ಆಧ್ಯಾತ್ಮಸಾಧನೆಯಲ್ಲಿ ಇರಬೇಕಾದ 26 ಗುಣಗಳು

ಆಧ್ಯಾತ್ಮಸಾಧನೆಯಲ್ಲಿ ಇರಬೇಕಾದ 26 ಗುಣಗಳು

ಆಧ್ಯಾತ್ಮಸಾಧನೆಯಲ್ಲಿ ಇರಬೇಕಾದ 26 ಗುಣಗಳು
ಅಧ್ಯಾತ್ಮದ ಸಾಧನೆಯಲ್ಲಿರಬೇಕಾದ ಇಪ್ಪತ್ತಾರು ಸದ್ಗುಣಗಳನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಈ ಇಪ್ಪತ್ತಾರು ಗುಣಗಳ ಬೆನ್ನುಹತ್ತಿ ಅದರಲ್ಲಿ ನಮ್ಮಲ್ಲಿರುವ ಗುಣವನ್ನು ನಾವು ಗುರುತಿಸಿಕೊಂಡು, ಅದನ್ನು ನಾವು ವೃದ್ಧಿಪಡಿಸಿಕೊಳ್ಳಬೇಕು ಮತ್ತು ಇಲ್ಲದ ಗುಣವನ್ನು ಬೆಳಸಿಕೊಳ್ಳಬೇಕು .


(೧) ಅಭಯಂ (ನಿರ್ಭಯತ್ವ/ Fearlessness):

ಇದು ಅಧ್ಯಾತ್ಮದ ದಾರಿಯಲ್ಲಿ ಸಾಗುವವರಿಗಿರಬೇಕಾದ ಮೊತ್ತ ಮೊದಲ ಗುಣ. ಅಧ್ಯಾತ್ಮ ಹೇಡಿಗಳಿಗೆ ಹೇಳಿಸಿದ್ದಲ್ಲ. ಹನುಮಂತನ ಕುರಿತಾದ ಈ ಕೆಳಗಿನ ಶ್ಲೋಕ ಹೇಳುವಂತೆ:
ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ ಪಟುತ್ವಂ ಚ ಹನುಮತ್ ಸ್ಮರಣಾತ್ ಭವೇತ್ ||
ನಮ್ಮಲ್ಲಿ ನಿರ್ಭಯತ್ವ ಬರಬೇಕಾದರೆ ನಾವು ಪ್ರಾಣದೇವರ ಉಪಾಸನೆ ಮಾಡಬೇಕು. ಧೈರ್ಯವಿಲ್ಲದೆ ವೇದಾಂತ ಓದಿದರೆ ದೃಢನಂಬಿಕೆ(Conviction)ಬರುವುದಿಲ್ಲ. . ಯಾರು ಏನೇ ಹೇಳಲಿ, ‘ನಾನು ಹಿಡಿದ ದಾರಿಯನ್ನು ಬಿಡುವುದಿಲ್ಲ, ದೇವರು ನನ್ನನ್ನು ರಕ್ಷಿಸುತ್ತಾನೆ’ ಎನ್ನುವ ದೃಢ ನಂಬಿಕೆ ಇದ್ದಾಗ ಮಾತ್ರ ನಾವು ಯಶಸ್ಸನ್ನು ಕಾಣಲು ಸಾಧ್ಯ.


(೨) ಸತ್ತ್ವಸಂಶುದ್ಧಿ(ಶುದ್ಧವಾದ ಮನಸ್ಸು/Pure Mind) :

ನಮ್ಮ ಮನಃಶುದ್ಧಿ ಅಧ್ಯಾತ್ಮ ಸಾಧನೆಯಲ್ಲಿ ಬಹಳ ಮುಖ್ಯ. ಸಾಮಾನ್ಯವಾಗಿ ನಮ್ಮ ಮನಸ್ಸು ಅನುವಂಶೀಯ ಕಾರಣದಿಂದ, ಅಥವಾ ಪರಿಸರದ ಪ್ರಭಾವದಿಂದ ಶುದ್ಧವಾಗಿರುವುದಿಲ್ಲ. ಅಧ್ಯಾತ್ಮ ಸಾಧನೆಗೆ ಯಾವುದೇ ಕೊಳೆ ಇಲ್ಲದ, ಯಾವುದೇ ಪೂರ್ವಾಗ್ರಹ ಇಲ್ಲದ ಮನಸ್ಸು ಬಹಳ ಮುಖ್ಯ.


(೩) ಜ್ಞಾನಯೋಗ ವ್ಯವಸ್ಥಿತಿಃ (ನಿರಂತರ ಜ್ಞಾನಯೋಗದಲ್ಲಿ ಮನಸ್ಸನ್ನು ನೆಲೆಗೊಳಿಸುವುದು):

ಉಪಾಸನಯೋಗ ಬಹಳ ಪ್ರಮುಖವಾದ ಯೋಗ. ಭಕ್ತಿ, ಜ್ಞಾನ ಮತ್ತು ಕರ್ಮಯೋಗ ಇದರ ಮೂರು ಮುಖಗಳು. ಇವು ಒಂದನ್ನೊಂದು ಬಿಟ್ಟು ಇರಲಾರವು. ಜ್ಞಾನಯೋಗ ಅಂದರೆ ಭಗವಂತನ ಹಿರಿಮೆಯನ್ನು ತಿಳಿದು, ಅವನ ಪೂಜಾರೂಪವಾಗಿ ಕರ್ಮವನ್ನು ಮಾಡಿ, ಅವನಲ್ಲಿ ಭಕ್ತಿ ಮಾಡುವುದು.
‘ವ್ಯವಸ್ಥಿತಿಃ’ ಅಂದರೆ ಅಚಲವಾದ ಸ್ಥಿತಿ. ಭಗವಂತನ ವಿಷಯವಾಗಿ ಅಚಲವಾದ ಮನಸ್ಸನ್ನಿಟ್ಟು, ನಿರಂತರ ಭಗವಂತನ ಚಿಂತನೆಯಲ್ಲಿ ಮನಸ್ಸನ್ನು ನೆಲೆಗೊಳಿಸುವುದು. ಇದರಿಂದ ಮನಸ್ಸು ಸ್ವಚ್ಛವಾಗುತ್ತದೆ.


(೪) ದಾನಂ(ನಮ್ಮಲ್ಲಿರುವುದನ್ನು ಇನ್ನೊಬ್ಬರಿಗೆ ಕೊಡುವುದು):

ನಮ್ಮಲ್ಲಿ ಇರುವ ವಸ್ತು ಇನ್ನೊಬ್ಬರಲ್ಲಿ ಇಲ್ಲದೇ ಇದ್ದಾಗ, ಅವರಿಗೆ ಅದು ಬಹಳ ಅಗತ್ಯವಿದ್ದಾಗ, ಆ ವಸ್ತು ನಮಗೆ ಮುಂದೆ ಅಗತ್ಯಬೀಳಬಹುದಾದರೂ ಕೂಡ, ಅದರ ಬಗ್ಗೆ ಯೋಚಿಸದೆ, ಅರ್ಪಣಾ ಭಾವದಿಂದ ಕೊಡುವುದು ದಾನ. ಇದನ್ನು ಬಿಟ್ಟು ಮನೆಯಲ್ಲಿ ಅಗತ್ಯವಿಲ್ಲದ ವಸ್ತುವನ್ನು ಸಾಗಹಾಕುವುದಕ್ಕೋಸ್ಕರ ಕೊಡುವುದು, ಉತ್ತಮ ದರ್ಜೆಯನ್ನು ಒಳಗಿಟ್ಟು, ಕೀಳು ದರ್ಜೆಯನ್ನು ಕೊಡುವುದು-ದಾನವಲ್ಲ. ಕೊಡುವಾಗ ಮನಸ್ಸಿನಲ್ಲಿ ನಮಗೆ ಕೊಡುವ ವಸ್ತುವಿನ ಮೇಲೆ ಯಾವ ಮಮಕಾರವೂ ಇರಕೂಡದು; ‘ಕೊಡುತ್ತಿದ್ದೇನೆ’, ಕೊಟ್ಟೆ’ ಎನ್ನುವ ಅಹಂಕಾರ ಇರಕೂಡದು. ಪೂರ್ಣ ಅರ್ಪಣಾಭಾವದಿಂದ ಕೊಡಬೇಕು. ಕೊಡುವ ವಸ್ತು ಜ್ಞಾನವಾಗಿರಬಹುದು, ಧಾನ್ಯವಾಗಿರಬಹುದು, ಅಭಯವಾಗಿರಬಹುದು (ಇನ್ನೊಬ್ಬರಿಗೆ ಧೈರ್ಯ ಕೊಡುವುದು), ಹೀಗೆ ಯಾವುದೇ ಕಾರ್ಯವಿರಬಹುದು. ಅಲ್ಲಿ ಕಾರ್ಯಕ್ಕಿಂತ ಮುಖ್ಯವಾದುದು ಆ ಕಾರ್ಯದ ಹಿಂದಿನ ನಮ್ಮ ಭಾವನೆ. (

(೫) ದಮ (೬) ಯಜ್ಞ :

‘ದಮ’ ಅಂದರೆ ಕೆಟ್ಟದ್ದನ್ನು ಮಾಡುವುದನ್ನು ಬಿಡುವುದು; ನಮ್ಮ ಇಂದ್ರಿಯಗಳು ಕೆಟ್ಟದ್ದನ್ನು ಮಾಡದಂತೆ ನಿಯಂತ್ರಿಸುವುದು.

ಯಜ್ಞ ಅಂದರೆ ಮಾಡುವ ಎಲ್ಲ ಕೆಲಸವನ್ನು ಭಗವದರ್ಪಣೆಯಾಗಿ ಮಾಡುವುದು.
ನಾವು ಈ ಎರಡು ನಡತೆಯನ್ನು ನಿರಂತರ ನಮ್ಮ ಜೀವನದಲ್ಲಿ ಪಾಲಿಸಬೇಕು. ಈ ಎರಡು ನಡತೆ ಇಲ್ಲದೆ, ಇತರ ನಡತೆಯನ್ನು ಸಾಧಿಸಲು ಸಾಧ್ಯವಿಲ್ಲ.


(೭) ಸ್ವಾಧ್ಯಾಯಃ

ಮೂರು ತರದಲ್ಲಿ ಸ್ವಾಧ್ಯಾಯವಿದೆ. ಸ್ವತಂತ್ರನಾದ ಭಗವಂತನ ಬಗೆಗೆ ಇರತಕ್ಕಂತಹ ಸಮಗ್ರ ವೇದಗಳ ಅಧ್ಯಯನ-ಸ್ವಾಧ್ಯಾಯ; ಇದು ಸಾಧ್ಯವಾಗದೇ ಇದ್ದರೆ ಅವರವರ ಶಾಖೆಯ(ಸ್ವಂ) ವೇದಾಧ್ಯಯನ. ಇದನ್ನು ಕೂಡ ಸ್ವಾಧ್ಯಾಯ ಎನ್ನುತ್ತಾರೆ. ಇನ್ನು ಮೂರನೆಯದು ನಾವು ಗುರುಗಳಿಂದ ಕೇಳಿದ ಅಧ್ಯಾತ್ಮ ವಿಚಾರವನ್ನು ಮನನ ಮಾಡಿ, ಸ್ವಪ್ರವಚನ ಮಾಡಿಕೊಂಡು, ನಮ್ಮ ಆತ್ಮಕ್ಕೆ ಆ ವಿಚಾರ ತಿಳಿದ ಮೇಲೆ ಇನ್ನೊಬ್ಬರಿಗೆ ಹೇಳುವುದು. ಆದರೆ ಇಂದು ಈ ಸ್ವಾಧ್ಯಾಯ ಕಣ್ಮರೆಯಾಗುತ್ತಿದೆ.


(೮) ತಪಃ :

ನಮ್ಮ ಮನಸ್ಸು ದಾರಿ ತಪ್ಪಿ ಹೋಗದಂತೆ ನಿಯಂತ್ರಣ ಮಾಡುವುದು ‘ದಮ’; ಅದರಿಂದ ಶಾಸ್ತ್ರದ ನಿರಂತರ ಅಧ್ಯಾಯನ ‘ಸ್ವಾಧ್ಯಾಯ’. ಇವೆರಡರಲ್ಲಿ ನಮಗೆ ತೊಂದರೆ ಕೊಡುವ ಎರಡು ಅಂಶಗಳಿವೆ. ಅವುಗಳೆಂದರೆ ನಾಲಿಗೆ ಚಪಲ ಮತ್ತು ಲೈಂಗಿಕ ಆಸಕ್ತಿ. ಇವು ಅಧ್ಯಯನದ ಮೂಲ ಶತ್ರುಗಳು. ಇದನ್ನು ನಿಯಂತ್ರಿಸುವುದು ತಪಃ.


(೯) ಆರ್ಜವಮ್: (ಪ್ರಾಮಾಣಿಕತೆ/Straightforwardness): ನೇರ ನಡೆ ನುಡಿ. ಮಾತನಾಡುವುದೊಂದು- ಮಾಡುವುದು ಇನ್ನೊಂದು ಮಾಡದೆ, ಪ್ರಾಮಾಣಿಕತೆಯಿಂದಿರುವುದು.


(೧೦) ಅಹಿಂಸಾ :

ದ್ವೇಷ, ಅಸಹನೆ, ಅಸೂಯೆ, ಸ್ವಾರ್ಥವಿಲ್ಲದೆ ನಡೆಯುವ ಅನಿವಾರ್ಯವಾದ ಹಿಂಸೆ-ಅಹಿಂಸೆ ಎನಿಸುತ್ತದೆ.
ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಅಹಿಂಸೆ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಉದಾಹರಣೆಗೆ: ಒಬ್ಬರನ್ನು ಚುಚ್ಚು ಮಾತಿನಿಂದ ಹಂಗಿಸುವುದು, ಮಾನಸಿಕವಾಗಿ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಶಾಪ ಹಾಕುವುದು. ನಾವು ನಮ್ಮ ಮಾತಿನಿಂದ, ಕೃತಿಯಿಂದ ಮತ್ತು ಮನಸ್ಸಿನಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ನಡೆದುಕೊಳ್ಳಬೇಕು.


(೧೧) ಸತ್ಯಮ್:

ಇದು ಪ್ರಾಮಾಣಿಕತೆಯ ಇನ್ನೊಂದು ಮುಖ. ಇಲ್ಲಿ ಸತ್ಯ ಅಂದರೆ ಇದ್ದದ್ದನ್ನು ಇದ್ದಂತೆ ಹೇಳುವುದಲ್ಲ. ಸಮಾಜಲ್ಲಿ ಸಾದು ಸಜ್ಜನರಿಗೆ ಹಿತವಾಗುವಂತಹ ಮಾತು ಸತ್ಯ. ಕೆಲವೊಮ್ಮೆ ಲೋಕ ಹಿತಕ್ಕೋಸ್ಕರ ನಾವು ಹೇಳುವ ಸುಳ್ಳೂ ಕೂಡ ಸತ್ಯವಾಗುತ್ತದೆ; ಲೋಕಕ್ಕೆ ಅನ್ಯಾಯವಾಗುವಂತಹ ಸತ್ಯವೂ ಸುಳ್ಳಾಗುತ್ತದೆ.
ಒಬ್ಬರ ಮದುವೆಯನ್ನು ಹೊಟ್ಟೆಕಿಚ್ಚಿನಿಂದ ಸುಳ್ಳು ಹೇಳಿ ತಪ್ಪಿಸುವುದು, ನಿಶ್ಚಿತಾರ್ಥವಾಗಿರುವ ಮದುವೆಯನ್ನು ತಪ್ಪಿಸುವುದು, ಇತ್ಯಾದಿಯನ್ನು ಶಾಸ್ತ್ರ ಖಂಡಿಸುತ್ತದೆ. ಪ್ರಾಣಾಪಾಯದ ಕಾಲದಲ್ಲಿ ಜೀವ ರಕ್ಷಣೆಗಾಗಿ ಹೇಳುವ ಸುಳ್ಳು ಸುಳ್ಳಲ್ಲ.


(೧೨) ಅಕ್ರೋಧಃ

ಯಾವ ಕಾಲಕ್ಕೂ ಇನ್ನೊಬ್ಬರ ಮೇಲೆ ಕೋಪಿಸಿಕೊಳ್ಳದೆ ಇರುವುದು. ಅಪ್ರೀಯ ಘಟನೆ ನಡೆದಾಗ ಕೋಪ ಬರಬಹುದು. ಆದರೆ ನಿಮ್ಮನ್ನು ಕೋಪದ ಕೈಗೆ ಎಂದೂ ಕೊಡಬೇಡಿ. ಕೋಪಬಂದಾಗ-ಕೋಪ ಇಳಿಯುವ ತನಕ ಮೌನವನ್ನಾಚರಿಸಿದರೆ ಅದರಿಂದಾಗುವ ಅನಾಹುತ ತಪ್ಪುತ್ತದೆ.
.
(೧೩) ತ್ಯಾಗಃ:

ಮೇಲ್ನೋಟಕ್ಕೆ ದಾನ ಮತ್ತು ತ್ಯಾಗ ಒಂದೇ ಎನ್ನುವಂತೆ ಕಾಣಿಸುತ್ತದೆ. ಆದರೆ ತ್ಯಾಗ ಎಂದರೆ ನಮ್ಮಲ್ಲಿರುವ ವಸ್ತುವೂ ಕೂಡ ನನ್ನದಲ್ಲ-ಭಗವಂತನದು ಎನ್ನುವ ಭಾವನೆಯಿಂದ ಬದುಕುವುದು. ತ್ಯಾಗದಲ್ಲಿ ಅನೇಕ ವಿಧ. ಅಭಿಮಾನ ತ್ಯಾಗ, ಫಲ ತ್ಯಾಗ, ಅಹಂಕಾರ-ಮಮಕಾರ ತ್ಯಾಗ ಇತ್ಯಾದಿ. ಪ್ರೀತಿ ಇರಲಿ, ಆದರೆ ‘ನನ್ನದು’ ಎನ್ನುವ ಭಾವನೆಯಿಂದ ದೂರ ನಿಲ್ಲು. ಬಂದಾಗ ಸಂತೋಷದಿಂದ ಸ್ವೀಕರಿಸು, ಹೋದಾಗ ನಿರ್ಲಿಪ್ತನಾಗಿ ಇದ್ದು ಬಿಡು. ಈ ಜೀವನ ಪಯಣದಲ್ಲಿ ಯಾವುದೂ ಶಾಶ್ವತವಲ್ಲ. ಭಗವಂತನೊಬ್ಬನೆ ನಿತ್ಯ ಎಂದು ತಿಳಿದು ಆತನನ್ನು ಗುರಿಯಿಟ್ಟು ಪಯಣಿಸು.


(೧೪) ಶಾಂತಿಃ :

ತ್ಯಾಗದಿಂದ ಮೊತ್ತ ಮೊದಲು ಸಿಗುವುದು ನೆಮ್ಮದಿ. ಸ್ವಲ್ಪವೂ ಉದ್ವೇಗಕ್ಕೆ ಒಳಗಾಗದೆ, ಪ್ರತಿಯೊಂದನ್ನೂ ಸ್ವೀಕರಿಸಿದಾಗ ಎಲ್ಲವೂ ಶಾಂತ. ಭಗವಂತನಲ್ಲಿ ನೆಲೆಗೊಳಿಸಿದಾಗ ಮಾತ್ರ ಅಂತಹ ಶಾಂತಿ ಬರಲು ಸಾಧ್ಯ. ಕ್ಷುದ್ರವಾದ ಲೌಕಿಕ ವಿಚಾರದಲ್ಲಿ ತಲೆ ಹಾಕಿಕೊಂಡು- ಪೈಪೋಟಿ, ಸ್ಪರ್ಧೆ, ಜಗಳ, ವಿರಸದಿಂದ ಜೀವನ ಸಾಗಿಸುವುದಕ್ಕಿಂತ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಿ ಶಾಂತಿಯನ್ನು ಸಾಧಿಸು.


(೧೫) ಅಪೈಶುನಮ್:

‘ಪೈಶುನಮ್’ ಅಂದರೆ ಚಾಡಿ ಹೇಳಿ ವಿರಸ ಹುಟ್ಟಿಸುವುದು. ಇದು ಅತ್ಯಂತ ನಿಕೃಷ್ಟ ಗುಣ. ನಮ್ಮ ಸ್ವಾರ್ಥಕ್ಕಾಗಿ ದೊಡ್ದವರಲ್ಲಿ ಚಾಡಿಹೇಳಿ, ಸಮಾಜ ಸ್ವಾಸ್ಥ್ಯವನ್ನು ಕೆಡಿಸುವುದು ಮಹಾ ಪಾಪ. ಆದ್ದರಿಂದ ನೀನು ಅಪೈಶುನನಾಗು ಎನ್ನುತ್ತಾನೆ ಕೃಷ್ಣ. ಚಾಡಿ ಹೇಳಬೇಡ ಮತ್ತು ಚಾಡಿಗೆ ಕಿವಿಗೊಡಬೇಡ.


(೧೬) ದಯಾ ಭೂತೇಷು:

ಚೈತನ್ಯವಿರುವ ಪ್ರತಿಯೊಂದು ಜೀವಿಗಳ ಮೇಲೆ ಅನುಕಂಪವಿರಲಿ. ಅದು ವನಸ್ಪತಿ ಇರಲಿ, ಪ್ರಾಣಿ ಇರಲಿ, ಪಕ್ಷಿ ಇರಲಿ, ಮಾನುಷ್ಯನಿರಲಿ. ಎಲ್ಲರ ಮೇಲೂ ದಯೆ ಇರಲಿ.


(೧೭) ಅಲೋಲುತ್ವಂ/ ಅಲೋಲತ್ವಂ:

ಒಂದನ್ನು ಅತಿಯಾಗಿ ಹಚ್ಚಿಕೊಳ್ಳುವುದು ಲೋಲುತ್ವ. ಯಾವುದರ ಮೇಲೂ ಅತಿಯಾದ ಮೋಹ ಬೇಡ. ಅಂಟಿಸಿಕೊಳ್ಳುವುದು ದುಃಖಕ್ಕೆ ಕಾರಣ.


(೧೮) ಮಾರ್ದವಂ(Softness):

ಸೌಜನ್ಯ, ಮೃದು ಸ್ವಭಾವವನ್ನು ಇಲ್ಲಿ ಮಾರ್ದವಂ ಎಂದಿದ್ದಾರೆ. ನಮ್ಮಲ್ಲಿ ಕೆಲವರು ತಮ್ಮ ಕೆಲಸದವರನ್ನು, ಅಥವಾ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಗಳನ್ನು ಗೌರವವಿಲ್ಲದೆ ಮಾತನಾಡಿಸುತ್ತಾರೆ. ಅವರು ‘ನನ್ನ ಸೇವಕರು’ ಎಂದು ಅಹಂಕಾರದಿಂದ ಅವರೊಂದಿಗೆ ವ್ಯವಹರಿಸುತ್ತಾರೆ. ಇದು ಅತ್ಯಂತ ನೀಚ ಗುಣ. ಇದರಿಂದಾಗಿ ನಾವು ಆ ವ್ಯಕ್ತಿಯ ಮನ ನೋಯಿಸುವುದಷ್ಟೇ ಅಲ್ಲ, ಆತನ ಒಳಗಿರುವ ಭಗವಂತನನ್ನು ಧಿಕ್ಕರಿಸಿದಂತೆ. ಇದು ಅಹಂಕಾರದ ಇನ್ನೊಂದು ಮುಖ. ಅದಕ್ಕಾಗಿ ಕೃಷ್ಣ ಹೇಳಿದ: “ನಿಮ್ಮ ನಡತೆಯಲ್ಲಿ ನಯ ವಿನಯವಿರಲಿ, ಸೌಜನ್ಯವಿರಲಿ” ಎಂದು.


(೧೯) ಹ್ರೀಃ (ನಾಚಿಕೊಳ್ಳುವುದು):

ತಪ್ಪು ಮಾಡಿದಾಗ ನಾಚಿಕೊಳ್ಳುವುದು. ಇದು ಬಹಳ ದೊಡ್ಡ ಗುಣ. ತೈತ್ತಿರೇಯ ಉಪನಿಷತ್ತಿನಲ್ಲಿ ಹೇಳುವಂತೆ : | ಶ್ರೀಯಾ ದೇಯಂ | ಹ್ರೀಯಾ ದೇಯಂ | ಭಿಯಾ ದೇಯಂ | ಸಂವಿದಾ ದೇಯಂ ||೧೧-೦೩|| ಇನ್ನೊಬ್ಬರು ಟೀಕೆ ಮಾಡಬಹುದು ಎನ್ನುವ ನಾಚಿಕೆಯಿಂದಾದರೂ ದಾನ ಮಾಡು ಎನ್ನುತ್ತದೆ ಶಾಸ್ತ್ರ.


(೨೦) ಅಚಾಪಲಮ್ :

ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ಥೈರ್ಯ. ವಿಷಯ ವಿಶ್ಲೇಷಣೆ ಮಾಡಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದು, ಯಾವುದು ನನ್ನ ದಾರಿ ಎಂದು ಗಟ್ಟಿಯಾಗಿ ನಿಲ್ಲುವುದು ಅಚಾಪಲಮ್.


(೨೧) ತೇಜಃ (ತೇಜಸ್ಸು):

ಇದನ್ನು ಶಾಸ್ತ್ರಕಾರರು ಬ್ರಹ್ಮವರ್ಚಸ್ಸು ಎನ್ನುತ್ತಾರೆ. ಮುಖದಲ್ಲಿ ಕಳೆ ತುಂಬಿಕೊಂಡಿರುವುದು. ಕಣ್ಣಿನಲ್ಲಿ ತೇಜಸ್ಸು. ಮನಸ್ಸು ಸ್ವಚ್ಛವಿರುವ ಸಾಧನೆಯ ಮಾರ್ಗದಲ್ಲಿ ಸಾಗುವ ಜ್ಞಾನಿಗಳಲ್ಲಿ ಮಾತ್ರ ಈ ಗುಣವಿರುತ್ತದೆ.


(೨೨) ಕ್ಷಮಾ(forgiveness):

ತಪ್ಪು ಮಾಡಿದವರ ಮೇಲೆ ಕೂಡ ಪ್ರತೀಕಾರ ಭಾವನೆ ಬೆಳೆಸಿಕೊಳ್ಳದೆ ಇರುವುದು. ನಮ್ಮ ಮನಸ್ಸಿನಲ್ಲಿ ಎಂದೂ ಪ್ರತೀಕಾರ ಭಾವನೆ ಹುಟ್ಟಲೇಬಾರದು. ಶಾಸ್ತ್ರದಲ್ಲಿ ಹೇಳುವಂತೆ: “ಇನ್ನೊಬ್ಬರು ಅಪಕಾರ ಮಾಡಿದರೂ ಕೂಡ ಅವರನ್ನು ಕ್ಷಮಿಸು” ಎಂದು. “ದೇವರೆ, ಅವರಿಗೆ ಒಳ್ಳೆ ಬುದ್ಧಿ ಕೊಡು” ಎಂದು ಪ್ರಾರ್ಥಿಸು-ಆದರೆ ಪ್ರತೀಕಾರದ ಭಾವನೆ ಬೇಡ. ನಮ್ಮಲ್ಲಿ “ಎಲ್ಲರೂ ನನ್ನನ್ನು ಮೆಚ್ಚಿಕೊಳ್ಳಬೇಕು” ಎನ್ನುವ ಅಹಂಕಾರ(Ego) ಇಲ್ಲದೆ ಇದ್ದರೆ ಮಾತ್ರ ಕ್ಷಮಾ ಸಾಧ್ಯ.


(೨೩) ಧೃತಿಃ (ಏನೇ ಆದರೂ ಜೀವನದಲ್ಲಿ ಕಂಗೆಡದಿರುವುದು):

ಆತ್ಮ ಭರವಸೆ ಇದ್ದಾಗ ನಮ್ಮನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ. ನಿಜವಾದ ಜ್ಞಾನಿ ಎಂದೂ ಅಂಜುಬುರುಕನಾಗಿ ಧೃತಿಗೆಡುವುದಿಲ್ಲ. “ಮುಂದೆ ಹೀಗಾಗಬಹುದು” ಎಂದು ಮನಸ್ಸಿನಲ್ಲಿ ಯೋಚಿಸಿಕೊಂಡು ಕೊರಗುವುದು ಜೀವನವಲ್ಲ, ಬದಲಿಗೆ ಏನೇ ಬಂದರು ಅದನ್ನು ಎದುರಿಸುವ ಶಕ್ತಿ ಭಗವಂತ ನನಗೆ ಕೊಡುತ್ತಾನೆ ಎನ್ನುವ ಧೃಡವಾದ ಆತ್ಮಶಕ್ತಿ ಧೃತಿ. ವಿಷಮ ಪರಿಸ್ಥಿತಿ(crisis)ಯನ್ನು ಎದುರಿಸಿಕೊಂಡು ಬದುಕುವುದೇ ಜೀವನ. ಅನಿರೀಕ್ಷಿತ ಆಪತ್ತು ಜೀವನದಲ್ಲಿ ಸಾಮಾನ್ಯ. ಅದನ್ನು ತಿಳಿದು ಆತ್ಮವಿಶ್ವಾಸದಿಂದ ಬದುಕು. ಆಗಬಾರದ್ದು ಈ ಜಗತ್ತಿನಲ್ಲಿ ಎಂದೂ ಆಗುವುದಿಲ್ಲ, ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಮ್ಮ ರಕ್ಷಣೆಯ ಭಾರ ಸರ್ವನಿಯಾಮಕ ಭಗವಂತನದು. ಹೀಗಿರುವಾಗ ಭಯವೇಕೆ?


(೨೪) ಶೌಚಮ್:

ಶೌಚ ಎಂದರೆ ಒಳಗೂ ಹೊರಗೂ ಸ್ವಚ್ಚವಾಗಿರುವುದು. ಸಮಾಜದಲ್ಲಿ ನಮ್ಮಿಂದಾಗಿ ಇತರರಿಗೆ ತೊಂದರೆಯಾಗಬಾರದು. ನಮ್ಮ ಮೈಮನ ಸ್ವಚ್ಛವಾಗಿರುವಂತೆ ನಾವು ನೋಡಿಕೊಳ್ಳಬೇಕು.


(೨೫) ಅದ್ರೋಹಃ:

ಇನ್ನೊಬ್ಬರ ಬಗ್ಗೆ ದ್ರೋಹ ಚಿಂತನೆ ಮಾಡದಿರುವುದು. ಇನ್ನೊಬ್ಬರಿಗೆ ಎರಡೆಣಿಸಬೇಡ. ಇನ್ನೊಬ್ಬರಿಗೆ ಕೆಟ್ಟದಾಗಲಿ ಎಂದು ಕನಸಿನಲ್ಲೂ ಬಯಸಬೇಡ.


(೨೬) ನಾತಿಮಾನಿತಾ:

‘ಅತಿಮಾನ’ ಅಂದರೆ ನನ್ನ ಬಗ್ಗೆ ನಾನು ಅತಿ ಹೆಗ್ಗಳಿಕೆ ಕಲ್ಪಿಸಿಕೊಂಡು ಬೀಗುವುದು. ಕೃಷ್ಣ ಹೇಳುತ್ತಾನೆ: “ನಿನ್ನ ಬಗ್ಗೆ ನೀನು ಎಂದೂ ಅತಿಯಾದಂತಹ ಅಹಂಕಾರ ತಾಳಬೇಡ” ಎಂದು. ಹೀಗೆ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಇಪ್ಪತ್ತಾರು ಗುಣಗಳನ್ನು ಹೇಳಿ ಕೃಷ್ಣ ಹೇಳುತ್ತಾನೆ: ““ದೈವೀ ಸಂಪತ್ತನ್ನು ಬಯಸಿ ಹುಟ್ಟಿದವನಲ್ಲಿ ಈ ಗುಣಗಳಿರುತ್ತವೆ”. ಅಂದರೆ ಯಾರು ಹುಟ್ಟುವಾಗಲೇ ಸಾತ್ವಿಕತೆಯ ಅಭಿಲಾಷೆಯನ್ನು ಇಟ್ಟುಕೊಂಡು ಹುಟ್ಟುತ್ತಾರೋ ಅವರಿಗೆ ಸಹಜವಾಗಿ ಈ ಗುಣಗಳಿರುತ್ತವೆ. ಇವು ದೈವೀ ಸಂಪತ್ತು. ಮಾನವನು ಬೆಳಸಿಕೊಳ್ಳಬೇಕಾದ ಮಾನಸಿಕ ಸಂಪತ್ತು(Divine
Wealth).