಸರಿನ ಮೂಲಕವೇ ನೀಡುತ್ತಾನೆ ಹಾಗೂ ಸಮಾಜವೂ ಕೂಡ ವ್ಯಕ್ತಿಗಳನ್ನು ಅವರ ಗುರುವಿನ ಹೆಸರಿನಿಂದಲೇ ಹೆಚ್ಚು ಗುರುತಿಸುತ್ತದೆ. ಭರದ್ವಾಜನ ಶಿಷ್ಯರು ಭಾರದ್ವಾಜರು, ವಸಿಷ್ಠರ ಶಿಷ್ಯರು ವಾಸಿಷ್ಠರು ಇತ್ಯಾದಿಯಾಗಿ ಪ್ರಾಚಿನ ಕಾಲದಲ್ಲಿ ಇದು ಕಂಡು ಬರುತ್ತದೆ. ಹಾಗೆಯೇ ಇಂದಿನ ಕಾಲದಲ್ಲಿಯೂ ಕೂಡ, ಕಲೆ, ಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಇವರು ಯಾರ ಶಿಷ್ಯರು ಎಂಬುದು ಹೆಚ್ಚು ಮಹತ್ವಪೂರ್ಣವಾದದ್ದಾಗಿರುತ್ತದೆ.

ತಮಿಳು ನಾಡಿನಲ್ಲಿ ಇತ್ತೀಚೆಗೆ ತೀರಿಹೋದ ಗಣಪತಿ ಸ್ಥಪತಿಗಳ ಶಿಷ್ಯರು, ನೀವು ಶಿಲ್ಪ, ಸ್ಥಾಪತ್ಯ ಇತ್ಯಾದಿಗಳನ್ನು ಎಲ್ಲಿ  ಕಲಿತದ್ದು ಅಂತ ಕೇಳಿದರೆ, ಯಾವುದೇ ಸಂಸ್ಥೆಯ ಹೆಸರು ಹೇಳುವುದಿಲ್ಲ. ಬದಲಿಗೆ, ತಮ್ಮ ಗುರುಗಳ ಹೆಸರನ್ನು ಹೇಳುತ್ತಾರೆ. “ಗಣಪತಿ ಸ್ಥಪತಿ ಅವರ ಶಿಷ್ಯ” ಎಂಬ ಮಾತು ಕೇಳಿದ ಕೂಡಲೇ, ಇತರೆ ಯಾವುದೇ ಪ್ರಶ್ನೆಗಳನ್ನು ಕೇಳದೇ ಅವರಿಗೆ ದೇವಸ್ಥಾನ ಇತ್ಯಾದಿಗಳ ನಿರ್ಮಾಣದ ಕಾಂಟ್ರಾಕ್ಟ್‌ ನೀಡಲಾಗುತ್ತದೆ.

ವೇದ ಪಂಡಿತರಿಂದ ಮೊದಲುಗೊಂಡು ಮದುವೆಗಳಲ್ಲಿ ನಾದಸ್ವರ ಬಾರಿಸುವವರ ವರೆಗೆ ಎಲ್ಲರೂ ತಮ್ಮ ಗುರುಗಳ ಹೆಸರನ್ನು ಹೇಳುತ್ತಾರೆ, ಹಾಗೂ ಅದರ ಮೂಲಕವೇ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಾರೆ.

ಏಕೆಂದರೆ, ನಮ್ಮ ಪಾರಂಪರಿಕ ಅಥವಾ ಗುರುಕುಲ ಶಿಕ್ಷಣ ವ್ಯವಸ್ಥೆಯು ಗುರುಕೇಂದ್ರಿತವಾದದ್ದು. ಗುರುವೇ ಅಲ್ಲಿ ಸಾರ್ವಭೌಮ. ಆತ ಅನುಸರಿಸುವ ಪದ್ಧತಿಯೇ ಶಿಕ್ಷಣ ಪದ್ಧತಿ ಹಾಗೂ ಆತನ ಹೆಸರೇ ಪ್ರಮಾಣ ಪತ್ರ. ಆದರೆ “ಗುರುಕುಲವನ್ನು ಕಟ್ಟುತ್ತೇವೆ” ಎಂದು ಹೊರಟ ಅನೇಕರು, ಈ ಪಾರಂಪರಿಕ ಪದ್ಧತಿಯಂತೆ, ಗುರುಕೇಂದ್ರಿತ ವ್ಯವಸ್ಥೆಗೆ ಬದಲಾಗಿ “ಶಿಕ್ಷಣ ಸಂಸ್ಥೆ”ಗಳನ್ನು ಕಟ್ಟಿಬಿಡುತ್ತಾರೆ. ಆ ಸಂಸ್ಥೆಯಲ್ಲಿ ಆ ಗುರುವು ಸಾರ್ವಭೌಮನಲ್ಲ ಹಾಗೂ ಅತನ ಹೆಸರು ಒಬ್ಬ ಅನಾಮಿಕ ನೌಕರನ ಹೆಸರಿನಷ್ಟೇ ನಗಣ್ಯ.

ಈ ರೀತಿ “ಗುರು”ವನ್ನು ಗೌಣವಾಗಿಸಿ, ಸಂಸ್ಥೆಯನ್ನು ದೊಡ್ಡದಾಗಿಸುವ ಕೆಲಸವನ್ನು ಮಠಗಳೂ ಕೂಡ ಮಾಡುತ್ತಿವೆ. ಮಠಗಳ ಮೂಲಕ ನಡೆಯುವ ಗುರುಕುಲಗಳಲ್ಲಿಯೂ ಕೂಡ “ಗುರು”ವನ್ನು ಗುರುಗಳು ಎಂದು ಕೂಡ ಕರೆಯುವುದಿಲ್ಲ. ಏಕೆಂದರೆ ಅಲ್ಲಿನ ಮಠಾಧಿಪತಿಗಳನ್ನು “ಗುರುಗಳು” ಎಂದು ಕರೆಯುವುದು ಸಮಾಜದಲ್ಲಿ ರೂಢಿಗತವಾಗಿದೆ. ಹಾಗಾಗಿ ಮಠಗಳಲ್ಲಿನ ಗುರುಕುಲದ ಆಚಾರ್ಯನು ತನ್ನ “ಗುರುತ್ವ”ವನ್ನು ಕೂಡ ಸ್ವಾಮಿಗಳಿಗೆ ಬಿಟ್ಟುಕೊಡಬೇಕಾಗಿರುತ್ತದೆ ಹಾಗೂ ಆತ ಮಠದ ನೌಕರನಾಗಿ ಮಾತ್ರ ಚಲಾವಣೆಯಾಗುತ್ತಿರುತ್ತಾನೆ.

ಇನ್ನು ಸಾಂಪ್ರದಾಯಿಕ ಮಠಗಳು ಮಾತ್ರವಲ್ಲದೇ ಮೆಡಿಟೇಶನ್‌ ಹೇಳಿಕೊಡುವ ಆಧುನಿಕ ಆಶ್ರಮಗಳಲ್ಲಿಯೂ ಕೂಡ ಮಠಾಧೀಶರ ಅಥವಾ ಆಶ್ರಮದ ಸಂಸ್ಥಾಪಕರ ಪೂಜೆ, ಪ್ರವಾಸ ಇತ್ಯಾದಿಗಳಲ್ಲಿ ನಾಲ್ಕಾರು ಮಂತ್ರ ಹೇಳುವುದು, ಕಲಶ ಹಿಡಿಯುವುದು, ಇತ್ಯಾದಿಗಳ ಅಗತ್ಯವನ್ನು ಪೂರೈಸಲು ಗುರುಕುಲಗಳ ಉಪಯೋಗ ಸೀಮಿತವಾಗಿರುತ್ತದೆ. ಕೆಲ ಆಧುನಿಕ ಆಶ್ರಮಗಳಲ್ಲಿ ಮೆಡಿಟೇಶನ್‌ ಹೇಳಿಕೊಡುವ ಗುರುವು ಪ್ರಖ್ಯಾತನಾಗಿದ್ದರೂ, ಅಗತ್ಯವಾದ ಅಧ್ಯಯನ ಮಾಡಿರುವುದಿಲ್ಲ.

ಅಂಥವರು ಮುಚ್ಚಿದ ಬಾಗಿಲಿನ ಹಿಂದೆ ಗುರುಕುಲದ ಆಚಾರ್ಯರ ಬಳಿ ವಿದ್ಯಾರ್ಥಿಯಂತೆ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಾರೆ. ಆದರೆ ಬಾಗಿಲು ತೆರೆದು ಹೊರಬಂದ ಮೇಲೆ ತಮ್ಮ ಅನುಯಾಯಿಗಳ ಮುಂದೆ, ಗುರುಕುಲದ ಅಧ್ಯಾಪಕರನ್ನು ತಮ್ಮ ಸೇವಕರೆಂಬಂತೆ ಸಂಬೋಧಿಸಿ ವ್ಯವಹರಿಸುತ್ತಾರೆ. ಸಮಾಜವೂ ಕೂಡ ಈ ಪಂಡಿತರನ್ನು ಆ ಗಡ್ಡಧಾರಿಯ ಶಿಷ್ಯನೆಂದೇ ಭಾವಿಸುತ್ತದೆ.  ಏಕೆಂದರೆ ಸಮಾಜದ ದೃಷ್ಟಿಯಲ್ಲಿ ಗುರುಕುಲದ  ಅಧ್ಯಾಪಕರಿಗಿಂತ ಗಡ್ಡಧಾರಿ ಯೋಗಿಗಳೇ ಪ್ರತಿಷ್ಠಿತರು.

ಹೀಗೆ, ಒಟ್ಟಿನಲ್ಲಿ ಐಡೆಂಟಿಟಿ ಅಥವಾ ಸಾಮಾಜಿಕ ಮನ್ನಣೆ ಎಂಬ ವಿಷಯ ಬಂದಾಗ, ಮಠ ಅಥವಾ ಆಶ್ರಮ ಎಂಬ ದೊಡ್ಡಾನೆಯು ಗುರುಕುಲ ಎಂಬ ಹಸುವಿನ ಕರುವನ್ನು ತುಳಿದು ಹಾಕುವುದೇ ಎಲ್ಲೆಡೆ ಕಂಡು ಬರುತ್ತದೆ.

ಗೋಡಾ ಸುಬ್ರಹ್ಮಣ್ಯ ಶಾಸ್ತ್ರಿಗಳಂಥವರು ಮಠದಲ್ಲಿ ಇದ್ದರೂ ಕೂಡ, ತಮ್ಮ ವಿದ್ವತ್ತು ಹಾಗೂ ತಪಸ್ಸಿನ ಮೂಲಕ ಶಿಷ್ಯರ ಹೃದಯ ಹಾಗೂ ಸಮಾಜದಲ್ಲಿ ಗುರುವಿನ ಸ್ಥಾನ ಪಡೆದುಕೊಂಡಿದ್ದರು. ಇದೇ ರೀತಿ ಅನೇಕ ಆದ್ಯಾಪಕರು, ಮಠಗಳಲ್ಲಿ ಇದ್ದಾಗಿಯೂ ಕೂಡ “ನಾನು ಇಂಥವರ ಶಿಷ್ಯ” ಎಂದು ವಿದ್ಯಾರ್ಥಿಗಳು ಹೇಳಿಕೊಳ್ಳುವ ಮಟ್ಟಕ್ಕೆ ಪ್ರಭಾವಶಾಲಿಗಳಾಗಿರುತ್ತಾರೆ.

ಇಂತಹ ಕೆಲ ಅಪವಾದಗಳು ಇವೆ ಹಾಗೂ ಮಠಗಳಲ್ಲಿ ಅನೇಕ ಪ್ರಸಿದ್ಧ ವಿದ್ವಾಂಸರುಗಳು ಆಶ್ರಯ ಪಡೆದಿದ್ದರಾರೆ ಹಾಗೂ ತಯಾರಾಗಿದ್ದಾರೆ. ಹಾಗಾಗಿ ಗುರುಕುಲ ಪದ್ಧತಿಯ ವಿಷಯದಲ್ಲಿ ಮಠಗಳ ಕೊಡುಗೆಯನ್ನು ಸಂಪೂರ್ಣವಾಗಿ ಶೂನ್ಯ ಎಂದು ಹೇಳಲಾಗುವುದಿಲ್ಲ.

ಆದರೆ ಇಂತಹ ಮಠಗಳು ಬಹಳ ಸಂಕುಚಿತ. ನಾವು ಬಹಳ ವಿಶಾಲ ದೃಷ್ಟಿ ಉಳ್ಳವರು ಇತ್ಯಾದಿಯಾಗಿ ಹೇಳಿಕೊಳ್ಳುತ್ತ, ಮಠಗಳನ್ನು ನಿತ್ಯವೂ ತೆಗಳುತ್ತ, ತಮ್ಮ ಗುರುಕುಲವೇ ಮಠಗಳ ಗುರುಕುಲಕ್ಕಿಂತ ಶ್ರೇಷ್ಠ ಎಂದು ಕೊಚ್ಚಿಕೊಳ್ಳುವ ಸಂಸ್ಥೆಗಳನ್ನು ನೋಡಿದಾಗ, ಅಲ್ಲಿಯೂ ಕೂಡ ಗುರುವು ಗೌಣವಾಗಿ, ಸಂಸ್ಥೆಯೇ ದೊಡ್ಡದಾಗಿ ವಿಜೃಂಭಿಸುವುದು ಕಂಡುಬರುತ್ತದೆ.

Institutionalization ಅನ್ನುವುದು ಎಲ್ಲದರ ಗುಣವನ್ನೂ ಕಡಿಮೆ ಮಾಡಿ ಹಾಕುವ ಬಾಧಕ ಬದಲಾವಣೆಯಾಗಿದೆ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವಿದ್ಯೆ, ಕಲೆ, ಇತ್ಯಾದಿಗಳ ಶಿಕ್ಷಣವು ದೊರೆತು, ಸಮಾಜವು ಸ್ವನಿಯಂತ್ರಿತವಾಗಿದ್ದಾಗ, ಅಂದರೆ ಧರ್ಮದ ಭಯದಿಂದಲೇ ಎಲ್ಲರೂ ಸನ್ಮಾರ್ಗಿಗಳಾಗಿದ್ದಾಗ ಎಲ್ಲವೂ ಸರಿಯಾಗಿತ್ತು. ಆದರೆ ನ್ಯಾಯಾಲಯ ಎಂಬ Institutionalization ಉಂಟಾದ ಮೇಲೆ, ಅಪರಾಧಗಳೂ ಹೆಚ್ಚಿವೆ ಹಾಗೂ ನ್ಯಾಯ ಸಿಗುವುದೂ ದುಸ್ತರವಾಗಿದೆ.

ಅದೇ ರೀತಿ ಯಾವ ಮಠ, ಮಂದಿರ ಇತ್ಯಾದಿಗಳು ಇಲ್ಲದಿದ್ದರೂ ಎಲ್ಲರೂ ಉಪಾಸನೆ ಇತ್ಯಾದಿಗಳಲ್ಲಿ ಮಗ್ನರಾಗಿದ್ದರು. ಆದರೆ ಜೈನ, ಬೌದ್ಧ ಇತ್ಯಾದಿ ಮತಗಳು ಹುಟ್ಟಿಕೊಂಡು ರಾಜರುಗಳನ್ನು ಬುಟ್ಟಿಗೆ ಹಾಕಿಕೊಂಡು, Institutionalized ಸ್ವರೂಪವನ್ನು ಪಡೆದುಕೊಂಡು, ವೈದಿಕ ಮತಗಳನ್ನು ಅಟ್ಯಾಕ್‌ ಮಾಡತೊಡಗಿದಾಗ, ಅದರ ಹೊಡೆತವನ್ನು ಎದುರಿಸಲು ವೈದಿಕರೂ ಕೂಡ Institutionalization ಮಾಡಲೇ ಬೇಕಾಯಿತು.

ಬೌದ್ಧ ವಿಹಾರಗಳ ಹಾವಳಿಗೆ ಪ್ರತಿಯಾಗಿ ಮಠಗಳ ಸ್ಥಾಪನೆ ಮಾಡಲೇ ಬೇಕಾಯಿತು. ಇವತ್ತು ಇಂತಹ ಮಠಗಳ ಹುಳುಕುಗಳು ಎಷ್ಟೇ ಇದ್ದರೂ, ಅವುಗಳು ಹಿಂದೂ ಧರ್ಮಕ್ಕೆ ರಕ್ಷಾ ಕವಚವಾಗಿ ನಿಂತಿರುವುದಕ್ಕೆ ಕಾರಣ, ಅದರ ಹಿಂದಿನ Institutionalized ಸ್ವರೂಪ.

ಆದರೆ, ಇಂತಹ ಮಠಗಳ ಹುಳುಕನ್ನು ಎತ್ತಿ ತೋರಿಸುತ್ತ ತಮ್ಮ ಔನ್ನತ್ಯವನ್ನು ಹೊಗಳಿಕೊಳ್ಳುತ್ತ ಬೆಳೆದ ನಿಂತ ಗುರುಕುಲಗಳು ಕೂಡ, ಆಚಾರ್ಯ ಕೇಂದ್ರಿತ ಅಥವಾ ಗುರುವಿನ ಹಿಡಿತದಲ್ಲಿ ಇರದೇ, Institutionalization ನಿಂದ ಉಂಟಾಗುವ ಎಲ್ಲ ಅವಗುಣಗಳನ್ನು ಒಳಗೊಂಡಿವೆ ಎಂಬುದು ವಾಸ್ತವ.

ಹಾಗಾದರೆ ಇಂತಹ ಸಂಸ್ಥೆಗಳ ನಿರ್ಮಾಣವನ್ನೇ ಮಾಡಬಾರದಾ ? ಎಂದರೆ, ಹಾಗೇನಿಲ್ಲ. ಆದರೆ, ಈ ಸಂಸ್ಥಾಗತೀಕರಣದಿಂದ ಉಂಟಾಗುವ ಬಾಧಕ ಅಂಶಗಳನ್ನು ಒಪ್ಪಿಕೊಳ್ಳುವ ವಿವೇಕವೂ ಕೂಡ ನಮ್ಮಲ್ಲಿ ಇರಬೇಕು. ನಾವು ಆಧುನಿಕ ಶಿಕ್ಷಣಕ್ಕೆ ಪರ್ಯಾಯವಾಗಿ ಗುರುಕುಲ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ ಎಂದು ಹೇಳುವಾಗಲೂ ಕೂಡ, ನಮಗೆ ಗುರುಕುಲವನ್ನು ಕೂಡ ಗುರುಕೇಂದ್ರಿತವಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಸಂಸ್ಥಾಗತ ತೊಡಕುಗಳಿಂದ ಗುರುವಿನ ಪಾತ್ರ ಗೌಣವಾಗುತ್ತಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಒಂದು ಗುರುಕುಲದಲ್ಲಿ ಅನೇಕ ಅಧ್ಯಾಪಕರು ಇದ್ದಾಗ, ಸಂಸ್ಥೆಯೇ ಮುಖ್ಯವಾಗಿ, ಗುರುವು ಗೌಣನಾಗುತ್ತಾನಲ್ಲವೇ ಎಂಬ ಪ್ರಶ್ನೆ ಸಹಜ. ಅದು ಹಾಗೆಯೇ ಆಗುವುದು. ಆದರೆ ಅದರಲ್ಲಿಯೂ ಕೂಡ, ವಿದ್ಯಾರ್ಥಿಗಳ ಮೇಲೆ ಆಚಾರ್ಯನ ಹಿಡಿತವನ್ನು ಹೆಚ್ಚಿಸುವ ಅನೇಕ ಮಾರ್ಗಗಳನ್ನು ಕಂಡುಕೊಳ್ಳಬಹುದು.

ಉದಾಹರಣೆಗೆ ಆಂಧ್ರದ ಶ್ವೇತಶೃಂಗಾಚಲ ಎಂಬಲ್ಲಿ ಗುರುಕುಲವೊಂದಿದೆ. ಅಲ್ಲಿ 12 ಜನ ಅಧ್ಯಾಪಕರುಗಳು ಇದ್ದಾಗಿಯೂ ಕೂಡ, ಎಲ್ಲ ಅಧ್ಯಾಪಕರುಗಳಿಗೂ ಅವರದ್ದೇ ಆದ ವಿದ್ಯಾರ್ಥಿಗಳು ನಿಗದಿಯಾಗಿರುತ್ತಾರೆ. “ಅನ್ಯಶಿಷ್ಯಂ ನ ಬೋಧಯೇತ್‌” ಎಂಬ ನಿಯಮನ್ನು ಪಾಲಿಸಲಾಗುತ್ತದೆ. ಅಂದರೆ, ಒಬ್ಬರ ಶಿಷ್ಯನಿಗೆ ಅದೇ ಗುರುಕುಲದಲ್ಲಿ ಇರುವ ಇನ್ನೊಬ್ಬ ಅಧ್ಯಾಪಕರು ಬೋಧಿಸುವುದಿಲ್ಲ. ಅವನು ಏನಾದರೂ ತಪ್ಪು ಆಚರಣೆ ಮಾಡಿದರೂ ಕೂಡ, ನಿಮ್ಮ ಶಿಷ್ಯ ಹೀಗೆ ಮಾಡುತ್ತಿದ್ದಾನೆ ಅಂತ ಅವನ ಗುರುವಿಗೆ ತಿಳಿಸುತ್ತಾರೆಯೇ ಹೊರತು, ತಾವೇ ತಿದ್ದುವುದಿಲ್ಲ.

ವಿದ್ಯಾರ್ಥಿಗಳಿಗೆ ತಮ್ಮ ಗುರುವಿನೆಡೆಗೆ ಸಂಪೂರ್ಣ ಶ್ರದ್ಧೆ ಹೊಂದಿರುವುದು ಗುರುಕುಲ ಪದ್ಧತಿಯಲ್ಲಿ ಬಹಳ ಅಗತ್ಯ. ಅನೇಕರು, ಅನೇಕ ರೀತಿಯಾಗಿ ತಿದ್ದಿ ತೀಡಲು ಪ್ರಯತ್ನಿಸುವಾಗ, ಮಕ್ಕಳಿಗೆ ತಮ್ಮ ಗುರುವಿನೆಡೆಗೆ ಇರಬೇಕಾದ ಅಚಲ ಹಾಗೂ ಆಳವಾದ ಶ್ರಧ್ದೆಗೆ ಭಂಗವಾಗುತ್ತದೆ ಹಾಗೂ ಈ ಅನೇಕರಲ್ಲಿ ಯಾರು ನಮ್ಮ ಗುರುವು ಎನ್ನುವ ಸ್ಪಷ್ಟತೆಯೂ ಉಂಟಾಗುವುದಿಲ್ಲ.  ಸ್ಪಷ್ಟತೆ ಇಲ್ಲದೇ ಹೋದಾಗ “ಅಧೀನ”ಕ್ಕೆ ಒಳಗಾಗುವ ಸಾಧ್ಯತೆ ಇರುವುದಿಲ್ಲ.

ನೀವು ಉಪನಯನದಲ್ಲಿ ಗಮನಿಸಿ ನೋಡಿದ್ದೇ ಆದರೆ, ವ್ರತೋಪದೇಶದ ಸಮಯದಲ್ಲಿ ತಂದೆಯು ಮಗನಿಗೆ “ಆಚಾರ್ಯಾಧೀನೋ ಭೂತ್ವಾ, ದ್ವಾದಶ ವರ್ಷಾಣಿ.. ʼʼ (ಹನ್ನೆರಡು ವರ್ಷಗಳ ಕಾಲ ಆಚಾರ್ಯರರ ಅಧೀನದಲ್ಲಿ ಇದ್ದುಕೊಂಡು) ಅಂತ ಹೇಳುತ್ತಾನೆ. ಇಲ್ಲಿ ಶಿಷ್ಯನು ಗುರುವಿನ ಅಧೀನದಲ್ಲಿ ಇರುವುದು Pedagogy ದೃಷ್ಟಿಯಿಂದ ಬಹಳ ಅಗತ್ಯ. ಸಂಸ್ಥೆಯು ಗುರುವಿಗಿಂತ ಶಕ್ತಿಶಾಲಿಯಾದಾಗ ಹಾಗೂ “ಅನ್ಯಶಿಷ್ಯಬೋಧನೆ” ಎಂಬ ಭ್ರಷ್ಟತೆಯು ಉಂಟಾದಾಗ  ಈ ಆಧಿಪತ್ಯ ಗುರುವಿಗೆ ಶಿಷ್ಯರ ಮೇಲೆ ಉಂಟಾಗುವುದಿಲ್ಲ. ಅಲ್ಲಿಗೆ, ಅದು “ಗುರುಕುಲʼʼ ವೇ ಆಗುವುದಿಲ್ಲ.

ಹೀಗೆ, ಗುರುಕುಲವೆಂಬ ಹೆಸರಿನಲ್ಲಿ ಕಟ್ಟಲಾದ ಸಂಸ್ಥೆಯೇ ಗುರುವಿನ ಅಧಿಪತ್ಯದ ನಾಶ ಮಾಡುವುದರ ಮೂಲಕ, ನಿಜಾರ್ಥದ ಗುರುಕುಲವನ್ನೇ ನಾಶ ಮಾಡುತ್ತದೆ. ಹಾಗೆ ಆದಾಗಲೇ, ಅಲ್ಲಿಂದ ಓದಿ ಹೊರಬಂದ ವಿದ್ಯಾರ್ಥಿಗಳು, ನಾನು “ಇಂಥವರ ಶಿಷ್ಯ” ಎಂದು  ತಮ್ಮ ಗುರುವಿನ ಹೆಸರು ಹೇಳುವುದರ ಬದಲಿಗೆ, ನಾನು ಇಂತಿಂತಹ ಗುರುಕುಲದ ವಿದ್ಯಾರ್ಥಿ ಎಂದು ತಾನು ಓದಿದ ಸಂಸ್ಥೆಯ ಹೆಸರನ್ನು ಹೇಳತೊಡಗುತ್ತಾರೆ. ಹೀಗೆ ಆದಾಗ ವಿದ್ಯಾವಂಶವು ಮುಂದುವರಿಯುವುದರ ಬದಲಿಗೆ ಸಂಸ್ಥಾವಂಶ ಬೆಳೆಯುತ್ತದೆ.

“ವಂಶೋ ಯಥಾ, ಜನ್ಮನಾ, ವಿದ್ಯಯಾ ಚ” ಎಂಬಲ್ಲಿ ಪಂತಂಜಲಿ ಹೇಳಿದಂತೆ ವಿದ್ಯೆಯ ಮೂಲಕ ಅಥವಾ ಜನ್ಮದ ಮೂಲಕ  ವಂಶವು ಅಥವಾ “ಕುಲ”ವು ಉಂಟಾಗುತ್ತದೆ. ಹೀಗೆ  ಪಾರಂಪರಿಕ ಶಿಕ್ಷಣ ಪದ್ಧತಿಯಲ್ಲಿ  ಕಂಡುಬರುವ ಈ ವಿದ್ಯಾವಂಶವು (ಸಂಗೀತಗಾರರಲ್ಲಿ ಘರಾನಾಗಳು) ಮುಂದುವರಿಯಲು ಗುರುವಿನ ಮೇಲೆ ಅಧಿಪತ್ಯ ಹೊಂದಿರುವ ಸಂಸ್ಥೆಗಳು ಅಡಚಣೆ ಉಂಟುಮಾಡುತ್ತವೆ.

ಇನ್ನು ಗುರುಕುಲಗಳನ್ನು ನಡೆಸದೇ ಹೋದರೂ, ದೂರ ಇದ್ದುಕೊಂಡು ಗುರುಕುಲಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುವವರು ಕೂಡ ಗುರುಕುಲದ ಪ್ರಚಾರ ಮಾಡುತ್ತೇವೆ, ಗುರುಕುಲಗಳಿಗೆ ವೇದಿಕೆ ಒದಗಿಸುತ್ತೇವೆ ಎಂದೆಲ್ಲ ಹೇಳುತ್ತಲೇ ಗುರುಕುಲಕ್ಕೆ ಕೆಲವೊಂದು ಹಾನಿಗಳನ್ನು ಉಂಟುಮಾಡುತ್ತಾರೆ.  ವೇದಿಕೆ ಒದಗಿಸುವವರು, ತಮ್ಮ ವೇದಿಕೆಯಲ್ಲಿ “ಇಂದಿನ ಕಾಲದಲ್ಲಿ ಎಲ್ಲರಿಗೂ ತಲುಪಲು ಇದನ್ನು ಮಾಡಲೇಬೇಕು” ಎಂಬ ಓತ್ತಡದಲ್ಲಿ ಗುರುಕುಲ ಪದ್ಧತಿಗೆ ಮಾರಕವಾಗುವ ಕೆಲ ನಿಯಮಗಳನ್ನು ಇಟ್ಟು, ಗುರುಕುಲಗಳ ಜನರು, ವೇದಿಕೆಯ ಹಪಹಪಿಗೆ ಬಿದ್ದು ದಾರಿ ತಪ್ಪುವಂತೆ ಮಾಡುತ್ತಾರೆ.

ಇನ್ನು ಪ್ರಚಾರದ ಮೂಲಕ ಗುರುಕುಲಗಳಿಗೆ ಸಹಾಯ ಮಾಡುತ್ತೇವೆ ಅನ್ನುವವರು ಕೂಡ, ಗುರುಕುಲ ಪದ್ಧತಿಗಿಂತ ತಮ್ಮ ಸಂಸ್ಥೆಯ ಪ್ರಚಾರವನ್ನೇ ಹೆಚ್ಚು ಮಾಡಿಕೊಳ್ಳುತ್ತಾರೆ ಹಾಗೂ ಪ್ರಚಾರದಲ್ಲಿ ಗುರುಕುಲದ ಮೌಲ್ಯಗಳಿಗೆ, ಹಾಗೂ ಪದ್ಧತಿಗಳಿಗೆ ವಿರುದ್ಧವಾದ ಕೆಲಸಗಳನ್ನು ಮಾಡುತ್ತಾರೆ.

ಉದಾಹರಣೆಗೆ: ಇತ್ತೀಚೆಗೆ ಹುಡುಗಿಯೊಬ್ಬಳು, ಕಾಲೇಜಿಗೆ ಹೋಗದೇ ಒಬ್ಬ ಶಾಸ್ತ್ರ ಪಂಡಿತರ ಬಳಿ ಏಳೇಂಟು ವರ್ಷಗಳ ಕಾಲ ನ್ಯಾಯ ಶಾಸ್ತ್ರವನ್ನು ಅಧ್ಯಯನ ಮಾಡಿ, ಪಾರಂಪರಿಕ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಮದ್ರಾಸಿನಲ್ಲಿ ದೊಡ್ಡ ವಿದ್ವಾಂಸರಿಂದ ಮೆಚ್ಚುಗೆಗೆ ಪಾತ್ರಳಾದಳು.  ಈ ಸನ್ಮಾನ ಕಾರ್ಯಕ್ರಮದ ಬಗ್ಗೆ ರಾಷ್ಟ್ರಮಟ್ಟದ ಸಂಘಟನೆಯೊಂದು ತಮ್ಮ ಫೇಸ್‌ ಬುಕ್‌ ಇತ್ಯಾದಿಗಳ ಮೂಲಕ ಪ್ರಚಾರ ಮಾಡಿತು.

ಆದರೆ, ಹಾಗೆ ಮಾಡುವಾಗ ಆಕೆಯ ಬಗ್ಗೆ ಪುಂಖಾನುಪುಂಖವಾಗಿ ವಿವರಗಳನ್ನು ಬರೆದಿದ್ದರೂ ಕೂಡ, ಆಕೆ ಯಾವ ಗುರುಕುಲದಲ್ಲಿ ಅಧ್ಯಯನ ಮಾಡಿದ್ದು, ಅಥವಾ ಆಕೆ “ಯಾರ ಶಿಷ್ಯೆ” ಎಂಬುದರ ಬಗ್ಗೆ ಒಂದು ಸುಳಿವನ್ನೂ ನೀಡಿರಲಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಗೋಲ್ಡ್‌ ಮೆಡಲ್‌ ಪಡೆದವರ ಬಗ್ಗೆ ಬರೆಯುವಾಗ, ಕೇವಲ ಅವರು ಓದಿದ ವಿಷಯದ ಬಗ್ಗೆ ಉಲ್ಲೇಖ ಮಾಡುತ್ತಾರೆಯೇ ಹೊರತು ಅವರ ಗುರುವಿನ ಬಗ್ಗೆ ಅಲ್ಲ. ಏಕೆಂದರೆ ಅದು ಗುರುಕುಲವೇ ಅಲ್ಲ.

ಆದರೆ, ಈ ವಿದುಷಿಯ ಬಗ್ಗೆ ಪ್ರಚಾರ ಮಾಡುತ್ತಿದ್ದ ಸಂಘಟನೆಯು ಗುರುಕುಲ ವ್ಯವಸ್ಥೆಯ ಪೋಷಣೆ ಮಾಡುವ ಸಂಸ್ಥೆ. ಆದರೂ ಕೂಡ “ವಿದ್ಯಾವಂಶ” ದಲ್ಲಿ ಪ್ರಧಾನ ಅಂಶವಾದ ಗುರುವಿನ ಹೆಸರನ್ನೇ ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಉಳಿದೆಲ್ಲ ವೈಯಕ್ತಿಕ ಮಾಹಿತಿಯನ್ನು ಹಾಗೂ ಗುಣಗಾನವನ್ನು ಆ ಸನ್ಮಾನ ಪಡೆದ ಪಡೆದ ವಿದುಷಿಯ ಬಗ್ಗೆ ಬರೆದಿದ್ದರು.

ಗುರುವಿಲ್ಲದೇ ಗುರುಕುಲವೇ ಸಾಧ್ಯವಿಲ್ಲ. ಹಾಗಿರುವಾಗ, ಗುರುಕುಲದ ವಿದ್ಯಾರ್ಥಿನಿಯನ್ನು ಪರಿಚಯಿಸುವಾಗ, ಗುರುವನ್ನೇ ಮೂಲೆಗುಂಪು ಮಾಡುವುದರ ಮೂಲಕ, ಗುರುವಿಗೆ ದಕ್ಕಬೇಕಾದ ಸಾಮಾಜಿಕ ಮನ್ನಣೆಗೆ ಕಲ್ಲು ಹಾಕಿದಂತಲ್ಲವೇ? ಹೀಗೆ ಗುರುವಿನ ಸಾಮಾಜಿಕ ಮನ್ನಣೆ ಕ್ಷೀಣಿಸಿದಾಗ, ಗುರುಕುಲದ ನಾಶ ಆಗುವುದಿಲ್ಲವೇ?

ಗುರುಕುಲ ಪದ್ಧತಿಯ ಬಗ್ಗೆ ಏನೂ ತಿಳಿಯದ ಪತ್ರಕರ್ತರುಗಳು, ಮಾಧ್ಯಮದವರು ಹೀಗೆ ಮಾಡಿದರು ಎಂದರೆ, ಅದನ್ನು ನಿರ್ಲಕ್ಷಿಸಬಹುದು. ಆದರೆ, ಗುರುಕುಲದ ಬಗ್ಗೆ ಕಾಳಜಿ ಉಳ್ಳವರೇ, ಉಪಕಾರ ಮಾಡುವ ಭರದಲ್ಲಿ ಅಪಕಾರ ಮಾಡಿದಂತಾಗಲಿಲ್ಲವೇ?

ಇನ್ನು ಗುರುಕುಲಗಳ ಸಂಖ್ಯೆ ಹೆಚ್ಚಾಗಬೇಕು ಹಾಗೂ ಈ ಕೆಲಸವನ್ನು ಸರ್ಕಾರವೇ ಮಾಡಬೇಕು ಎಂದು ಬಯಸುವವರು ಕೂಡ, ಸರ್ಕಾರವು ಗುರುಕುಲಗಳಿಗೆ ಹಣ ಕೊಡಲು ಆರಂಭಿಸಿದರೆ, ಎನೇನು ಅಪಾಯಗಳು ಬಂದೆರಗುತ್ತವೆ ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ.

ಸಮಾಜವಾದ, ಕಮ್ಯುನಿಸಂ, ವಸಾಹತು ವ್ಯವಸ್ಥೆ ಇತ್ಯಾದಿಗಳ ಪ್ರಭಾವಕ್ಕೊಳಗಾಗಿರುವ ಇಂತಹ ವ್ಯಕ್ತಿಗಳು, ಕುಂಟುಂಬ ನಿರ್ವಹಣೆಯನ್ನು ಕೂಡ ಸರ್ಕಾರವೇ ಮಾಡಿದರೆ ಚೆನ್ನ ಎಂಬಲ್ಲಿಯ ವರೆಗೆ ಯೋಚಿಸುತ್ತಾರೆ ಹಾಗೂ ತಾವು ಸಮಾಜಕಲ್ಯಾಣವನ್ನೇ ಬಯಸುತ್ತಿರುವುದರಿಂದ ತಮ್ಮ ಯೋಚನೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಅಮಾಯಕವಾಗಿ ನಂಬುತ್ತಾರೆ. ಸಮಾಜದ ಕಲ್ಯಾಣವಾಗಬೇಕು ಎಂಬುದು ನಿಜ.

ಆದರೆ, ಆ ಕಲ್ಯಾಣವನ್ನು ಸರ್ಕಾರ ಮಾಡಲು ಹೊರಟಾಗ ಉಂಟಾಗುವ ದುಷ್ಪರಿಣಾಮಗಳು ಬಹಳ. ಅದರಲ್ಲೂ, ಗುರುಕುಲದ ಮೇಲೆ ಸರ್ಕಾರದ ಹಿಡಿತ ಬಂದದ್ದೇ ಆದಲ್ಲಿ, ಅದು ಗುರುಕುಲವಾಗಿ ಉಳಿಯಲು ಸಾಧ್ಯವೇ ಇಲ್ಲ. 1835ಕ್ಕೂ ಮುನ್ನ ಈ ದೇಶದಲ್ಲಿ 7 ಲಕ್ಷಕ್ಕೂ ಅಧಿಕ ಗುರುಕುಲಗಳು ಇದ್ದವು ಎಂಬುದಕ್ಕೆ ದಾಖಲೆಗಳು ಸಿಗುತ್ತವೆ.

ಅವುಗಳ ಪೈಕಿ ಒಂದು ಗುರುಕುಲವೂ ಕೂಡ ರಾಜಕೀಯ ಹಿಡಿತಕ್ಕೆ ಒಳಪಟ್ಟಿರಲಿಲ್ಲ, ಸಮಾಜವೇ ತನ್ನ ಶಿಕ್ಷಣದ ಹೊಣೆಯನ್ನು ಹೊತ್ತಿತ್ತು ಎಂಬುದು ಇಂತಹ ವ್ಯಕ್ತಿಗಳಿಗೆ ಗೊತ್ತಿಲ್ಲದ ಕಾರಣ, ಸರ್ಕಾರದ “ದಯೆ” ಇಲ್ಲದೇ ಈ ಜಗತ್ತಿನಲ್ಲಿ ಏನೋ ನಡೆಯುವುದೇ ಇಲ್ಲ ಎಂಬ ನಿರ್ಣಯಕ್ಕೆ ಬಂದು, ಗುರುಕುಲಗಳಿಗೂ ಅಂತಹ ದಯೆಯ ಅಪೇಕ್ಷೆ ಹೊಂದಿರುತ್ತಾರೆ ಹಾಗೂ ತನ್ಮೂಲಕ ಗುರುಕಲದ ನಾಶವನ್ನು ಪರೋಕ್ಷವಾಗಿ ಬಯಸುತ್ತಿರುತ್ತಾರೆ.

ಈ ರೀತಿಯಾಗಿ ಅನೇಕ ಪ್ರಕಾರಗಳಲ್ಲಿ, ಗುರುಕುಲದ ಬಗ್ಗೆ ಆಸ್ಥೆ ಹಾಗೂ ಕಾಳಜಿ ಹೊಂದಿರುವವರು ಹಾಗೂ ಗುರುಕುಲಗಳನ್ನು ಕಟ್ಟಿ ನಡೆಸುವವರೂ ಕೂಡ ತಮ್ಮ ಅರಿವಿಗೇ ಬಾರದಂತೆ ನಿಜಾರ್ಥದ ಗುರುಕುಲದ ಅವನತಿಗೆ ಕಾರಣರಾಗುತ್ತಿರುತ್ತಾರೆ. ಆತ್ಮಾವಲೋಕನ, ಅಧ್ಯಯನ ಇತ್ಯಾದಿಗಳ ಮೂಲಕ ಮುಕ್ತ ಮನಸ್ಸಿನಿಂದ ನೋಡಿದ್ದೇ ಆದಲ್ಲಿ, ಅವರುಗಳು ತಮ್ಮ ಚಿಂತನೆಯ ದೃಷ್ಟಿಯನ್ನು ಬದಲಿಸಿಕೊಳ್ಳಬಹುದಾಗಿದೆ.