ಭಾರತೀಯ ಹಾಗೂ ಪಾಶ್ಚಾತ್ಯ ಶಿಕ್ಷಣ ಪದ್ಧತಿ: ವ್ಯತ್ಯಾಸಗಳ ಕುರಿತು ಒಂದು ವಿವೇಚನೆ
- ಡಾ. ರಾಜಾರಾಮ ಹೆಗಡೆ
ಭಾರತಕ್ಕೆ ಸಂಬಂಧಿಸಿದಂತೆ ಎರಡು ವಿಭಿನ್ನ ಪ್ರಕಾರದ ಶಿಕ್ಷಣ ಪದ್ದತಿಗಳ ಕುರಿತು ಮಾತನಾಡಲಾಗುತ್ತದೆ. ಒಂದು ವಸಾಹತು ಪೂರ್ವ ಕಾಲದಲ್ಲಿ ಪ್ರಚಲಿತದಲ್ಲಿದ್ದ ಭಾರತೀಯ ಶಿಕ್ಷಣ ಪದ್ಧತಿ ಮತ್ತೊಂದು ವಸಾಹತು ಕಾಲದಲ್ಲಿ ಇಲ್ಲಿ ಅಳವಡಿಸಲಾದ ಪಾಶ್ಚತ್ಯ ಶಿಕ್ಷಣ ಪದ್ಧತಿ. ಇಂದು ಪಾಶ್ಚತ್ಯ ಶಿಕ್ಷಣ ಪದ್ಧತಿಯ ದೋಷಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಭಾರತದಲ್ಲಿ ಭಾರತೀಯ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂಬುದಾಗಿ ಆಗ್ರಹಿಸುವವರೂ ಇದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಪ್ರಬೋಧಿನಿ ಗುರುಕುಲದಂಥ ಪ್ರಯೋಗಗಳೂ ನಡೆಯುತ್ತಿರುವುದು ಸ್ವಾಗತಾರ್ಹ. ಸಾಧಾರಣವಾಗಿ ಭಾರತೀಯ ಶಿಕ್ಷಣ ಅಂದಾಕ್ಷಣ ಗುರುಕುಲ ಪದ್ಧತಿ ಎಂದು ಹೇಳಲಾಗುತ್ತದೆ. ಆದರೆ ಭಾರತೀಯ ಶಿಕ್ಷಣವನ್ನು ಗುರುಕುಲಕ್ಕಷ್ಟೇ ಸಮೀಕರಿಸಿದರೆ ಅದರ ವ್ಯಾಪ್ತಿಯನ್ನು ಮೊಟಕುಗೊಳಿಸಿದಂತಾಗುತ್ತದೆ ಹಾಗೂ ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂಬುದನ್ನು ಮುಂದೆ ಚರ್ಚಿಸಲಿದ್ದೇನೆ. ಭಾರತೀಯ ಪಾರಂಪರಿಕ ಶಿಕ್ಷಣವು ಯಾವ ಮೂಲಭೂತ ಗ್ರಹಿಕೆಗಳನ್ನು ಆಧರಿಸಿ ರೂಪುಗೊಂಡಿದೆ ಹಾಗೂ ಅದು ಗುರುಕುಲ ಪದ್ಧತಿಯಲ್ಲೂ ಹೇಗೆ ಮೂಲಾಧಾರವಾಗಿ ಕೆಲಸ ಮಾಡುತ್ತಿದೆ ಎಂಬುದರ ಕುರಿತ ಚರ್ಚೆ ನಡೆದಲ್ಲಿ ಭಾರತೀಯ ಶಿಕ್ಷಣ ಪದ್ಧತಿ ಎಂದರೇನು, ಅದನ್ನು ಪಾಶ್ಚತ್ಯ ಶಿಕ್ಷಣ ಪದ್ಧತಿಯಿಂದ ಬೇರ್ಪಡಿಸುವ ಅಂಶಗಳು ಯಾವುವು, ಹಾಗೂ ಅದರ ಗುಣಾವಗುಣಗಳೇನು ಎಂಬ ವಿಷಯಗಳು ಇನ್ನೂ ಸ್ಪಷ್ಟವಾಗುತ್ತವೆ. ಈ ಲೇಖನವು ಈ ನಿಟ್ಟಿನಲ್ಲಿ ಒಂದು ಪ್ರಾರಂಭಿಕ ಹೆಜ್ಜೆಯಾಗಿದೆ.
ಎಲ್ಲಕ್ಕೂ ಮೊದಲು ಭಾರತೀಯ ಶಿಕ್ಷಣವೆಂಬುದಾಗಿ ಇದುವರೆಗೆ ನಾವು ಕಟ್ಟಿಕೊಂಡ ಚಿತ್ರಣ ಎಷ್ಟರ ಮಟ್ಟಿಗೆ ಭಾರತೀಯ? ಅದು ಭಾರತೀಯವೇ ಎಂಬುದಕ್ಕೆ ನಮ್ಮಲ್ಲಿ ಯಾವ ಆಧಾರಗಳಿವೆ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡಾಗ ನಮ್ಮ ಗಮನಕ್ಕೆ ಬರುವ ಕೆಲವು ಮುಖ್ಯ ಸಂಗತಿಗಳನ್ನು ಈ ಮುಂದಿನಂತೆ ಕ್ರೋಡೀಕರಿಸಬಹುದು.
1. ಭಾರತೀಯ ಶಿಕ್ಷಣ ಪದ್ಧತಿಯ ಕುರಿತ ಚರ್ಚೆಗಳು ವಸಾಹತು ಕಾಲದಲ್ಲಿ, ಅದರಲ್ಲೂ ರಾಷ್ಟ್ರೀಯತಾ ಯುಗದಲ್ಲಿ ಮೊದಲುಗೊಂಡವು. ಅಂದರೆ ಬ್ರಿಟಿಷ್/ಇಂಗ್ಲಿಷ್ ಶಿಕ್ಷಣ ವ್ಯವಸ್ಥೆಯನ್ನು ಮಾದರಿಯಾಗಿಟ್ಟುಕೊಂಡೇ ಭಾರತೀಯ ಶಿಕ್ಷಣದ ಕುರಿತು ಆಲೋಚಿಸಲಾಗಿದೆ. ಬ್ರಿಟಿಷ್ ಶಿಕ್ಷಣವು ಸ್ಕೂಲು, ಕಾಲೇಜು, ಪಠ್ಯಗಳು, ಪಾಠಕ್ರಮ, ಪದವಿ ಪ್ರದಾನ, ಇತ್ಯಾದಿ ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ನಡೆಯುತ್ತದೆ ಹಾಗೂ ಜಾತಿ, ಮತ ಹಾಗೂ ಲಿಂಗಬೇಧಗಳಿಲ್ಲದೇ ಈ ಸಂಸ್ಥೆಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಈ ಶಿಕ್ಷಣವು ಅಕ್ಷರಾಭ್ಯಾಸದಿಂದ ಪ್ರಾರಂಭಗೊಳ್ಳುತ್ತದೆ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣ, ಸಂಶೋಧನೆ ಇತ್ಯಾದಿ ಹಂತಗಳಲ್ಲಿ ಅದು ನಡೆಯುತ್ತದೆ.
2. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಪಾರಂಪರಿಕ ಶಿಕ್ಷಣದ ಕುರಿತು ಬರೆದ ಪಾಶ್ಚ್ಯಾತ್ಯ ಹಾಗೂ ಭಾರತೀಯ ವಿದ್ವಾಂಸರು ಭಾರತೀಯ ಶಿಕ್ಷಣ ಸಂಸ್ಥೆಗಳು ಮೂಲತಃ ಗುರುಕುಲ, ಅಗ್ರಹಾರ, ಮಠ ಇತ್ಯಾದಿಗಳ ರೂಪದಲ್ಲಿ ಇದ್ದವು ಎಂಬ ಅಭಿಪ್ರಾಯವನ್ನು ಗಟ್ಟಿ ಮಾಡಿದರು. ಇಲ್ಲಿನ ಪಠ್ಯಗಳು ವೇದಗಳು, ಶಾಸ್ತ್ರಗಳು, ಇತ್ಯಾದಿ ಸಂಸ್ಕೃತ ಗ್ರಂಥಗಳಾಗಿದ್ದವು ಎಂಬುದಾಗಿ ಗ್ರಹಿಸಿದರು. ಅದರ ಕೆಲವು ಉದಾಹರಣೆಗಳು ಮುಂದಿನಂತಿವೆ: ಪ್ರಾಚೀನ ಭಾರತದಲ್ಲಿ ಅಗ್ರಹಾರಗಳೆಂಬ ಶಿಕ್ಷಣ ಕೇಂದ್ರಗಳಿದ್ದವು, ನಲಂದಾ, ತಕ್ಷಶಿಲಾ ಮುಂತಾದ ವಿಶ್ವವಿದ್ಯಾಲಯಗಳಿದ್ದವು, ಶಿಷ್ಯರೆಲ್ಲ ಗುರುವಿನ ಆಶ್ರಮಕ್ಕೆ ಹೋಗಿ ಕಲಿಯುವ ಪದ್ಧತಿ ಪ್ರಾಚೀನ ಭಾರತೀಯ ಶಿಕ್ಷಣ ಸಂಸ್ಥೆಗೆ ಮಾದರಿಯಾಗಿದೆ, ಇತ್ಯಾದಿ, ಇತ್ಯಾದಿ.
ಈ ಇತಿಹಾಸವು ಇಂದು ಅನೇಕ ತಪ್ಪು ಕಲ್ಪನೆಗಳನ್ನು ಹಾಗೂ ಸಮಸ್ಯೆಗಳನ್ನು ಸೃಷ್ಟಿಸಿದೆ. ಇದು ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯನ್ನು ದೇಶೀ ಸಂದರ್ಭಕ್ಕೆ ಭಾಷಾಂತರಿಸುವ ಪ್ರಯತ್ನವಾಗಿದೆ. ಅಂದರೆ ಸ್ಕೂಲ್, ಕಾಲೇಜು, ಯೂನಿವರ್ಸಿಟಿ, ಡಿಗ್ರಿ, ಪ್ರವೇಶ ಪರೀಕ್ಷೆ, ಇಂಥದ್ದೊಂದು ವ್ಯವಸ್ಥೆ ಪ್ರಾಚೀನ ಕಾಲದಲ್ಲೂ ಇತ್ತು ಎಂದು ಅದು ಭಾವಿಸಿಕೊಳ್ಳಲಾಗಿದೆ. ಹಾಗೆ ಭಾವಿಸಿಕೊಳ್ಳುವಾಗ ಗುರುಕುಲದ ಪರಿಭಾಷೆಗಳಾದ ಕುಲಪತಿ, ಸ್ನಾತಕ, ಸಮಾವರ್ತನ ಮುಂತಾದ ಶಬ್ದಗಳನ್ನು ಬ್ರಿಟಿಷ್ ಪದ್ಧತಿಯ ಭಾರತೀಯ ರೂಪಗಳು ಎಂಬುದಾಗಿ ಕಲ್ಪಿಸಿಕೊಳ್ಳಲಾಯಿತು. ಬ್ರಹ್ಮಚರ್ಯಾಶ್ರಮವನ್ನು ಇಂದಿನ ವಿದ್ಯಾರ್ಥಿ ಜೀವನಕ್ಕೆ ಸಮೀಕರಿಸಿ ಅದರಲ್ಲಿ ಕೂಡ ಪ್ರಾಥಮಿಕ, ಮಾಧ್ಯಮಿಕ, ಉನ್ನತ ಶಿಕ್ಷಣ, ಸ್ಪೆಶಿಯಲೈಜೇಶನ್ ಇತ್ಯಾದಿಗಳನ್ನು ಭಾವಿಸಿಕೊಳ್ಳಲಾಯಿತು. ಈ ಸಮೀಕರಣದಿಂದಾಗಿ ಏನೇನು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂಬುದನ್ನು ಗಮನಿಸೋಣ: ಶಿಕ್ಷಣವನ್ನು ವೇದವಿದ್ಯೆಗೆ ಸಮೀಕರಿಸುವ ಕೆಲಸ ನಡೆಯಿತು. ಬ್ರಹ್ಮಚರ್ಯಾಶ್ರಮವು ಉಪನಯನ ಸಂಸ್ಕಾರದಿಂದ ಪ್ರಾರಂಭವಾಗಬೇಕು. ಹಾಗಾಗಿ ಉಪನಯನ ವಿದಿಗೆ ಒಳಪಡದ ಸ್ತ್ರೀ ಶೂದ್ರ ಸಮುದಾಯಗಳಿಗೆ ಶಿಕ್ಷಣವನ್ನೇ ನಿಷೇಧಿಸಲಾಗಿತ್ತು ಎಂಬ ನಿರ್ಣಯವು ಸ್ವಾಭಾವಿಕವಾಗಿಯೇ ಹುಟ್ಟಿಕೊಂಡಿತು. ಇದೆಲ್ಲಕ್ಕಿಂತ ನಲಂದಾ, ವಿಕ್ರಮಶಿಲಾ ಮುಂತಾದ ಬೌದ್ಧ ವಿಹಾರಗಳನ್ನು ಅಥವಾ ಘಟಿಕಾ ಸ್ಥಾನವೆಂಬ ಬ್ರಾಹ್ಮಣ ಕೇಂದ್ರಗಳನ್ನು ವಿಶ್ವವಿದ್ಯಾಲಯಗಲೆಂದು ಯಾವ ಆಧಾರದ ಮೇಲೆ ಕರೆಯಬಹುದೆಂಬುದನ್ನೂ ಈ ಇತಿಹಾಸಕಾರರು ಸ್ಪಷ್ಟಪಡಿಸುವುದಿಲ್ಲ. ಕೊನೆಗೂ ಅವು ಮತೀಯ ಸಂಸ್ಥೆಗಳಾಗಿಯೇ ಕಾಣಿಸುತ್ತವೆ. ಏಕೆಂದರೆ ವಿಶ್ವವಿದ್ಯಾಲಯವೆಂಬುದು ಒಂದು ಸಮಾಜದ ಎಲ್ಲ ರೀತಿಯ ಉನ್ನತ ಶಿಕ್ಷಣಗಳಿಗೆ ಆಶ್ರಯ ನೀಡುವ ಒಂದು ಸೆಕ್ಯುಲರ್ ಸಂಸ್ಥೆ ಹಾಗೂ ಅದು ಸಾರ್ವತಿಕ ಶಿಕ್ಷಣ ವ್ಯವಸ್ಥೆ. ಆದರೆ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಕುರಿತು ಬರೆಯಲಾದ ಯಾವುದೇ ಸಂಶೋಧನಾ ಪ್ರಬಂಧಗಳನ್ನು ನೋಡಿರಿ, ಅದೊಂದು ಗುರುಕುಲ, ಅಗ್ರಹಾರ, ಘಟಿಕಾಸ್ಥಾನ ಬ್ರಹ್ಮಪುರಿ, ಮಠ, ಸಂಘ, ದೇವಾಲಯಗಳ ಅಧ್ಯಯನವೇ ಆಗಿರುತ್ತದೆ. ಇವೆಲ್ಲ ಬಹುತೇಕ ಬ್ರಾಹ್ಮಣರಿಗೆ ಅಥವಾ ವಿಭಿನ್ನ ಮತೀಯರಿಗೆ ಸಂಬಂಧ ಪಟ್ಟಂಥವು. ಅಂದಮೇಲೆ ಇಲ್ಲಿನ ಶಿಕ್ಷಣವು ಸಾರ್ವತ್ರಿಕವಂತೂ ಅಲ್ಲ. ಈ ಯಾವ ಸ್ಥಳಗಳಲ್ಲೂ ಅನ್ಯರನ್ನು ಒಳಗೊಳ್ಳುವ ಪ್ರಶ್ನೆಯೇ ಇಲ್ಲ. ಹಾಗಾಗಿ ಆಗಿನ ಸ್ಕೂಲುಗಳಿಗೆ ಸ್ತ್ರೀ ಶೂದ್ರರು ಪ್ರವೇಶ ಪಡೆಯುವಂತಿರಲಿಲ್ಲ ಎಂಬುದಾಗಿ ಈ ಇತಿಹಾಸವೇ ಪ್ರಮಾಣೀಕರಿಸುತ್ತದೆ. ಅಂದರೆ ಭಾರತೀಯ ಶೈಕ್ಷಣಿಕ ಇತಿಹಾಸವೇ ತಿಳಿಸುವಂತೆ ಭಾರತದ ಬಹುಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಿದ್ದರು! ಭಾರತದಲ್ಲಿ ಬ್ರಾಹ್ಮಣರು ಅಥವಾ ಅಂಥ ಇತರ ಸೀಮಿತ ಗುಂಪುಗಳನ್ನು ಬಿಟ್ಟರೆ ಉಳಿದ ಎಲ್ಲಾ ಜಾತಿಗಳೂ ಕೂಡ ಶಿಕ್ಷಣದಿಂದ ವಂಚಿತರಾಗಿದ್ದರು ಎಂಬ ನಿರ್ಣಯವು ಸಹಜವಾಗಿಯೇ ಪ್ರಾಪ್ತವಾಯಿತು.
4. ಹಾಗಾಗಿ ಬ್ರಿಟಿಷರು ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿ ಎಲ್ಲರಿಗೂ ಕಲಿಯುವ ಸಮಾನಾವಕಾಶವನ್ನು ಸೃಷ್ಟಿಸಿದರು, ಹಾಗಾಗಿ ಅವರ ಉದ್ದೇಶವೇನೇ ಇರಬಹುದು, ಇದು ವಸಾಹತುಶಾಹಿಯು ಭಾರತೀಯರಿಗೆ ಮಾಡಿದ ಒಂದು ದೊಡ್ಡ ಉಪಕಾರ ಎಂಬ ಧೋರಣೆ ಸುಶಿಕ್ಷಿತರಲ್ಲಿದೆ. ಭಾರತೀಯರ ಭವಿಷ್ಯವು ಈ ಆಧುನಿಕ ಶಿಕ್ಷಣವ್ಯವಸ್ಥೆಯನ್ನು ಬಲಪಡಿಸುವುದರಲ್ಲೇ ಇದೆ ಹಾಗೂ ಭಾರತದಲ್ಲಿ ಸರ್ವರ ಏಳಿಗೆಯಾಗಲು ಈ ಶಿಕ್ಷಣ ವ್ಯವಸ್ಥೆಯೇ ಕಾರಣ, ಭಾರತೀಯರ ಸಾಂಪ್ರದಾಯಿಕ ಶಿಕ್ಷಣವನ್ನು ಇದೇ ಮಾದರಿಯಲ್ಲೇ ಕಲ್ಪಿಸಿಕೊಳ್ಳುವುದೇ ಸರ್ವರ ಕಲ್ಯಾಣಕ್ಕೂ ದಾರಿ ಎಂಬ ಧೋರಣೆ ಬೇರೂರಿದೆ .
ಆದರೆ ಬ್ರಿಟಿಷರು ಹಾಗೂ ಭಾರತೀಯರು ಜೊತೆ ಜೊತೆಯಾಗಿಯೇ ಗಟ್ಟಿಮಾಡಿದ ಈ ಸಾಮಾನ್ಯ ಜ್ಞಾನವನ್ನು 20ನೆಯ ಶತಮಾನದ ಉತ್ತರಾರ್ಧದಲ್ಲಿ ಧರ್ಮಪಾಲ್ ಎಂಬ ವಿದ್ವಾಂಸರು ಪ್ರಶ್ನಿಸಿ ಅದಕ್ಕೆ ವ್ಯತಿರಿಕ್ತ ಆಧಾರಗಳನ್ನು ಒದಗಿಸಿ ತಮ್ಮ “ದಿ ಬ್ಯೂಟಿಫುಲ್ ಟ್ರೀ” ಗ್ರಂಥವನ್ನು ರಚಿಸಿದರು. ಈ ಗ್ರಂಥದಲ್ಲಿ ನೀಡಲಾದ ಮಾಹಿತಿಯು ತಿಳಿಸುವಂತೆ ಬ್ರಿಟಿಷರು ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಪದ್ದತಿಯ ಶಾಲೆಗಳನ್ನು ದೇಶದ ತುಂಬೆಲ್ಲ ಪ್ರಚುರಪಡಿಸುವ ಜೊತೆಗೆ ಅದುವರೆಗೆ ಇದ್ದ ದೇಶೀ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಅಳಿಸಿ ಹಾಕಿದ್ದರು! 17-18ನೆಯ ಶತಮಾನದ ಬ್ರಿಟಿಷ್ ಗಣತಿಯ ದಾಖಲೆಗಳನ್ನು ಪರಿಶೀಲಿಸಿ ಧರ್ಮಪಾಲರು ಈ ವಾದವನ್ನು ಮಂಡಿಸುತ್ತಾರೆ.
ಭಾರತೀಯ ಹಳ್ಳಿಗಳಲ್ಲಿ ವ್ಯಾಪಕವಾಗಿ ದೇಶೀ ಶಾಲೆಗಳು ಇದ್ದವು ಹಾಗೂ ಆಶ್ಚರ್ಯ ತರಿಸುವ ಸಂಗತಿಯೆಂದರೆ ಈ ಶಾಲೆಗಳಲ್ಲಿ ಶೂದ್ರ, ದಲಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಣನೀಯ ಸಂಖ್ಯೆಯಲ್ಲಿ ಇದ್ದರು! ಅಂದರೆ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯು ಬ್ರಿಟಿಷ್ ಪೂರ್ವ ಭಾರತದಲ್ಲೂ ಇತ್ತು. ಭಾರತದಲ್ಲಿ ಬ್ರಾಹ್ಮಣೇತರರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬುದು ಬ್ರಿಟಿಷರ ವ್ಯವಸ್ಥಿತ ಪ್ರಚಾರವಾಗಿದೆ. ಬ್ರಿಟಿಷರು ಭಾರತದಲ್ಲಿ ವಸಾಹತು ಆಳ್ವಿಕೆಯ ಸಮರ್ಥನೆಗಾಗಿ ಇಂಥ ತಂತ್ರಗಳನ್ನು ಹೆಣೆದಿದ್ದರು. ಅಂದರೆ ಧರ್ಮಪಾಲರು ಬ್ರಿಟಿಷ್ ಶಿಕ್ಷಣ ವ್ಯವಸ್ಥೆಗೂ ಪೂರ್ವದ ಭಾರತದಲ್ಲಿ ಅಂಥದ್ದೇ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯು ಇತ್ತು ಎಂಬ ವಾದವನ್ನು ಮಂಡಿಸುತ್ತಾರೆ.
ಧರ್ಮಪಾಲರ ಅಧ್ಯಯನಗಳು ಭಾರತೀಯ ಶಿಕ್ಷಣದ ಕುರಿತ ಕೆಲವು ತಪ್ಪು ಕಲ್ಪನೆಗಳನ್ನು ಎತ್ತಿ ತೋರಿಸುತ್ತವೆ ಎಂಬುದನ್ನು ಒಪ್ಪಿಕೊಂಡರೂ ಭಾರತೀಯ ಶಿಕ್ಷಣ ಹಾಗೂ ಪಾಶ್ಚಾತ್ಯ ಶಿಕ್ಷಣ ಪದ್ದತಿಗಳ ನಡುವಿನ ವ್ಯತ್ಯಾಸದ ಕುರಿತು ನಮ್ಮ ಪ್ರಶ್ನೆ ಹಾಗೇ ಉಳಿಯುತ್ತದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಲೇಖನವು ಮಂಡಿಸುವ ವಾದವೆಂದರೆ, ಭಾರತದಲ್ಲಿ ಬಹುಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಿದ್ದರು ಎಂಬುದು ತಪ್ಪು ಕಲ್ಪನೆ. ಹಾಗಂತ ಭಾರತೀಯ ಶಿಕ್ಷಣ ಪದ್ದತಿಯನ್ನು ಪಾಶ್ಚತ್ಯ ಶಿಕ್ಷಣ ಪದ್ದತಿಗೆ ಸಮೀಕರಿಸಿದರೂ ತಪ್ಪಾಗುತ್ತದೆ. ಇವುಗಳ ನಡುವಿನ ವಿಭಿನ್ನತೆಗಳು ಸಂಸ್ಕೃತಿಗಳ ನಡುವಿನ ವ್ಯತ್ಯಾಸದಿಂದಾಗಿ ಹುಟ್ಟಿಕೊಂಡಿರುವಂಥವು: ಒಂದು ಭಾರತೀಯ ಸಂಸ್ಕೃತಿ, ಮತ್ತೊಂದು ಐರೋಪ್ಯ ಸಂಸ್ಕೃತಿ. ಈ ಸಾಂಸ್ಕೃತಿಕ ವ್ಯತ್ಯಾಸದ ಸ್ವರೂಪವನ್ನು ಸರಿಯಾಗಿ ಸಿದ್ಧಾಂತೀಕರಿಸದೇ ಈ ಎರಡು ಶಿಕ್ಷಣ ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ಅರಿಯುವುದು ಸಾಧ್ಯವಿಲ್ಲ.
ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯ ವೈಶಿಷ್ಟ್ಯವೆಂದರೆ ಅದರ ರಚನೆಯು ಐರೋಪ್ಯ ಸಂಸ್ಕೃತಿಗೇ ವಿಶಿಷ್ಟವಾದ ಕಲಿಕೆಯ ವಿಧಾನದಿಂದ ರೂಪಿತವಾಗಿದೆ. ಒಂದು ಸಂಸ್ಕೃತಿಗೂ ಅದು ಹಾಕಿಕೊಂಡ ಕಲಿಕೆಯ ವಿಧಾನಕ್ಕೂ ಯಾವ ರೀತಿಯ ಸಂಬಂಧ ಇರುತ್ತದೆ ಎಂಬುದನ್ನು ಪ್ರೊ. ಬಾಲಗಂಗಾಧರ ಅವರು ತಮ್ಮ ಬರವಣಿಗೆಗಳಲ್ಲಿ ಸಿದ್ಧಾಂತೀಕರಿಸಲು ಪ್ರಯತ್ನಿಸಿದ್ದಾರೆ. ಅವರ ಪ್ರಕಾರ ಸಂಸ್ಕೃತಿಯೆಂದರೆ ಒಂದು ನಿರ್ದಿಷ್ಟ ಪ್ರಕಾರದ ಕಲಿಕೆಯ ಸಂಯೋಜನೆ. ಜೀವನ ನಡೆಸಲು ಕಲಿಯುವುದು ಹೇಗೆ ಎಂಬುದನ್ನು ಮುಂದಿನ ಪೀಳಿಗೆಗೆ ಕಲಿಸುವುದು ಪ್ರತಿಯೊಂದು ಮಾನವ ಸಮುದಾಯದ ಕೆಲಸವಾಗಿದೆ. ಕಲಿಸಲಿಕ್ಕೆ ವಿಭಿನ್ನ ತಂತ್ರಗಳನ್ನು ಈ ಸಮುದಾಯಗಳು ಅಳವಡಿಸಿಕೊಳ್ಳುತ್ತವೆ. ಎಲ್ಲಾ ಸಮುದಾಯಗಳೂ ಅದಕ್ಕೆ ಒಂದೇ ರೀತಿಯ ತಂತ್ರಗಾರಿಕೆಯನ್ನು, ವಿಧಾನವನ್ನು ನೆಚ್ಚಿಕೊಳ್ಳಬೇಕಿಲ್ಲ. ಐತಿಹಾಸಿಕವಾಗಿ ಮಾನವ ಸಮುದಾಯಗಳಲ್ಲಿ ಬೇರೆ ಬೇರೆ ಪ್ರಕಾರದ ತಂತ್ರಗಾರಿಕೆಗಳು ರೂಪುಗೊಂಡಿವೆ. ಹೀಗೆ ಕಲಿಸುವ ತಂತ್ರಗಾರಿಕೆಯನ್ನು ರೂಪಿಸುತ್ತಾ ಸಂಸ್ಕೃತಿಯೊಂದು ತನ್ನ ವೈಶಿಷ್ಟ್ಯತೆಯನ್ನು ರೂಪಿಸಿಕೊಳ್ಳುತ್ತದೆ. ಹಾಗಾಗಿ ಆಯಾ ಸಂಸ್ಕೃತಿಯ ಉಳಿವಿಗೆ ಅದರ ಕಲಿಕೆಯ ಸಂಯೋಜನೆಯ ಮುಂದುವರಿಕೆಯು ನಿರ್ಣಾಯಕವಾದುದು. ಅಂದರೆ ಈ ಕಲಿಕೆಯ ಸಂಯೋಜನೆಯೇ ಒಂದು ಸಂಸ್ಕೃತಿಯಿಂದ ಮತ್ತೊಂದು ಸಂಸ್ಕೃತಿಯನ್ನು ಪ್ರತ್ಯೇಕಿಸುವ ಲಕ್ಷಣವಾಗಿದೆ.
ಬಾಲಗಂಗಾಧರ ಅವರು ಪಾಶ್ಚಾತ್ಯ ಸಂಸ್ಕೃತಿಗೂ ಭಾರತೀಯ ಸಂಸ್ಕೃತಿಗೂ ಇರುವ ಸಾಂಸ್ಕೃತಿಕ ವ್ಯತ್ಯಾಸದ ಕುರಿತು ಕೆಲವು ಊಹಾ ಸಿದ್ದಾಂತಗಳನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಪಾಶ್ಚಾತ್ಯ ಸಂಸ್ಕೃತಿಯ ಕಲಿಕೆಯ ಸಂಯೋಜನೆಯಲ್ಲಿ ಸೈದ್ಧಾಂತಿಕ ಜ್ಞಾನವು ಪ್ರಧಾನವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಕ್ರಿಯಾಜ್ಞಾನವು ಪ್ರಧಾನವಾಗಿದೆ. ಅಂದರೆ ಜಗತ್ತಿನಲ್ಲಿ ಬದುಕುವುದನ್ನು ಕಲಿಯುವಾಗ ಬದುಕನ್ನು ನಡೆಸುವ ಜಗತ್ತಿನ ಕುರಿತಾದ ಜ್ಞಾನವನ್ನು ಒಂದು ಮಗುವಿಗೆ ನೀಡಬೇಕಾದ್ದು ಮೂಲಭೂತ ಅಗತ್ಯ ಎಂಬುದಾಗಿ ಪಾಶ್ಚ್ಯಾತ್ಯರು ಭಾವಿಸುತ್ತಾರೆ. ಈ ಕೆಲಸವನ್ನು ಹೇಗೆ ಮಾಡಬೇಕೆಂಬ ಪ್ರಶ್ನೆಗೆ ಪಾಶ್ಚತ್ಯ ಸಂಸ್ಕೃತಿಯು ಜಗತ್ತಿನ ಕುರಿತು ಸಿದ್ದಾಂತಗಳನ್ನು ರೂಪಿಸಿ, ಕಲಿಸಿ ಆ ಕೆಲಸವನ್ನು ನಡೆಸುತ್ತದೆ. ಈ ಕಲಿಕೆಯಲ್ಲಿ ಪ್ರಾಯೋಗಿಕ ಕಲಿಕೆಯು ಸೈದ್ಧಾಂತಿಕ ಕಲಿಕೆಗೆ ಸಹಾಯಕವಾಗಿ ಮಾತ್ರ ಬರುತ್ತದೆ. ಅಂದರೆ ಪ್ರಯೋಗವು ಸಿದ್ದಾಂತಗಳನ್ನು ನಿದರ್ಶಿಸುವ ಕೆಲಸವನ್ನು ಮಾಡುತ್ತಿರುತ್ತದೆ. ಆದರೆ ಇದಕ್ಕೆ ಪ್ರತಿಯಾಗಿ ಭಾರತೀಯ ಸಂಸ್ಕೃತಿಯು ಕ್ರಿಯೆಯನ್ನು ನಡೆಸುವ ಮೂಲಕ ಜಗತ್ತಿನ ಜ್ಞಾನವನ್ನು ಪಡೆಯುವುದಕ್ಕೆ ಒತ್ತು ನೀಡುತ್ತದೆ. ಅಂದರೆ ಪ್ರಾಯೋಗಿಕ ಕಲಿಕೆಯು ಭಾರತೀಯ ಸಂಸ್ಕೃತಿಯ ಕಲಿಕೆಯ ಸಂಯೋಜನೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇಲ್ಲಿ ಸಿದ್ಧಾಂತವು ಕ್ರಿಯೆಯನ್ನು ಅರ್ಥೈಸುವ ಹಾಗೂ ವಿವರಿಸುವ ಕೆಲಸ ಮಾಡುತ್ತದೆ. ಹಾಗಾಗಿ ಈ ಕಲಿಕೆಯಲ್ಲಿ ಕ್ರಿಯೆಯು ಪ್ರಾಧಾನ್ಯತೆ ಪಡೆದು ಸಿದ್ಧಾಂತದ ಉಪಯೋಗವು ಅಪ್ರಧಾನವಾಗುತ್ತದೆ.
ಬಾಲಗಂಗಾಧರರ ಈ ಮೇಲಿನ ಊಹಾ ಸಿದ್ಧಾಂತವು ಒಂದು ಸಂಸ್ಕೃತಿಯ ವೈಶಿಷ್ಟ್ಯವನ್ನು ವಿವರಿಸಲು ಅಗಾಧವಾದ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆ ಏಕೆ ಹಾಗಿದೆ ಎಂಬುದಕ್ಕೆ ವೈಜ್ಞಾನಿಕ ಉತ್ತರವನ್ನು ರೂಪಿಸಲು ಅದು ಸಹಾಯ ಮಾಡುತ್ತದೆ. ಸೈದ್ಧಾಂತಿಕ ಕಲಿಕೆಗೆ ಪ್ರಾಧಾನ್ಯತೆ ನೀಡುವ ಪಾಶ್ಚಾತ್ಯ ಶಿಕ್ಷಣವು ರೂಪುಗೊಂಡಿದ್ದು ಯೂರೋಪಿನ ಚರ್ಚುಗಳಲ್ಲಿ ಹಾಗೂ ಸೆಕ್ಯುಲರ್ ಪ್ರಭುತ್ವದಲ್ಲಿ. ಚರ್ಚು ಈ ಜಗತ್ತಿನ ಕ್ರಿಯೆಗಳನ್ನು ಕಲಿಸುವಾಗ ಅವಕ್ಕೆ ಆಧಾರವಾಗಿರುವ ಥಿಯಾಲಜಿಯ ಸಿದ್ಧಾಂತಗಳನ್ನು ಕಲಿಸುವುದು ಅತ್ಯಂತ ಮುಖ್ಯ ಎಂದು ಭಾವಿಸಿತ್ತು. ಅದೇ ಸೆಕ್ಯುಲರ್ ಪ್ರಭುತ್ವವು ವೈಜ್ಞಾನಿಕ ಸಿದ್ಧಾಂತಗಳನ್ನು ಕಲಿಸುವುದು ಅತ್ಯಂತ ಮುಖ್ಯ ಎಂದು ಭಾವಿಸಿತ್ತು. ಸೈದ್ಧಾಂತಿಕ ಕಲಿಕೆಯೆಂದರೆ ತರಗತಿಯ ಕೋಣೆಗಳಲ್ಲಿ ಕಲಿಯುವ ವಿಷಯವನ್ನು ಭಾಷೆಯ ಸಹಾಯದಿಂದ ಬೋಧಿಸುವುದು ಹಾಗೂ ಕ್ರಿಯೆಯ ಕುರಿತು ಓದು-ಬರವಣಿಗೆಗಳ ಮೂಲಕ ತಿಳುವಳಿಕೆ ಪಡೆಯುವುದು. ಈ ಸೈದ್ಧಾಂತಿಕ ತಿಳುವಳಿಕೆಯನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಿ ರಕ್ಷಿಸಿ ದಾಟಿಸಿಕೊಂಡು ಬರುವ ಅನಿವಾರ್ಯತೆಯಿರುವುದರಿಂದ ಅಕ್ಷರ ಜ್ಞಾನ ಹಾಗೂ ಓದಿಗೆ ಪಾಶ್ಚಾತ್ಯ ಶಿಕ್ಷಣದಲ್ಲಿ ನಿರ್ಣಾಯಕ ಪಾತ್ರವಿದೆ. ಅಂದರೆ ಈ ಶಿಕ್ಷಣದಲ್ಲಿ ಜ್ಞಾನವನ್ನು ಓದಿ ಗಳಿಸಿಕೊಳ್ಳಬೇಕಾಗುತ್ತದೆ ಹಾಗೂ ಓದಲಿಕ್ಕೆ ಅಕ್ಷರ ಜ್ಞಾನ ಅನಿವಾರ್ಯ. ಹಾಗಾಗಿ ಈ ಶಿಕ್ಷಣವು ಅಕ್ಷರಾಭ್ಯಾಸದಿಂದಲೇ ಪ್ರಾರಂಭವಾಗಬೇಕು. ಪಾಶ್ಚ್ಯಾತ್ಯರು ವೃತ್ತಿ ತರಬೇತಿ, ಕೌಶಲ್ಯ ಶಿಕ್ಷಣದಂಥ ಪ್ರಾಯೋಗಿಕ ಕಲಿಕೆಯಲ್ಲೂ ಓದು ಬರೆಹ ನಿರ್ಣಾಯಕವೆಂಬುದಾಗಿ ಭಾವಿಸಿದ್ದರು. ಹಾಗಾಗಿ ಪಠ್ಯ ಪುಸ್ತಕ ಈ ಶಿಕ್ಷಣದ ಅನಿವಾರ್ಯ ಅಂಗವಾಗಿದೆ.
ಅದೇ ರೀತಿಯಲ್ಲಿ ಪಾಶ್ಚಾತ್ಯ ಶಿಕ್ಷಣದಲ್ಲಿ ಒಬ್ಬನ ಪರಿಣತಿಯನ್ನು ಅವನ ಪ್ರಯೋಗಶಕ್ತಿಯ ಮೂಲಕ ಅಳೆಯುವುದಕ್ಕಿಂತ ಬುದ್ಧಿಶಕ್ತಿಯ ಮೂಲಕ ಅಳೆಯುವ ಪದ್ಧತಿ ಬೆಳೆಯಿತು. ಅಂದರೆ ಆಚರಿಸುವುದಕ್ಕಿಂತ ಅರ್ಥ ಮಾಡಿಕೊಳ್ಳುವುದಕ್ಕೆ ಮಹತ್ವ ನೀಡಲಾಗಿದೆ. ಬೌದ್ಧಿಕಜ್ಞಾನವನ್ನು ವ್ಯಕ್ತಪಡಿಸುವುದಕ್ಕೂ ಬರವಣಿಗೆಯೇ ನಿರ್ಣಾಯಕವಾಗಿದೆ. ಪರೀಕ್ಷೆಗಳಲ್ಲಿ ಥಿಯರಿ ಎಂಬ ಭಾಗದಲ್ಲಿ ವಿದ್ಯಾರ್ಥಿಯು ತನ್ನ ಜ್ಞಾನವನ್ನು ಬರೆದು ತಿಳಿಸಿ ಅಂಕಗಳನ್ನು ಪಡೆಯುತ್ತಾನೆ. ಅಂದರೆ ಕಲಿಕೆಯ ಪರೀಕ್ಷೆಗೆ ಬರವಣಿಗೆ ನಿರ್ಣಾಯಕವಾಗುತ್ತದೆ. ಇವರು ಕಲಿಯುವ ವಿಷಯಗಳು ಒಂದಿಲ್ಲೊಂದು ಸಿದ್ಧಾಂತಗಳನ್ನು ಆಧರಿಸಿರುವುದರಿಂದ ಸಿದ್ದಾಂತವನ್ನು ಕಟ್ಟುವ ಸಂಶೋಧನೆಯ ಕೆಲಸವು ಶಿಕ್ಷಣದ ಬಹುಮುಖ್ಯವಾದ ಅಂಗವಾಗಿದೆ: ಅವು ಸಮಾಜ ವಿಜ್ಞಾನಗಳಾಗಿರಬಹುದು, ನಿಸರ್ಗ ವಿಜ್ಞಾನಗಳಾಗಿರಬಹುದು, ಇಲ್ಲ ವಾಣಿಜ್ಯ ತಂತ್ರಜ್ಞಾನ ವಿಜ್ಞಾನಗಳಾಗಿರಬಹುದು, ಸಾಹಿತ್ಯ, ಕಲೆ ಮುಂತಾದ ವಿಷಯಗಳಾಗಿರಬಹುದು ಪಾಶ್ಚಾತ್ಯರು ಶಿಕ್ಷಣದಲ್ಲಿ ಜೀವನೋಪಯೋಗಿ ಶಿಕ್ಷಣ ಹಾಗೂ ಜ್ಞಾನ ಹಾಗೂ ವ್ಯಕ್ತಿತ್ವವನ್ನು ಎತ್ತರಿಸುವ ಉನ್ನತ ಶಿಕ್ಷಣಗಳ ಪರಿಕಲ್ಪನೆಗಳನ್ನು ವಿಂಗಡಿಸಿಕೊಂಡಿದ್ದರು. ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಅಥವಾ ಸೈದ್ಧಾಂತಿಕ ಜ್ಞಾನದ ಉತ್ಪಾದನೆಯು ನಡೆಯುತ್ತದೆ. ಅದಕ್ಕನುಗುಣವಾಗಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣ ಹಾಗೂ ಡಿಗ್ರಿಗಳನ್ನು ರೂಪಿಸಿಕೊಂಡಿದ್ದರು. ಉನ್ನತ ಶಿಕ್ಷಣವನ್ನು ನಿರ್ವಹಿಸುವ ವಿಶ್ವವಿದ್ಯಾಲಯ(ಯೂನಿವರ್ಸಿಟಿ) ಎಂಬ ಸಂಸ್ಥೆಗಳನ್ನು ರೂಪಿಸಿಕೊಂಡಿದ್ದರು. ಉನ್ನತ ಶಿಕ್ಷಣವು ಮನುಷ್ಯ ಜೀವನವನ್ನು ಹೊಟ್ಟೆ ಬಟ್ಟೆಯ ಹಂತದಿಂದ ಮೇಲೆತ್ತಿ ವ್ಯಕ್ತಿತ್ವದ ಉನ್ನತೀಕರಣವನ್ನು ಉದ್ದೇಶವಾಗಿಟ್ಟುಕೊಂಡಿದೆ ಹಾಗೂ ಸಮಾಜದಲ್ಲಿ ಅಗತ್ಯವಿರುವ ಎಲ್ಲಾ ಪ್ರಕಾರದ ಶಿಕ್ಷಣಗಳನ್ನೂ ಸೈದ್ಧಾಂತಿಕ ತಳಹದಿಯ ಮೇಲೆ ನಿಲ್ಲಿಸುವ ಗುರಿಯನ್ನು ಹೊಂದಿದೆ. ಯುನಿವರ್ಸಿಟಿ ಎಂಬುದು ಈ ಎಲ್ಲಾ ರೀತಿಯ ಉನ್ನತ ಶಿಕ್ಷಣಗಳಿಗೂ ಅಧಿಕೃತ ಮುದ್ರೆಯೊತ್ತುವ, ಯಾವುದೇ ರೀತಿಯ ಉದ್ಯೋಗಗಳಿಗೂ ಅರ್ಹತೆಯನ್ನು ಧ್ರಡೀಕರಿಸುವ ಒಂದು ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿತು. ವಿಶ್ವವಿದ್ಯಾಲಯ ವ್ಯವಸ್ಥೆಯ ಹೊರಗೆ ಸಮಾಜದಲ್ಲಿ, ಕುಟುಂಬಗಳಲ್ಲಿ ನಡೆಯುವ ಶಿಕ್ಷಣವು ಅನಧಿಕೃತ ಶಿಕ್ಷಣದ ರೂಪು ತಳೆಯಿತು. ಹಾಗೂ ಅಂಥ ಶಿಕ್ಷಣಕ್ಕೆ ಮೌಲ್ಯವೇ ಇಲ್ಲವಾಯಿತು.
ಬ್ರಿಟಿಷರು ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಅಂಥ ಶಿಕ್ಷಣವು ಇಂಗ್ಲಿಷ್ ಭಾಷೆಯಲ್ಲಿತ್ತು ಎಂಬುದಕ್ಕಿಂತ ಇಂಗ್ಲಿಷ್ ಪದ್ದತಿಯಲ್ಲಿತ್ತು ಎಂಬುದು ಮುಖ್ಯ ಹಾಗೂ ಇಂಗ್ಲಿಷ್ ಪದ್ದತಿಯು ಪಾಶ್ಚಾತ್ಯ ಕಲಿಕೆಯ ಸಂಯೋಜನೆಯನ್ನಾಧರಿಸಿ ರೂಪುಗೊಂಡದ್ದು ಎಂಬುದು ನೆನಪಿನಲ್ಲಿಡಬೇಕಾದ ವಿಷಯ. ಅಂದರೆ ಅದರಲ್ಲಿ ಸೈದ್ಧಾಂತಿಕ ಕಲಿಕೆಗೆ ತಳಹದಿಯಾದ ಅಕ್ಷರಾಭ್ಯಾಸ, ಕ್ಲಾಸ್ ರೂಮುಗಳಲ್ಲಿ ಪಾಠ, ಪಠ್ಯಪುಸ್ತಕಗಳು, ಓದಿ ತಿಳಿದುಕೊಳ್ಳುವುದು, ಬರೆದು ತಿಳಿಸುವುದು ಅನುಸರಿಸತಕ್ಕ ವಿಧಾನಗಳಾಗಿವೆ. ಬ್ರಿಟಿಷರು ಇಲ್ಲಿ ಪ್ರೈಮರಿ ಸ್ಕೂಲು, ಕಾಲೇಜು, ವಿಶ್ವವಿದ್ಯಾಲಯ ಇತ್ಯಾದಿ ಶಿಕ್ಷಣ ಕೇಂದ್ರಗಳನ್ನು ತೆರೆದರು. ಕ್ರಮೇಣ ದೇಶದಾದ್ಯಂತ ವ್ಯವಸ್ಥಿತವಾಗಿ ಈ ಹೊಸ ಪ್ರಕಾರದ ಶಿಕ್ಷಣವನ್ನು ಪ್ರಚುರಪಡಿಸಿದರು. ಇಂಥ ಶಿಕ್ಷಣದಲ್ಲಿ ಪ್ರಾಯೋಗಿಕ ಜ್ಞಾನವು ಮಹತ್ವ ಕಳೆದುಕೊಂಡಿತು. ಎಷ್ಟರ ಮಟ್ಟಿಗೆಂದರೆ ವಸಾಹತು ಪೂರ್ವ ಕಾಲದ ನಮ್ಮ ಭಾರತೀಯ ಶಿಕ್ಷಣದ ಇತಿಹಾಸವನ್ನು ಬರೆಯುವ ಕೆಲಸ ಪ್ರಾರಂಭವಾದಾಗ ಸ್ವತಃ ಅದನ್ನು ಬರೆದ ಭಾರತೀಯ ಸುಶಿಕ್ಷಿತರಿಗೇ ಬೇರೆ ಯಾವ ಶಿಕ್ಷಣದ ಮಾದರಿಯೂ ಮಹತ್ವವೆನ್ನಿಸಲಿಲ್ಲ.
ವಸಾಹತು ಪೂರ್ವದ ಭಾರತದಲ್ಲಿ ಯಾವ ಪ್ರಕಾರದ ಶಿಕ್ಷಣ ಪದ್ದತಿ ಇತ್ತು ಎಂಬುದನ್ನು ಸರಿಯಾಗಿ ತಿಲಿದುಕೊಳ್ಳುವ ಕೆಲಸ ಇನ್ನು ಮುಂದೆ ನಡೆಯಬೇಕಾಗಿದೆ. ಇಲ್ಲಿ ಓದನ್ನು ಹಾಗೂ ಗ್ರಂಥಾಭ್ಯಾಸಗಳನ್ನು ಆಧರಿಸಿದ ಶಿಕ್ಷಣ ಕೇಂದ್ರಗಳೂ ಇದ್ದವು, ಇಂಥವನ್ನೇ ನಾವು ಗುರುಕುಲ, ಅಗ್ರಹಾರ, ವಿಹಾರ, ಇತ್ಯಾದಿ ಹೆಸರಿನಿಂದ ಗುರುತಿಸುತ್ತೇವೆ. ಇಂಥ ಸ್ಥಾನಗಳೆಲ್ಲ ವೈದಿಕ, ಬೌದ್ಧ, ಜೈನ, ಶೈವ, ವೈಷ್ಣವ, ಇತ್ಯಾದಿ ಮತ ಸಂಪ್ರದಾಯಗಳ ಪಾರಮಾರ್ಥಿಕ ತಾತ್ವಿಕ ಜಿಜ್ಞಾಸೆಗಳನ್ನು, ಶಾಸ್ತ್ರಗಳನ್ನು, ಗ್ರಂಥ ರಾಶಿಗಳನ್ನು ಕಲಿಸುವ ಸ್ಥಾನಗಳಾಗಿದ್ದವು. ಇಲ್ಲಿ ಬಳಸಲಾದ ಭಾಷಾ ವೈವಿಧ್ಯತೆಯೂ ಅಗಾಧವಾಗಿತ್ತು. ಆಯಾ ಸಂಪ್ರದಾಯಗಳಿಗೆ ಸೇರಿದವರನ್ನು ಹೊರತುಪಡಿಸಿ ಉಳಿದವರಿಗೆ ಆ ಸ್ಥಾನಗಳ ಅಗತ್ಯವೂ ಇರಲಿಲ್ಲ. ಸಾಧಾರಣವಾಗಿ ವ್ಯವಸ್ಥಿತ ಅಧ್ಯಯನದ ಹಿನ್ನಲೆ ಇಲ್ಲದೇ ಇಂಥ ಶಿಕ್ಷಣವು ದುಃಸ್ಸಾಧ್ಯವಾಗಿರುವುದರಿಂದ ಹಾಗೂ ಸಂಪ್ರದಾಯದ ಹೊರಗಿನವರಿಗೆ ಅದರ ಪ್ರಸ್ತುತತೆಯೇ ಇಲ್ಲದ್ದರಿಂದ ಕಲಿಕೆಯ ದೃಷ್ಟಿಯಿಂದ ಅದನ್ನು ಇತರರಿಗೆ ನಿಷೇಧಿಸುವ ಪ್ರವೃತಿ ಕೂಡ ಕಂಡುಬರುತ್ತದೆ. ಇಂಥ ಸ್ಥಾನಗಳನ್ನು ನಾವು ಸಾರ್ವತ್ರಿಕ ಶಿಕ್ಷಣವನ್ನು ನೀಡುವ ಆಧುನಿಕ ಸ್ಕೂಲು, ಕಾಲೇಜು ವಿಶ್ವವಿದ್ಯಾಲಯಗಳಿಗೆ ಹೋಲಿಸುವಂತಿಲ್ಲ. ಇದೇ ರೀತಿ ಬಹುಶ: ಅಗತ್ಯವಿರುವವರಿಗೆ ಅಕ್ಷರಾಭ್ಯಾಸ, ಗಣಿತ ಇತ್ಯಾದಿ ವ್ಯಾವಹಾರಿಕ ಶಿಕ್ಷಣವನ್ನು ಕಲಿಸುವ ಸ್ಥಾನಗಳೂ ಇದ್ದವು. ಹಾಗೂ ಇಂಥ ಲೌಕಿಕ ಶಿಕ್ಷಣವನ್ನು ಮೇಲೆ ಉಲ್ಲೇಖಿಸಿದ ಮತ ಸಂಪ್ರದಾಯಗಳ ಕಲಿಕಾ ಸ್ಥಾನಗಳಲ್ಲೂ ಕಲಿಸಲಾಗುತ್ತಿತ್ತು. ಮಧ್ಯಕಾಲದ ದೇವಾಲಯಗಳಲ್ಲಿ ಹಾಗೂ ಮಠಗಳಲ್ಲಿ ಕೂಡ ಇಂಥ ಪಾಠಶಾಲೆಗಳು ಇರುತ್ತಿದ್ದವು. ವ್ಯವಹಾರಕ್ಕೆ ಅಗತ್ಯವಾದ ಅಕ್ಷರ, ಭಾಷೆ, ವ್ಯಾಕರಣ, ಗಣಿತ, ವಾಣಿಜ್ಯ, ಇತ್ಯಾದಿಗಳನ್ನು ಕಲಿಸುವ ದೃಷ್ಟಿಯನ್ನಿಟ್ಟುಕೊಂಡು ಇಂಥ ಸ್ಥಾನಗಳು ಅಸ್ತಿತ್ವಕ್ಕೆ ಬಂದಿದ್ದವು. ಬಹುಶ: ಧರ್ಮಪಾಲರು ಉಲ್ಲೇಖಿಸುವ ದೇಶೀ ಶಿಕ್ಷಣ ಶಾಲೆಗಳು ಈ ಮೇಲಿನ ಪ್ರಕಾರಗಳಿಗೆ ಸೇರುತ್ತವೆ.
ಆದರೆ ಇವಿಷ್ಟನ್ನೇ ಭಾರತೀಯ ಶಿಕ್ಷಣ ಪದ್ಧತಿ ಎಂದು ನಿರ್ಣಯಿಸುವಂತಿಲ್ಲ. ಭಾರತದಲ್ಲಿ ಈ ಮೇಲಿನ ಔಪಚಾರಿಕ ಶಿಕ್ಷಣ ಪ್ರಕಾರಗಳಿಗಿಂತ ವ್ಯಾಪಕವಾಗಿ ಇನ್ನೂ ಬೇರೆ ಬೇರೆ ಅನೌಪಚಾರಿಕ ಪ್ರಾಯೋಗಿಕ ಕಲಿಕೆಗಳು ಚಾಲ್ತಿಯಲ್ಲಿ ಇದ್ದುದು ಗೊತ್ತಾಗುತ್ತದೆ. ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಅನೌಪಚಾರಿಕ ಶಿಕ್ಷಣವೇ ಪ್ರಾಧಾನ್ಯತೆ ವಹಿಸಿದ್ದು ಕಂಡುಬರುತ್ತದೆ. ಅವುಗಳಲ್ಲಿ ಕುಟುಂಬಗಳೊಳಗೆ ವೃತ್ತಿಗಳ ಕಲಿಕೆ, ಪರಿಣತ ಆಚಾರ್ಯರಲ್ಲಿ ಹೋಗಿ ವಿದ್ಯೆಯನ್ನು, ಕಲೆಯನ್ನು ಕೌಶಲ್ಯವನ್ನು ಕಲಿಯುವುದು, ವೃತ್ತಿ ಪರಿಣತರ ಬಳಿ ಕೆಲಸ ಮಾಡುತ್ತ ಕಲಿಯುವುದು, ಇತ್ಯಾದಿ, ಇತ್ಯಾದಿ. ಬಹುಶ: ಭಾರತದಲ್ಲಿ ಬಹುತೇಕ ವೃತ್ತಿ, ಕಲಾಕಾರ ಸಮುದಾಯಗಳು ಇಂಥ ಶಿಕ್ಷಣವನ್ನೇ ಆಧರಿಸಿಕೊಂಡಿದ್ದವು. ಅಂದರೆ ಬ್ರಿಟಿಷ್ ಪೂರ್ವ ಭಾರತದಲ್ಲಿ ಬಹುಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಿದ್ದರು ಎಂಬ ಹೇಳಿಕೆಯೇ ನಿರಾಧಾರವಾದುದು. ಭಾರತದ ಶಿಕ್ಷಣದ ಸ್ವರೂಪವೇ ಬೇರೆ ಥರ ಇತ್ತು ಎಂಬುದನ್ನು ಗುರುತಿಸುವ ಅಗತ್ಯವಿದೆ.
ಹಾಗಾದರೆ ಭಾರತೀಯ ಶಿಕ್ಷಣದ ಸ್ವರೂಪವು ಹೇಗಿತ್ತು ಎಂಬ ಪ್ರಶ್ನೆ ಏಳುತ್ತದೆ. ಭಾರತೀಯ ಸಂಸ್ಕೃತಿಯು ಅಕ್ಷರ (ಲಿಪಿ) ಜ್ಞಾನವು ಶಿಕ್ಷಣಕ್ಕೆ ನಿರ್ಣಾಯಕ ಎಂಬುದಾಗಿ ಪರಿಗಣಿಸಿರಲಿಲ್ಲ. ಅಕ್ಷರ ಜ್ಞಾನವು ಜ್ಞಾನದ ಗಳಿಕೆಗೂ ನಿರ್ಣಾಯಕವಾಗಿರಲಿಲ್ಲ. ಗ್ರಂಥಗಳನ್ನು ಉರುಹೊಡೆಯುವುದರಿಂದಾಗಲೀ, ಶಾಸ್ತ್ರ ಪಾಂಡಿತ್ಯದಿಂದಾಗಲೀ ಒಬ್ಬನು ಜ್ಞಾನಿಯಾಗಿಬಿಡುತ್ತಾನೆ ಎಂಬ ಸಾಧ್ಯತೆಯನ್ನು ನಿರಾಕರಿಸುವ ಹೇಳಿಕೆಗಳು, ಕಥೆಗಳು ನಮ್ಮಲ್ಲಿ ಧಾರಾಳವಾಗಿ ಸಿಗುತ್ತವೆ. ಅಂದಮೇಲೆ ಒಬ್ಬನ ಜ್ಞಾನವನ್ನು ಕೇವಲ ಅವನ ಮಾತಿನ ಅಥವಾ ಬರವಣಿಗೆಯ ಆಧಾರದಿಂದ ಒರೆಗೆ ಹಚ್ಚುವ ಸಾಧ್ಯತೆಯೇ ಇಲ್ಲಿ ಉದ್ಭವಿಸುವುದಿಲ್ಲ. ಬಾಲಗಂಗಾಧರ ಅವರು ಇಂಥ ಜ್ಞಾನವನ್ನು ಕ್ರಿಯಾಜ್ಞಾನ ಎಂಬುದಾಗಿ ಗುರುತಿಸುತ್ತಾರೆ. ಅಂದರೆ ಕ್ರಿಯೆಗಳನ್ನು ನಡೆಸುವ ಜ್ಞಾನ. ಗುರು ಹಿರಿಯರ ಕ್ರಿಯೆಗಳನ್ನು ಅನುಕರಿಸುತ್ತ ಕ್ರಿಯೆಗಳನ್ನು ಕಲಿಯುವ ವಿಧಾನ ಇಲ್ಲಿ ಮುಖ್ಯವಾಗಿದೆ. ಅಂದರೆ ಕ್ರಿಯೆಗಳನ್ನು ನಡೆಸುತ್ತ ಈ ಕ್ರಿಯಾ ಜ್ಞಾನವನ್ನು ಒಬ್ಬನು ಗಳಿಸುತ್ತಾನೆಯೇ ವಿನಃ ಅದರ ಕುರಿತು ಓದಿ, ಪಾಂಡಿತ್ಯವನ್ನು ಗಳಿಸುವುದರಿಂದಲ್ಲ. ಕ್ರಿಯಾ ಜ್ಞಾನವೇ ಅಂತಿಮ ಗುರಿ ಎಂಬುದಾಗಿ ಎಲ್ಲ ಕ್ಷೇತ್ರಗಳಲ್ಲೂ ಒತ್ತಿ ಹೇಳಲಾಗಿದೆ. ಶಾಸ್ತ್ರಗ್ರಂಥಗಳ ಅಧ್ಯಯನಕ್ಕೆ ಮಹತ್ವ ಕೊಟ್ಟ ಶಿಕ್ಷಣ ಸಂಪ್ರದಾಯಗಳಲ್ಲಿ ಕೂಡ ಗುರುವನ್ನು ಕೇಳಿ ಗಟ್ಟಿ ಧ್ವನಿಯಲ್ಲಿ ಅನುಕರಿಸಿ ಪುನರಾವರ್ತಿಸಿ ಗ್ರಂಥಗಳನ್ನು ಕಲಿಯುವ ಪದ್ಧತಿ ಪ್ರಾಮುಖ್ಯತೆ ಪಡೆದಿತ್ತು. ಅಷ್ಟಾಗಿಯೂ ಜ್ಞಾನವು ಪ್ರಧಾನವಾಗಿ ಕ್ರಿಯೆಯ ರೂಪದಲ್ಲಿದ್ದು ಈ ಯಾವ ಶಾಸ್ತ್ರ ಪಾಂಡಿತ್ಯಗಳ ಅಗತ್ಯವೇ ಇಲ್ಲದೆಯೂ ಒಬ್ಬನು ಕ್ರಿಯೆಗಳನ್ನು ನಡೆಸುತ್ತ ಕ್ರಿಯಾಜ್ಞಾನವನ್ನು ಹೊಂದಬಹುದು. ಇದು ಉನ್ನತ ಆಧ್ಯಾತ್ಮಿಕ ವಿದ್ಯೆಯಿಂದ ಹಿಡಿದು ತೀರಾ ಪ್ರಾಪಂಚಿಕವಾದ ವೃತ್ತಿ ವಿದ್ಯೆಗಳ ವರೆಗೂ ಪ್ರಚಲಿತದಲ್ಲಿದ್ದ ಶಿಕ್ಷಣ ಪದ್ಧತಿಯಾಗಿತ್ತು. ಇಂಥ ಪದ್ದತಿಯಲ್ಲಿ ಓದುವುದಕ್ಕೆ, ಬರೆಯುವುದಕ್ಕೆ ಯಾವ ನಿರ್ಣಾಯಕತೆಯೂ ಉಳಿಯಲಾರದು. ಬಹುಶ ಈ ಕಾರಣದಿಂದಾಗಿಯೇ ಬಹುತೇಕ ಭಾರತೀಯ ವಿದ್ಯೆಗಳಿಗೆ ಪಠ್ಯಗಳೂ ನಿರ್ಣಾಯಕವಾಗಿರಲಿಲ್ಲ.
ಭಾರತೀಯ ಶಿಕ್ಷಣ ಪದ್ಧತಿಗಳಲ್ಲಿ ಈ ಕಾರಣದಿಂದ ಗುರು, ಆಚಾರ್ಯ, ಮುಂತಾದವರು ನಿರ್ಣಾಯಕರಾಗುತ್ತಾರೆ. ಗುರುಕುಲ ಕಲ್ಪನೆಯನ್ನು ವ್ಯಪಕಾರ್ಥದಲ್ಲಿ ಪ್ರಾಯೋಗಿಕ ಕಲಿಕೆಯ ಒಂದು ವಿಧಾನವೆಂಬಂತೆ ಗ್ರಹಿಸಿದಾಗ ಆಚಾರ್ಯನು ಶಿಷ್ಯನನ್ನು ಈ ಕ್ರಿಯಾ ಜ್ಞಾನಕ್ಕೆ ತೆರೆಯುವ ಪ್ರಕ್ರಿಯೆಯೇ ಅಲ್ಲಿನ ಕಲಿಕೆ ಎಂಬುದು ಸ್ಪಷ್ಟವಾಗುತ್ತದೆ. ಅದನ್ನು ನಡೆಸುವ ಸ್ಥಳವೇ ಶಾಲೆ. ಇಂಥ ಕಲಿಕೆಯ ಸ್ಥಳಗಳನ್ನು ಆಧುನಿಕ ಸ್ಕೂಲು ಕಾಲೇಜುಗಳಿಗೆ ಹೋಲಿಸುವಂತಿಲ್ಲ. ವಿಷಯಗಳನ್ನು ಪಾಠಕ್ರಮ, ಪಠ್ಯ ಮುಂತಾದ ಕ್ರಮಗಳಲ್ಲಿಯೇ ಯೋಜಿಸುವ ಅಗತ್ಯವೂ ಇದಕ್ಕಿಲ್ಲ. ಆಚಾರ್ಯನೇ ಇಲ್ಲಿ ಎಲ್ಲವೂ ಆಗಿರುತ್ತಾನೆ. ಈ ಶಿಕ್ಷಣ ಪದ್ದತಿಯು ಕಲಿಯುವ ವಿಷಯದ ಅಗತ್ಯಕ್ಕೆ ತಕ್ಕಂತೆ ವೈವಿಧ್ಯಪೂರ್ಣವಾಗಿ ರೂಪುಗೊಂಡಿರುವುದು ಕಂಡುಬರುತ್ತದೆ. ಅಂದರೆ ಪ್ರಾಪಂಚಿಕ ವಿದ್ಯೆಗಳಿಂದ ಪಾರಮಾರ್ಥಿಕ ವಿದ್ಯೆಗಳವರೆಗೂ ಗುರು ಆಚರಿಸಿ, ತೋರಿಸಿ ಶಿಷ್ಯನಿಗೆ ಆಚರಣೆಯನ್ನು ಕಲಿಸುತ್ತಾನೆ. ಅಂದರೆ ಇಲ್ಲಿ ಕಲಿಕೆ ಓದಿನ ಮೂಲಕ ನಡೆಯುವುದಿಲ್ಲ, ಬದಲಾಗಿ ಕ್ರಿಯೆಯ ಅನುಕರಣೆಯ ಮೂಲಕ ನಡೆಯುತ್ತದೆ. ಉದಾಹರಣೆಗೆ ನಮ್ಮ ಕಲಾ ಪ್ರಕಾರಗಳಾದ ಸಂಗೀತ, ಶಿಲ್ಪ, ನೃತ್ಯ, ನಾಟಕ, ಇತ್ಯಾದಿ ಕಲಿಕೆಗಳಲ್ಲಿ ಗುರುವು ಶಿಷ್ಯನ ಜೊತೆಗೇ ಕೃತಿಗಳನ್ನು ರಚಿಸುತ್ತ ಕಲಿಸುತ್ತಾನೆ, ಶಿಷ್ಯನು ಅವನನ್ನು ಅನುಕರಿಸುತ್ತ ಕೃತಿಗಳನ್ನು ರಚಿಸುತ್ತ ಕಲಿಯುತ್ತಾನೆ. ನಾವು ಯಾವುದನ್ನು ವೈದಿಕ ವಿದ್ಯೆ ಎನ್ನುತ್ತೇವೆಯೋ ಅದೂ ಮಂತ್ರಗಳ ಉಚ್ಚಾರಣೆಯ ಅನುಕರಣೆಯ ಮೂಲಕ ಕಲಿತ ವಿದ್ಯೆಯೇ ಆಗಿದೆ. ಆ ಮಂತ್ರಗಳ ಅರ್ಥವನ್ನು ತಿಳಿದುಕೊಳ್ಳುವುದರ ಮೂಲಕ ಅಲ್ಲಿ ಕಲಿಕೆ ಪ್ರಾರಂಭವಾಗುವುದಿಲ್ಲ. ಬಾಲಗಂಗಾಧರ ಅವರು ಹೇಳುವುದೆಂದರೆ ಭಾರತೀಯ ಸಂಸ್ಕೃತಿಗೆ ಸೇರಿದವರು ಇಡೀ ಪ್ರಪಂಚವೇ ಒಂದು ಆಚರಣೆ ಎಂಬುದಾಗಿ ನೋಡುತ್ತಾರೆ, ಬದುಕೂ ಒಂದು ಆಚರಣೆ ಹಾಗೂ ನಾವು ಆಚರಿಸುವುದನ್ನು ಕಲಿಯುವುದರ ಮೂಲಕವೇ ಬದುಕು ರೂಪುಗೊಳ್ಳುತ್ತದೆ. ಹಾಗಾಗಿ ಇಲ್ಲಿನ ವಿದ್ಯಾರ್ಥಿಯೊಬ್ಬನಿಗೆ ಆಚರಣೆಯಲ್ಲಿನ ಶ್ರದ್ದೆ ಅತ್ಯಂತ ಶ್ರೇಷ್ಠ ಗುಣವಾಗಿದೆ. ಸಾವಿರಾರು ವರ್ಷಗಳವರೆಗೆ ಈ ಕ್ರಿಯಾಶ್ರದ್ಧೆಯನ್ನು ಕಲಿತ ಈ ಸಂಸ್ಕೃತಿಯು ಪ್ರಪಂಚದಲ್ಲೇ ಅನುಪಮವಾದ ಕೃತಿಗಳನ್ನು ಸೃಜಿಸಿರುವುದು ಆಶ್ಚರ್ಯವೇನಲ್ಲ. ಭಾರತೀಯ ಸಾಂಪ್ರದಾಯಿಕ ವಿದ್ಯೆಗಳಾದ ಆಧ್ಯಾತ್ಮ, ಯೋಗ, ವಿಧಿಕರ್ಮಗಳು, ಕಾವ್ಯ, ಸಂಗೀತ, ಭಾಷಾಶಾಸ್ತ್ರ, ನಾಟ್ಯ, ಶಿಲ್ಪಕಲೆ, ದೇವಾಲಯಗಳು, ಕುಶಲಕರ್ಮಗಳು, ತಾಂತ್ರಿಕತೆ, ಅಡುಗೆ ಹೀಗೆ ಇಂದು ಪ್ರಪಂಚದಾದ್ಯಂತ ಪಸರಿಸಿರುವ ನಮ್ಮ ಹೆಮ್ಮೆಯ ವಿದ್ಯೆಗಳೆಲ್ಲ ಕ್ರಿಯಾಜ್ಞಾನದ ಮೂಲಕವೇ ರೂಪುತಳೆದಿವೆ. ಇವುಗಳ ಕಲಿಕೆ ಆಧುನಿಕ ಶಾಲೆ ಕಾಲೇಜುಗಳಂಥ ಸಂಸ್ಥೆಗಳಲ್ಲಿ ನಡೆಯಲಿಲ್ಲ. ಇವು ಸಾರ್ವರ್ತಿಕ ಶಿಕ್ಷಣಗಳೂ ಆಗಿರಲಿಲ್ಲ. ಆಧುನಿಕ ಮಾನದಂಡದಲ್ಲಿ ಇವೆಲ್ಲವೂ ಶಿಕ್ಷಣದ ಸಾಲಿಗೆ ಸೇರದಿರಬಹುದು, ಆದರೆ ಕಲಿಕೆಯಿಲ್ಲದೇ ಇವೆಲ್ಲ ಹೇಗೆ ಸಾಧ್ಯವಾದವು?
ಬ್ರಿಟಿಷ್ ಪೂರ್ವ ಭಾರತದಲ್ಲಿ ಬಹುಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಿದ್ದರು ಎಂಬ ಹೇಳಿಕೆಯು ಇಂದು ಪ್ರತಿಯೊಬ್ಬ ವಿದ್ಯಾವಂತನ ಬಾಯಲ್ಲೂ ನಲಿದಾಡುತ್ತಿದೆ! ಇಂಥವರ ತಕರಾರೇನೆಂದರೆ ಈಗಿನಂತೆ ಜಾತ್ಯತೀತವಾಗಿ ಎಲ್ಲ ಮಕ್ಕಳೂ ಶಾಲೆ, ಕಾಲೇಜುಗಳಲ್ಲಿ ಬಂದು ಪ್ರವೇಶಾತಿ ಪಡೆದು ಕಲಿಯುತ್ತಿರಲಿಲ್ಲ ಅಂತ ಅಷ್ಟೆ. ಇಷ್ಟನ್ನೇ ಆಧಾರವಾಗಿಟ್ಟುಕೊಂಡು ಬ್ರಿಟಿಷ್ ಪೂರ್ವ ಭಾರತದಲ್ಲಿ ಬಹುಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಿದ್ದರು ಎನ್ನುವುದಾದರೆ ಅದು ಭಾರತೀಯ ಪಾರಂಪರಿಕ ಶಿಕ್ಷಣದ ಕುರಿತಾದ ನಮ್ಮ ದಿವ್ಯ ಅಜ್ಞಾನವನ್ನಷ್ಟೇ ಹೇಳಬಲ್ಲದು ಹಾಗೂ ಭಾರತೀಯ ಸಂಸ್ಕೃತಿಯ ವಿಶೇಷತೆಯ ಕುರಿತ ಕುರುಡುತನವನ್ನಷ್ಟೇ ತಿಳಿಸಬಲ್ಲದು. ಪ್ರತಿಯೊಬ್ಬ ಜೀವಿಗೂ ಬದುಕನ್ನು ನಡೆಸಲು ಶಿಕ್ಷಣ ಬೇಕೇ ಬೇಕು. ಅದರಲ್ಲಿ ಔಪಚಾರಿಕ ಶಿಕ್ಷಣದ ಪಾತ್ರವೆಷ್ಟು, ಅನೌಪಚಾರಿಕ ಶಿಕ್ಷಣದ ಪಾತ್ರವೆಷ್ಟು ಎಂಬುದು ಸಂಸ್ಕೃತಿಯಿಂದ ಸಂಸ್ಕೃತಿಗೆ ಬಿನ್ನವಾಗಬಹುದು ಹಾಗೂ ತನ್ನ ಸದಸ್ಯರಿಗೆ ಶಿಕ್ಷಣವನ್ನು ಯಾವ ರೂಪದಲ್ಲಿ ಕೊಡಬೇಕೆಂಬುದನ್ನು ಪ್ರತೀ ಸಂಸ್ಕೃತಿಯೂ ಭಿನ್ನ ರೀತಿಯಲ್ಲಿ ಯೋಜಿಸಿರಬಹುದು. ಶಿಕ್ಷಣವನ್ನು ಕೇವಲ ಶಾಲೆಗೆ ಹೋಗಿಯೇ ಪಡೆಯಬೇಕೆಂಬ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಪಾಶ್ಚತ್ಯರ ಕೊಡುಗೆ. ಅದರ ಹಿಂದೆ ಸೈದ್ಧಾಂತಿಕ ಜ್ಞಾನದ ಕುರಿತ ಅವರ ವಿಶೇಷ ಕಾಳಜಿ ಕೆಲಸಮಾಡಿರುವುದೂ ಸ್ಪಷ್ಟ. ಜೊತೆಗೇ ಜೀವನದಲ್ಲಿ ಏನೇ ವೃತ್ತಿಯನ್ನವಲಂಬಿಸಲಿ, ನಾಗರಿಕ ಎನಿಸಿಕೊಳ್ಳಬೇಕಾದರೆ ಪ್ರಪಂಚದ ಕುರಿತು ಕೆಲವು ಸಾಮಾನ್ಯ ಸೈದ್ಧಾಂತಿಕ ತಿಳುವಳಿಕೆಯನ್ನು ಹೊಂದಲೇಬೇಕು ಎನ್ನುವ ಗ್ರಹಿಕೆಯೂ ಪಾಶ್ಚಾತ್ಯ ಶಿಕ್ಷಣದ ಅಸ್ತಿಭಾರವಾಗಿದೆ. ಹಾಗಾಗಿಯೆ ಇಂದು ಚಿಕ್ಕ ಚಿಕ್ಕ ಮಕ್ಕಳು ಇತಿಹಾಸ, ಭೂಗೋಲ, ವಿಜ್ಞಾನ ಎಂದೆಲ್ಲ ತಮಗಿಂತ ಭಾರದ ಪುಸ್ತಕಗಳ ರಾಶಿಯನ್ನು ಬೆನ್ನಮೇಲೆ ಹೊತ್ತು ಶಾಲೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ವಿಪರ್ಯಾಸವೆಂದರೆ ಇಂಥ ಭಾರವನ್ನು ಹೊತ್ತು ಭಾರತೀಯ ಮಕ್ಕಳು ಮತ್ತಷ್ಟು ಜಾಣರಾಗುವ ಬದಲು ಅವರ ಬುದ್ದಿಗೆ ತುಕ್ಕು ಹಿಡಿಯುತ್ತಿದೆ ಎಂಬುದನ್ನು ನಮ್ಮ ಇಂದಿನ ಸಮೀಕ್ಷೆಗಳು ತಿಳಿಸುತ್ತಿವೆ.
ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಕುಟುಂಬವೂ ಕೂಡ ಒಂದು ಶಿಕ್ಷಣ ಕೇಂದ್ರವೇ ಆಗಿದೆ. ವೃತ್ತಿವಿದ್ಯೆಯನ್ನು ನೀಡಲು ಕುಟುಂಬಗಳೇ ಕೇಂದ್ರಗಳು. ಜೊತೆಗೇ ಲೋಕವ್ಯವಹಾರವನ್ನೂ ಭಾರತೀಯ ಪದ್ಧತಿಯಲ್ಲೇ ಕುಟುಂಬಗಳಲ್ಲಿ ಕಲಿಸಲಾಗಿರುತ್ತದೆ. ಅಪ್ಪ, ಅಮ್ಮ, ಹಿರಿಯರು, ಬಂಧುಗಳು ಕೂಡ ಒಂದು ಮಗುವಿಗೆ ಸಾಂಪ್ರದಾಯಿಕ ಶಿಕ್ಷಣವನ್ನು ನೀಡುವ ಶಿಕ್ಷಕರೇ ಆಗಿದ್ದಾರೆ. ಮಗು ಅವರು ಕಲಿಸಿದ್ದನ್ನು ಸಾಂಪ್ರದಾಯಿಕ ಪದ್ಧತಿಯಲ್ಲೇ ಕಲಿತಿರುತ್ತದೆ. ಅದರ ಲೋಕವ್ಯವಹಾರವೂ ಕೂಡ ಅದೇ ಪದ್ಧತಿಯಲ್ಲೇ ನಡೆಯುತ್ತದೆ. ಅಂಥ ಮಕ್ಕಳಿಗೆ ಪಾಶ್ಚತ್ಯ ಪದ್ದತಿಯ ಶಾಲೆಗಳಲ್ಲಿ ಕಲಿಯುವಾಗ ಈ ಹಿಂದೆ ಉಲ್ಲೇಖಿಸಿದ ಒಂದು ಸಾಂಸ್ಕೃತಿಕ ಕಂದರವನ್ನು ದಾಟುವ ಅಗಾಧ ಸವಾಲು ಉಂಟಾಗುತ್ತದೆ. ಇದು ಗ್ರಹಿಕೆಯ ಸವಾಲು ಹಾಗೂ ಕಲಿಕೆಯ ರೂಢಿಯನ್ನು ಬದಲಿಸಿಕೊಳ್ಳುವ ಸವಾಲು. ಒಂದು ಎಳೆಯ ಮಗುವಿಗೆ ಇದು ಸಣ್ಣ ಸವಾಲೇನಲ್ಲ. ನಿರ್ಣಾಯಕ ಸವಾಲು. ಈ ಸವಾಲನ್ನು ಅದು ಹೇಗೆ ಎದುರಿಸುತ್ತದೆ ಎಂಬುದರ ಮೇಲೆ ಅದರ ಜೀವನದ ಏಳುಬೀಳುಗಳು ನಿರ್ಣಯವಾಗಬಹುದಾದ ಸವಾಲು! ಈ ವಿಷಯವನ್ನು ನಮ್ಮ ಶಿಕ್ಷಣ ತಜ್ಞರು ಇದುವರೆಗೆ ಗಮನಿಸಿಯೇ ಇಲ್ಲ ಎಂಬುದು ದೊಡ್ಡ ದುರಂತ. ಬಹುತೇಕ ಮಕ್ಕಳು ಈ ವ್ಯತ್ಯಾಸವನ್ನು ದಾಟಲು ಸೋಲುತ್ತಾರೆ. ಒಂದೊಮ್ಮೆ ತಮ್ಮ ಅನುಕರಣಾ ಶಕ್ತಿಯಿಂದ ಅದರಲ್ಲಿ ಯಶಸ್ಸು ಪಡೆದರೂ ಸೈದ್ಧಾಂತಿಕ ಕಲಿಕೆ ಅವರಿಗೆ ಒಗ್ಗುವುದಿಲ್ಲ. ಉದಾಹರಣೆಗೆ: ಭಾಷೆಯನ್ನು ಮಾತನಾಡಿ, ಅನುಕರಿಸಿ ಕಲಿಯುವುದು ಮಕ್ಕಳಿಗೆ ಗೊತ್ತು. ಆದರೆ ಸೀಮೆಸುಣ್ಣ, ಹಲಗೆಗಳಲ್ಲಿ ಬರೆದ ವ್ಯಾಕರಣವನ್ನು ಓದಿ ಭಾಷೆಯನ್ನು ಕಲಿಯುವುದು ಅವರ ಸಂಸ್ಕೃತಿಯ ಪರಿಯಲ್ಲ. ಹಾಗಾಗಿಯೇ ಭಾಷಾ ಕಲಿಕೆ ನಮ್ಮ ಆಧುನಿಕ ಶಿಕ್ಷಣ ಪದ್ದತಿಯಲ್ಲಿ ಪಾತಾಳ ಕಂಡಿದೆ. ಹಲವು ಮಕ್ಕಳು ಓದಿ ಉರುಹೊಡೆದು ಪರೀಕ್ಷೆಯಲ್ಲಿ ಬರೆದು ಮಾರ್ಕು ಪಡೆದರೂ ಅವರು ಪಡೆದ ಸೈದ್ಧಾಂತಿಕ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಹಾಗೂ ಅದನ್ನಿಟ್ಟುಕೊಂಡು ಬದುಕಲು ವಿಫಲರಾಗುತ್ತಾರೆ. ಅವರು ಕಲಿತದ್ದಕ್ಕೂ ಅವರ ಬದುಕಿಗೂ ಅರ್ಥಾರ್ಥ ಸಂಬಂಧವೇ ಇರುವುದಿಲ್ಲ ಎಂಬುದನ್ನು ಮನಗಾಣುತ್ತಾರೆ. ಅಂದರೆ ಈ ಕಲಿಕೆಯ ವ್ಯತ್ಯಾಸದಿಂದಾಗಿ ಪಾಶ್ಚಾತ್ಯ ಮಾದರಿಯ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಜ್ಞಾನವನ್ನಾಗಲೀ ಕೌಶಲ್ಯವನ್ನಾಗಲೀ ಕಲಿಸಲು ಸೋಲುತ್ತಿವೆಯಷ್ಟೇ ಅಲ್ಲ, ಅವುಗಳ ಜೀವನದಲ್ಲಿ ಶಿಕ್ಷಣಕ್ಕೊಂದು ಅರ್ಥ ನೀಡಲು ಕೂಡ ವಿಫಲವಾಗುತ್ತಿವೆ.
ಇದರ ಪರಿಣಾಮವಾಗಿ ಈ ಹೊಸ ಶಿಕ್ಷಣ ವ್ಯವಸ್ಥೆಯ ವಿಪರ್ಯಾಸಗಳೂ ನಮ್ಮ ಗಮನಕ್ಕೆ ಬಂದಿವೆ. ಶಿಕ್ಷಿತರ ಸಂಖ್ಯೆ ದಿನದಿಂದ ದಿನಕ್ಕೆ ತ್ವರಿತಗತಿಯಲ್ಲಿ ಏರುತ್ತಿದೆ. ಆದರೆ ಈ ಶಿಕ್ಷಣದ ವೈಫಲ್ಯತೆ ಕೂಡ ಢಾಳಾಗಿಯೇ ಕಣ್ಣಿಗೆ ರಾಚುತ್ತಿದೆ. ಇಂದು ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಎಂಬುದು ಅರ್ಥ ಕಳೆದುಕೊಂಡಿದೆ. ಜ್ಞಾನ ಎಂಬುದು ಬೆಲೆ ಕಳೆದುಕೊಂಡಿದೆ. ಈ ಆಧುನಿಕ ಶಿಕ್ಷಣದಿಂದ ಹೆಚ್ಚು ಹೆಚ್ಚು ಭಾರತೀಯ ಮಕ್ಕಳು ತಮ್ಮ ಜೀವನ ಕೌಶಲ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅಕ್ಷರಸ್ಥೆಯು ಸಾರ್ವತ್ರಿಕವಾದಂತೆಲ್ಲ ಅಕ್ಷರ ಜ್ಞಾನ ಹಾಗೂ ಭಾಷೆಗಳ ಕೌಶಲ್ಯವು ಕೂಡ ಅಧೋಗತಿಗೆ ಇಳಿಯುತ್ತಿದೆ. ಉದಾಹರಣೆಗೆ, ಸಂಸ್ಕೃತ, ಇಂಗ್ಲೀಷು, ಕನ್ನಡ ಅಥವಾ ಇತರ ದೇಶೀ ಭಾಷೆಗಳಲ್ಲಿ ಉನ್ನತ ಪದವಿಗಳನ್ನು ಪಡೆದರೂ ಆಯಾ ಭಾಷೆಗಳಲ್ಲಿ ಸರಿಯಾಗಿ ಮಾತನಾಡುವ, ಬರೆಯುವ ಪ್ರಾಯೋಗಿಕ ಕೌಶಲ್ಯ ಪದವೀಧರರಿಗೆ ಕಡ್ಡಾಯವಲ್ಲ. ಇದರಿಂದಾಗಿ ದಿನದಿಂದ ದಿನಕ್ಕೆ ಭಾರತೀಯ ಸುಶಿಕ್ಷಿತರಲ್ಲಿ ಭಾಷಾ ದಾರಿದ್ರ್ಯವು ಅಧಿಕವಾಗುತ್ತಿದೆ. ಇದೇ ರೀತಿಯಲ್ಲಿ ವೃತ್ತಿ ಸಂಬಂಧಿತ ಪದವೀಧರರಲ್ಲೂ ವೃತ್ತಿ ಕೌಶಲ್ಯ ದಿನದಿಂದ ದಿನಕ್ಕೆ ಅಧೋಗತಿಗಿಳಿಯುತ್ತಿದೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ನೀಡುವ ಸಂಗೀತ, ನೃತ್ಯ ಇತ್ಯಾದಿ ಪದವಿಗಳಂತೂ ಅಂಥದ್ದೇ ಕಾಲೇಜು, ವಿಶ್ವವಿದ್ಯಾಲಗಳಿಗೆ ಮೇಷ್ಟ್ರುಗಳನ್ನು ತಯಾರುಮಾಡುಬಲ್ಲವೇ ವಿನಃ ಸಂಗೀತ ನೃತ್ಯಗಾರರನ್ನಲ್ಲ. ಇಂಥ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ವಿದ್ಯಾಭ್ಯಾಸ ಮಾಡಿದವನಿಗೆ ಅಂಥವೇ ಸಂಸ್ಥೆಗಳಲ್ಲಿ ನೌಕರಿ ಹಿಡಿಯುವುದನ್ನು ಬಿಟ್ಟರೆ ಬೇರೆ ಯಾವುದೇ ಜೀವನ ಕೌಶಲ್ಯವೂ ಈ ಶಿಕ್ಷಣದಿಂದ ದೊರೆಯುತ್ತಿಲ್ಲ. ನೌಕರಿಯನ್ನು ಮಾಡಲು ಕೂಡ ಈ ಶಿಕ್ಷಣವು ಎಷ್ಟರ ಮಟ್ಟಿಗೆ ಅರ್ಹತೆಯನ್ನು ನೀಡುತ್ತದೆ ಎಂಬುದು ಪ್ರಶ್ನಾರ್ಹವಾಗಿದೆ. ವಿದ್ಯಾ ಸಂಸ್ಥೆಗಳನ್ನು ನಡೆಸುವುದು ಇಂದು ಅತ್ಯಂತ ಲಾಭದಾಯಕ ಉದ್ಯಮವಾಗಿ ಮಾರ್ಪಟ್ಟಿರುವುದರಿಂದ ಮಾರ್ಕುಗಳು, ಫಲಿತಾಂಶಗಳು ವರ್ಷದಿಂದ ವರ್ಷಕ್ಕೆ ಏರುತ್ತಿವೆಯೇ ಹೊರತೂ ಅರ್ಹತೆ ಅಧೋಗತಿಯತ್ತಲೇ ಸಾಗಿದೆ. ಯಾವುದೇ ವಿಜ್ಞಾನವಿರಬಹುದು, ತಾಂತ್ರಿಕ ಕೌಶಲ್ಯವಿರಬಹುದು, ವಿದ್ಯೆಯಿರಬಹುದು, ಅವುಗಳನ್ನೇ ವಿಶೇಷವಾಗಿ ಓದಿ ಡಿಗ್ರಿ ಮುಗಿಸಿದ ಶೇಕಡಾ 75% ವಿದ್ಯಾರ್ಥಿಗಳು ಆಯಾ ಕ್ಷೇತ್ರದಲ್ಲಿ ನೌಕರಿಗೇ ಲಾಯಕ್ಕಿಲ್ಲ ಎಂಬುದಾಗಿ ಸಮೀಕ್ಷೆಗಳು ತಿಳಿಸುತ್ತಿವೆ. ಇಂಥ ಶಿಕ್ಷಣ ಸಾರ್ವತ್ರಿಕವಾಗುವುದು ಶುಭ ಸೂಚನೆಯೋ ಅಶುಭ ಸೂಚನೆಯೋ ಎಂಬ ಮೂಲಭೂತ ಪ್ರಶ್ನೆ ಏಳತೊಡಗಿದೆ. ಒಟ್ಟಿನಲ್ಲಿ ಆಧುನಿಕ ಶಿಕ್ಷಣ ಪದ್ದತಿಯು ದಿನದಿಂದ ದಿನಕ್ಕೆ ವಿದ್ಯಾವಂತರನ್ನು ನಿರುಪಯುಕ್ತರನ್ನಾಗಿ ಮಾಡುತ್ತಿರುವುದಂತೂ ಸ್ಪಷ್ಟ.
ಭಾರತದಲ್ಲಿ ಆಧುನಿಕ ಶಿಕ್ಷಣದ ಕಥೆಯೆಂದರೆ ಸೈದ್ಧಾಂತಿಕ ಜ್ಞಾನಕ್ಕೆ ಒತ್ತು ನೀಡಿದ ಒಂದು ಆಧುನಿಕ ಶಿಕ್ಷಣ ವ್ಯವಸ್ಥೆಯು ಕ್ರಿಯಾ ಜ್ಞಾನಕ್ಕೆ ಒತ್ತು ನೀಡಿದ ಪಾರಂಪರಿಕ ವ್ಯವಸ್ಥೆಯೊಂದನ್ನು ನಕಾರಾತ್ಮಕವಾಗಿ ಬಿಂಬಿಸಿದ ಕಥೆಯೇ ಆಗಿದೆ. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಇದರ ಹಾನಿ ನಗಣ್ಯವಾಗಿತ್ತು. ಏಕೆಂದರೆ ಪಾರಂಪರಿಕ ಶಿಕ್ಷಣವನ್ನು ಮೂಲೆಗೊತ್ತಲು ಈ ಆಧುನಿಕ ಶಿಕ್ಷಣಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ “ಗತಾನುಗತಿಕೋಲೋಕಃ” ಎಂಬಂತೆ ನಮ್ಮ ಪ್ರಭುತ್ವವು ಕಣ್ಣು ಮುಚ್ಚಿ ಈ ಹಾದಿಯಲ್ಲೇ ಮುಂದುವರಿಯಿತು. ಸಂಪೂರ್ಣ ಸಾಕ್ಷರತೆ, ಸರ್ವ ಶಿಕ್ಷಣ, ಇತ್ಯಾದಿಯಾಗಿ ಹುಟ್ಟಿದ ಮಕ್ಕಳೆಲ್ಲರೂ ಶಾಲೆಗೆ ಹೋಗಬೇಕೆಂಬುದು, ಅಕ್ಷರವನ್ನು ಕಲಿಯಬೇಕೆಂಬುದು ಪ್ರಗತಿಯ ಮಾನದಂಡವಾಯಿತು. ವಿದ್ಯೆಯೆಂದರೇ ಅಕ್ಷರ ಜ್ಞಾನ ಎಂಬ ತಪ್ಪು ಸಮೀಕರಣದಿಂದಾಗಿ ಅನಕ್ಷರಸ್ಥರೆಂದರೆ ಅಜ್ಞಾನಿ ಎಂಬ ತಪ್ಪು ನಿರ್ಣಯಗಳು ಸ್ಥಾಪಿತವಾದವು. ಇಂದು ಇದೆಲ್ಲದರ ಪರಿಣಾಮವಾಗಿ ಅಕ್ಷರ ಜ್ಞಾನವಿಲ್ಲದವನು ಪಶುವಿನಂತೆ ಚಿತ್ರಿತನಾಗಿದ್ದಾನೆ. ಪಾಶ್ಚತ್ಯ ಶಿಕ್ಷಣದ ಇಂಥ ಪ್ರತಿಪಾದನೆಗಳು ಎಷ್ಟು ಅವಾಸ್ತವಿಕ ಹಾಗೂ ಅಪ್ರಾಯೋಗಿಕ ಎಂಬುದಕ್ಕೆ ಈ ಶಿಕ್ಷಣದ ವಿಫಲತೆಗಳೇ ಸಾಕ್ಷಿ.